ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕಿವಿ, ಮೂಗು ಹಾಗೂ ಗಂಟಲಿನಲ್ಲಿ ಯಾವುದೇ ರೀತಿಯ ತೊಂದರೆಗಳು ಕಂಡು ಬಂದಲ್ಲಿ ಅದನ್ನು ನಿರ್ಲಕ್ಷಿಸದೇ ವೈದ್ಯರ ಸಲಹೆಯ ಮೇರೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಿವಿ, ಮೂಗು ಹಾಗೂ ಗಂಟಲು ತಜ್ಞೆ ಡಾ. ಸ್ಪೂರ್ತಿ ಸಲಹೆ ನೀಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಬೊಮ್ಮನಕಟ್ಟೆ ನಗರ ಆರೋಗ್ಯ ಕೇಂದ್ರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೊಮ್ಮನಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿವಿ, ಮೂಗು ಮತ್ತು ಗಂಟಲಿನ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಹದಲ್ಲಿ ಕಿವಿ, ಮೂಗು ಹಾಗೂ ಗಂಟಲು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕಿವಿ ಮತ್ತು ಮೂಗಿನ ನಾಳಗಳು ನೇರವಾಗಿ ಗಂಟಲಿಗೆ ಪ್ರವೇಶ ಪಡೆದಿರುತ್ತದೆ. ಕಿವಿ ಸ್ವಚ್ಛಗೊಳಿಸಲು ಕಡ್ಡಿ ಅಥವಾ ಕಬ್ಬಿಣದ ವಸ್ತುಗಳನ್ನು ಬಳಸದೆ ಹತ್ತಿಯನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಶೀತವಾದಾಗ ಮೂಗು ಮತ್ತು ಗಂಟಲು ತುರಿಸುವಿಕೆ ಉಂಟಾಗುತ್ತದೆ. ಮನೆ ಮದ್ದನ್ನು ಬಳಸದೇ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಕ್ಕಳಿಗೆ ಪದೇ ಪದೆ ಗಂಟಲು ನೋವು ಬರುವುದು, ನೋವಿನಿಂದ ಜ್ವರ ಹೆಚ್ಚಾಗುವುದು, ಆಹಾರ ನುಂಗುವಾಗ ಅಸಾಧ್ಯವಾದ ನೋವು ಇದು ಗಂಟಲಿನ ಟಾನ್ಸಿಲ್ಸ್ ಸೋಂಕಿಗೆ ಒಳಗಾಗಬಹುದು. ಈ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ಬೊಮ್ಮನಕಟ್ಟೆ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Get in Touch With Us info@kalpa.news Whatsapp: 9481252093















