ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಕ್ಷೇತ್ರದ ಅಭಿವೃದ್ಧಿ ಎಂದರೆ ಅಲ್ಲಿನ ಜನರ ದೈನಿಕ ಸಮಸ್ಯೆಗಳಿಂದ ಮುಕ್ತಿ. ಅಂತಹ ಶಾಶ್ವತ ಯೋಜನೆ ಮಾಡುವುದೇ ಆಗಿದೆ. ಕುಡಿಯುವ ನೀರು, ರಸ್ತೆ, ವಿದ್ಯುದ್ದೀಪ.. ಹೀಗೆ ಆದ್ಯತೆ ಮೇಲೆ ಬರುವ ಮತ್ತೊಂದು ಪ್ರಮುಖ ಅಂಶ, ಸಾರಿಗೆ ಸಂಪರ್ಕ. ಈ ಬಗ್ಗೆ ಚಿಂತಿಸಲು ಸ್ಥಳೀಯ ಸಂಸ್ಥಗಳಿವೆ. ಆದರೆ ಅವುಗಳ ಪ್ರತಿನಿಧಿಗಳಿಗೆ ಪ್ರೇರಣೆ ನೀಡುವಲ್ಲಿ ಶಾಸಕರು ಮತ್ತು ಸಂಸದರ ಪಾತ್ರ ಬಹಳ ಪ್ರಮುಖವಾಗಿದೆ.
ಈ ದಿಸೆಯಲ್ಲಿ ಶಿವಮೊಗ್ಗ ಅದೃಷ್ಟವಂತ ಜಿಲ್ಲೆ. ಹಲವಾರು ರಾಜಕೀಯ ನಾಯಕರು ಮುಖ್ಯಮಂತ್ರಿಗಳಾಗಿ ಜಿಲ್ಲೆಯ ಪ್ರಗತಿಗೆ ಆಯಾಕಾಲಕ್ಕೆ ತಕ್ಕನಾಗಿ ಕೊಡುಗೆ ನೀಡಿದ್ದಾರೆ. ಬಹುಷಃ ಶ್ರೀ ಯಡಿಯೂರಪ್ಪನವರ ಅವಧಿಯಲ್ಲಿ ಆದಷ್ಟು ಪ್ರಗತಿಯ ವೇಗ ಹಿಂದೆ ಆಗಿರಲಿಕ್ಕಿಲ್ಲ. ಅಂತಹ ಪ್ರಗತಿಪರ ಕಾರ್ಯಕ್ರಮಗಳಿಗೆ ಮತ್ತಷ್ಟು ವೇಗ ನೀಡುವ ಪ್ರಯತ್ನ ಈಗ ಸಂಸದರಾಗಿರುವ ಯುವನಾಯಕ ಶ್ರೀ ಬಿ.ವೈ.ರಾಘವೇಂದ್ರ ಅವರಿಂದ ಆಗುತ್ತಿದೆ.
ಪ್ರಸ್ತುತ ಶಿವಮೊಗ್ಗದಿಂದ ವಿವಿಧೆಡೆ ರೈಲು ಸಂಪರ್ಕಕ್ಕೆ ಸಂಸದ ಬಿವೈಆರ್ ಹೊಸ ಸ್ಪರ್ಶ ನೀಡುತ್ತಿದ್ದಾರೆ. ತಿರುಪತಿ, ರೇಣಿಗುಂಟ, ಈಗ ವಾರಪೂರ್ತಿ ಬೆಂಗಳೂರು ಯಶವಂತಪುರಕ್ಕೆ ರೈಲು ವ್ಯವಸ್ಥೆ ಜಾರಿಗೆ ತರುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.
