ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಖಾಸಗಿ ಸಂಸ್ಥೆಯೊಂದು ಶಿವಮೊಗ್ಗ ನಿದಿಗೆ ಕೆರೆಯಲ್ಲಿ ಬೋಟಿಂಗ್ ವಿಹಾರ ಮತ್ತು ಮೀನು ಕೃಷಿ ವ್ಯವಹಾರ ನಡೆಸುತ್ತಿದೆ. ಕೆರೆಯ ಸುತ್ತಲ ಸುಮಾರು ನಲವತ್ತು ರೈತರ ಕೃಷಿಗೆ ಈ ವಿಹಾರ ಅಭಿವೃದ್ಧಿ ದೆಸೆಯಿಂದ ತೊಂದರೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅಲ್ಲಿನ ರೈತರ ಅಹವಾಲು ಇಷ್ಟೇ. ಸುತ್ತಲ ಕೃಷಿ ಗದ್ದೆ ತೋಟಗಳ ನಾಲಾ ನೀರು ಬಸಿದು ನಿದಿಗೆ ಕೆರೆಗೆ ಸುಲಲಿತ ಹರಿಯಗೊಡಬೇಕು. ಆದರೆ ಅಲ್ಲಿ ಖಾಸಗಿ ಸಂಸ್ಥೆಯವರು ಕೆರೆಯ ಜಾಗದಲ್ಲಿ ಮಣ್ಣುತುಂಬಿ ಬೇರೆ ಉದ್ದೇಶಕ್ಕೆ ಅಭಿವೃದ್ಧಿ ಮಾಡುತ್ತಿದ್ದಾರೆ. ಕೆರೆಗೆ ಹರಿಯಬೇಕಾದ ನೀರನ್ನು ಬಲವಂತವಾಗಿ ತಡೆಯಲಾಗಿದೆ. ಹೀಗಾಗಿ ಗದ್ದೆ ಮತ್ತು ತೋಟದ ನೆಲದಲ್ಲಿ ನೀರು ನಿಂತುಕೊಂಡು ಕೆರೆಗೆ ಹೋಗುತ್ತಿಲ್ಲ! ಸಸಿಗಳು ಜೌಗುಪ್ರದೇಶದಲ್ಲಿ ಬೆಳೆಯಲಾರದೇ ಸಾಯುತ್ತಿವೆ.
ಈ ಸಂಗತಿಯನ್ನು ಹಿರಿಯ ಕೃಷಿಕ ಅಂದಾನಪ್ಪ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಹಂಚಿಕೊಂಡರು.
ಖಾಸಗಿ ಸಂಸ್ಥೆಯ ಸ್ನೇಹಿತರು ತಮ್ಮ ಉದ್ದಿಮೆ ಬೆಳೆಸಿಕೊಳ್ಳಲಿ, ಆಕ್ಷೇಪವಿಲ್ಲ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿದ ಸಾಫಲ್ಯ ಅವರದಾಗುತ್ತದೆ. ಕೆರೆಯ ಸ್ವರೂಪ, ನೈಸರ್ಗಿಕವಾಗಿರಲಿ, ಬದಲಾಗದೇ ಇರಲಿ.
ಆದರೆ ಸುತ್ತಲ ರೈತರ ಕೃಷಿಗೆ ಮಾರಕವಾಗಿರುವ ತಮ್ಮ ಪ್ರಯತ್ನವನ್ನು ಕೈಬಿಡಲಿ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅವರ ಉದ್ದಿಮೆ ಪ್ರಫುಲ್ಲಿತವಾಗಿ ಬೆಳೆಯುತ್ತದೆ. ರೈತಸ್ನೇಹಿಯಾಗಲಿ. ಆಗ ಕೆರೆ, ರೈತರ ಕೃಷಿ, ಬೋಟಿಂಗ್ ಉದ್ದಿಮೆ ಎಲ್ಲವನ್ನೂ ಸಮಾಜ ನೋಡಿ ಖುಷಿ ಪಡುತ್ತದೆ.
ಇತ್ತಕಡೆ ಸಾರ್ವಜನಿಕ ಮನೋರಂಜನೆ, ಹಿನ್ನೆಲೆಯಲ್ಲಿ ರೈತರ ಕಣ್ಣೀರು!! ಯಾರಿಗೆ ದಿಟವಾದ ಸಂತೋಷ? ಇದನ್ನು ಅನುಭವಿಸುವ ಅವಕಾಶಕ್ಕಾಗಿ ರಜಾದಿನಗಳಲ್ಲಿ ಅಲ್ಲಿಗೆ ಬರುವುದು ಉಚಿತವೇ? ಎಲ್ಲರೂ ನಕ್ಕರೆ… ಅದು ಹಾಲು ಸಕ್ಕರೆ.. ಹೌದಲ್ಲವೇ?
ಸರ್ಕಾರ, ಮುಖಂಡರು ಈ ಬಗ್ಗೆ ಮುಂಜಾಗ್ರತೆ ವಹಿಸಿದರೆ ಮುಂದೆ ನಡೆಯಲಿರುವ ಹೆದ್ದಾರಿ ತಡೆ, ಉಪವಾಸ ಸತ್ಯಾಗ್ರಹ, ಪೊಲೀಸ್ ಪ್ರವೇಶ, ರೈತ ಚಳವಳಿ, ಪರಿಸರ ಸಂಘಟನೆಗಳ ಹರತಾಳ… ಇತ್ಯಾದಿ ಫಲಿತಾಂಶಕ್ಕೆ ಕಾಯಬೇಕಾದೀತು.
ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಯಾಕೆ ಹೇಳಿ?
ಯಾರೂ ಸಹ ಒಂದು ಉದ್ದಿಮೆ ಚೆನ್ನಾಗಿ ಬೆಳೆಯುತ್ತಿದೆ ಎಂದರೆ ಸಂತೋಷ ಪಡುತ್ತಾರೆ. ಆದರೆ, ನೈಸರ್ಗಿಕ ಪರಿಸರದ ನಡುವೆಯೇ ಇಂತಹ ಉದ್ಯಮ ನಡೆಯುವ ವೇಳೆ ಅದರಿಂದ ಸುತ್ತಮುತ್ತಲಿನ ಕೃಷಿಕರ ಮೇಲೆ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳ ಕುರಿತಾಗಿಯೂ ಸಹ ಚಿಂತಿಸಬೇಕಾದ್ದು ಅಗತ್ಯ.
ಶಿವಮೊಗ್ಗ-ಭದ್ರಾವತಿ ಮಟ್ಟಿಗೆ ನಿದಿಗೆ ಕೆರೆಯಲ್ಲಿ ಇಂತಹುದ್ದೊಂದು ಬೋಟಿಂಗ್ ವ್ಯವಸ್ಥೆ ಆರಂಭವಾದಾಗ ಎಲ್ಲರೂ ಸ್ವಾಗತಿಸಿದ್ದರು. ನಾವೂ ಸಹ ಸಂತೋಷ ಪಟ್ಟಿದ್ದೇವೆ. ಆದರೆ, ಇದರಿಂದ ಸುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಾಗಿ ನ್ಯಾಯಯುವಾಗಿ ಎರಡೂ ಕಡೆ ನಾವು ಚಿಂತಿಸಲೇಬೇಕಾಗುತ್ತದೆ.
ಯಾವುದೇ ವಿಚಾರವಿರಲಿ, ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ. ರೈತರು ಆರೋಪ ಮಾಡುವಂತೆ ಅವರಿಗೆಲ್ಲಾ ತೊಂದರೆಯಾಗುತ್ತಿದೆ ಎಂದರೆ ಅದನ್ನು ಸರಿಪಡಿಸುವುದು ಸಂಸ್ಥೆ ಸೇರಿದಂತೆ ವ್ಯವಸ್ಥೆಯ ಕರ್ತವ್ಯವಾಗುತ್ತದೆ.
ಸಾರ್ವಜನಿಕರಿಗೆ ಕೃಷಿಕರ ಹಿತ ಎಷ್ಟು ಮುಖ್ಯವಾಗುತ್ತದೋ, ಮನೋರಂಜನೆಗಾಗಿ ಇಂತಹ ವ್ಯವಸ್ಥೆಗಳೂ ಸಹ ಬೇಕಾಗುತ್ತದೆ. ಆದರೆ, ಇಂತಹ ಮನೋರಂಜನಾ ಕೇಂದ್ರಗಳನ್ನು ಆರಂಭಿಸುವಾಗ ಸರ್ಕಾರ ವಿಧಿಸಿರುವ ಷರತ್ತುಗಳ ಪಾಲನೆಯೂ ಸಹ ಮುಖ್ಯವಾಗುತ್ತದೆ.
ಪ್ರಸ್ತುತ ರೈತರ ಆರೋಪಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಸಂಬಂಧಿಸಿದ ರೈತರು ಹಾಗೂ ಸಂಸ್ಥೆಯವರು ಒಟ್ಟಾಗಿ ಕುಳಿತು ಉದ್ಭವಿಸಿರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಒಳಿತು. ಇದಕ್ಕೆ ಆಡಳಿತ ವ್ಯವಸ್ಥೆ, ಜಿಲ್ಲಾಡಳಿತ, ನೀರಾವರಿ ಇಲಾಖೆ ಮಧ್ಯಸ್ಥಿಕೆ ವಹಿಸಬೇಕಿದ್ದು, ಕೃಷಿಕರಿಗೂ ಅನ್ಯಾಯವಾಗದಂತೆ, ಮನೋರಂಜನಾ ಕೇಂದ್ರದ ಸಂಸ್ಥೆಯವರಿಗೂ ತೊಂದರೆಯಾಗದಂತೆ ನಿರ್ಣಯ ಕೈಗೊಳ್ಳಬೇಕಿದೆ.
ಇಲ್ಲದೇ ಹೋದರೆ, ಮುಂದಿನ ದಿನಗಳಲ್ಲಿ ರೈತರಿಂದ ಹೆದ್ದಾರಿ ತಡೆ, ಚಳವಳಿ, ಹರತಾಳುಗಳು ಆರಂಭವಾಗಿ ಅನಾವಶ್ಯಕವಾಗಿ ಪರಿಸ್ಥಿತಿ ಹದಗೆಡಲು ಅವಕಾಶವಾಗಬಾರದು.
-ಡಾ.ಎನ್. ಸುಧೀಂದ್ರ
Get in Touch With Us info@kalpa.news Whatsapp: 9481252093
Discussion about this post