ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಗ್ರಾಮೀಣ ಜನತೆಗೆ ಕಂದಾಯ ಇಲಾಖೆಯಲ್ಲಿನ ಪಿಂಚಣಿ ಸೌಲಭ್ಯಗಳು ಸುಲಭವಾಗಿ ದೊರೆತಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಮುಖಂಡ ಬಿ.ಪಿ. ಅಶ್ವತ್ಥನಾರಾಯಣಗೌಡ ತಿಳಿಸಿದರು.
ತಾಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಉದ್ಧೇಶಿಸಿ ಅವರು ಮಾತನಾಡಿದರು.
ಇಲಾಖೆ ವತಿಯಿಂದ ದೊರೆಯುವ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ಸಾಕಷ್ಟು ಮಂದಿ ಅರ್ಹ ಫಲಾನುಭವಿಗಳು ವಂಚಿತರಾಗಿದ್ದಾರೆ. ಕಚೇರಿಗೆ ನಿತ್ಯ ಅಲೆದು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ನಿರಾಶರಾಗಿದ್ದಾರೆ. ಅವರ ಜೀವನಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಗ್ರಾಮದಲ್ಲಿಯೇ ಪಿಂಚಣಿ ಅದಾಲತ್ ಆಯೋಜಿಸಿ ಇದರ ಮೂಲಕ ಪ್ರತಿಯೊಬ್ಬ ಫಲಾನುಭವಿಗೆ ಪಿಂಚಣಿ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ ಎಂದರು.
ಕಂದಾಯ ನಿರೀಕ್ಷಕರಾದ ಜೈ ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದ ಬಹುತೇಕರು ಪಿಂಚಣಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಅವರ ಅನುಕೂಲಕ್ಕಾಗಿ ಇಲಾಖೆಯ ಅಧಿಕಾರಿಗಳು ಅದಾಲತ್ ಮೂಲಕ ಸಂಬಂಧಪಟ್ಟ ದಾಖಲೆಗಳನ್ನು ್ಪಡೆದು ನಿಗಧಿತ ವೇಳೆಯಲ್ಲಿ ಪ್ರಮಾಣಪತ್ರ ನೀಡಿ ಪಿಂಚಣಿ ಭಾಗ್ಯವನ್ನು ಕಲ್ಪಿಸಲಾಗುವುದು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರ ಸಹಕಾರದಿಂದ ಇಂತಹ ಜನಪರವಾದ ಕಾರ್ಯಗಳು ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಇಒ ಎನ್. ಮುನಿರಾಜು, ಉಪತಹಸೀಲ್ದಾರ್ ಸುಬ್ರಹ್ಮಣ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷರಾದ ಗೋಪಾಲ್, ಪಿಡಿಓ ಬಸವರಾಜು, ಗ್ರಾಮ ಲೆಕ್ಕಾಧಿಕಾರಿ ಬಸಪ್ಪ ಅಜ್ಜಪ್ಪನರ್ವ, ಗ್ರಾಪಂ ಸದಸ್ಯರಾದ ಸುವರ್ಣ, ರಾಧಮ್ಮ, ರಂಗಪ್ಪ, ಉಮಾದೇವಿ ಶ್ರೀನಿವಾಸ ರೆಡ್ಡಿ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post