ಶಿವಮೊಗ್ಗ ಹಾಗೂ ಸುತ್ತಮುತ್ತಲ ಪ್ರದೇಶದ ವ್ಯವಹಾರಸ್ಥರೇ ಅಲ್ಲದೇ ಮಿಕ್ಕ ದೈನಂದಿನ ಪ್ರಯಾಣಿಕರಿಗೂ ಈ ಸಾರಿಗೆ ಸೌಲಭ್ಯ ಸಾರ್ಥಕವಾಗಿ ಕಂಡಿದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಈ ರೈಲು ಸಂಪರ್ಕ ಹೆಚ್ಚಿನ ಒತ್ತು ನೀಡುತ್ತದೆ.
ಶಿಕಾರಿಪುರ ಉಡುತಡಿ, ಕಲ್ಲೂರು ಮಂಡ್ಲಿ ಮತ್ತು ಶಿವಪ್ಪನಾಯಕ ಅರಮನೆ ಧ್ವನಿ ಬೆಳಕು ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸಂಸದರು ಹೆಚ್ಚಿನ ಆಸಕ್ತಿ ತೋರಿಸಿ ಪ್ರವಾಸಿಗರನ್ನು ಆಕರ್ಷಿಸಲು ಉದ್ಯುಕ್ತರಾಗಿದ್ದಾರೆ. ಪ್ರವಾಸಿ ಮಾರ್ಗಸೂಚಿಯನ್ನು ಅತ್ಯಂತ ನಾವಿನ್ಯವಾಗಿ ಆಲೋಚಿಸಿ ಜಾರಿಗೆ ತರಲು ಅವಿರತ ಶ್ರಮಿಸುತ್ತಿದ್ದಾರೆ.
ಶಿವಮೊಗ್ಗ-(ಬೆಂಗಳೂರು) ಯಶವಂತಪುರ ರೈಲು ಸಂಪರ್ಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯಲಿದೆ. ಈ ಮಾರ್ಗದ ರೈಲು ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲ ಪರೋಕ್ಷವಾಗಿ ಜಿಲ್ಲೆಯ ವ್ಯಾಪಾರ, ವ್ಯವಹಾರ, ರಾಜಧಾನಿಯೊಂದಿಗಿನ ಸಂಪರ್ಕದ ಅವಧಿಯನ್ನು ಕಡಿಮೆಗೊಳಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಸಂಸದರನ್ನು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಶ್ರೀ ಲಕ್ಷ್ಮೀನಾರಾಯಣ ಕಾಶಿ ಮತ್ತು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಿರಿಯ ಸಲಹಾ ಸಂಪಾದಕ ಡಾ.ಸುಧೀಂದ್ರ, ಪ್ರಧಾನ ಸಂಪಾದಕ ಎಸ್.ಆರ್. ಅನಿರುದ್ಧ ವಸಿಷ್ಠ ಹಾಗೂ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ಉಪಾಧ್ಯಕ್ಷ ಕೆ.ಜಿ. ಮಂಜುನಾಥ ಶರ್ಮ ಅವರುಗಳು ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರನ್ನು ಅಭಿನಂದಿಸಿದ್ದಾರೆ. ಸಂಸದರಾಗಿ ಬಿವೈಆರ್ ಅವರ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಅತ್ಯಧಿಕ ಪ್ರಗತಿ ಸಾಧಿಸಲಿ ಎಂದು ಹಾರೈಸಿದ್ದಾರೆ. ಸದ್ಯ ವಿಮಾನ ನಿಲ್ದಾಣದ ಕಾಮಗಾರಿಯೂ ತ್ವರಿತವಾಗಿ ಸಂಸದ ರಾಘವೇಂದ್ರರ ನೇತೃತ್ವದಲ್ಲಿ ಶೀಘ್ರಪೂರ್ಣವಾಗಲಿ. ಶಿವಮೊಗ್ಗ ಜಿಲ್ಲಾಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಯಾಮ ದೊರಕಿ ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಸಿಗುವಾಂತಾಗಲಿ ಎಂದು ಹಾರೈಸುತ್ತಾರೆ.
Get in Touch With Us info@kalpa.news Whatsapp: 9481252093
Discussion about this post