ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀರಾಘವೇಂದ್ರ ಗುರುಸಾರ್ವಭೌಮರು 16 ನೆಯ ಶತಮಾನದ ಸಂತ ಶ್ರೇಷ್ಠರು. ಶ್ರೀ ರಾಘವೇಂದ್ರ ಸ್ವಾಮಿಗಳ ಅನನ್ಯ ಭಕ್ತರು ದೇಶ, ವಿದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಪ್ರದೇಶಗಳಾದ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಪ್ರತಿ ವರ್ಷ ಫಾಲ್ಗುಣಮಾಸದ ಶುಕ್ಲಪಕ್ಷದ ದ್ವಿತೀಯ ದಿನವನ್ನು ಶ್ರೀರಾಯರ ಪಟ್ಟಾಭಿಷೇಕ ದಿನವನ್ನಾಗಿ ಆಚರಿಸಲಾಗುತ್ತದೆ. ಫಾಲ್ಗುಣ ಶುಕ್ಲಪಕ್ಷದ ಸಪ್ತಮಿದಿನವನ್ನು ಶ್ರೀರಾಯರ ವರ್ಧಂತಿ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.
ಗೌತಮ ಗೋತ್ರದ ಬೀಗಮುದ್ರೆಯ ಮನೆತನದವರಾದ ವೀಣಾಕನಕಾಚಲ ಭಟ್ಟರೆಂದೇ ಖ್ಯಾತಿ ಪಡೆದವರ ಪುತ್ರರು ತಿಮ್ಮಣ್ಣ ಭಟ್ಟರು. ಇವರೂ ಕೂಡ ತಮ್ಮ ಪೂರ್ವಜರಂತೆ ಆಚಾರ್ಯರ ಶಾಸ್ತ್ರದಲ್ಲಿ ಹಾಗೂ ವಂಶವಿದ್ಯೆಯಾದ ವೀಣೆಯಲ್ಲಿ ಪ್ರಾವೀಣ್ಯತೆ ಪಡೆದವರು.
ಇವರ ಸುಪುತ್ರರೇ ಶ್ರೀವೆಂಕಟನಾಥಾಚಾರ್ಯರು. ವೆಂಕಟನಾಥರೇ ಶ್ರೀಸುಧೀಂದ್ರ ತೀರ್ಥ ಗುರುಗಳಿಂದ ಸನ್ಯಾಸ ದೀಕ್ಷೆ ಪಡೆದು ಶ್ರೀರಾಘವೇಂದ್ರ ಗುರುಸಾರ್ವಭೌಮರಾಗಿ ವೇದಾಂತ ಸಾಮ್ರಾಜ್ಯದ ಪೀಠವನ್ನಲಂಕರಿಸಿದ ಯತಿವರೇಣ್ಯರು.
ಸನ್ಯಾಸ ದೀಕ್ಷೆಯನ್ನು ಫಾಲ್ಗುಣ ಶುಕ್ಲಪಕ್ಷದ ದ್ವಿತೀಯಾ ದಿನದಂದು ಶ್ರೀಸುಧೀಂದ್ರ ತೀರ್ಥರಿಂದ ಸ್ವೀಕರಿಸುತ್ತಾರೆ. ಈ ದಿನವನ್ನು ಶ್ರೀಗುರುಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವದ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಾಮಹಿಮರಾದ ಶ್ರೀಗುರುರಾಯರು ಹುಟ್ಟಿದ ಮಂಗಳಕರವಾದ ದಿನವಾದ ಫಾಲ್ಗುಣ ಶುಕ್ಲಪಕ್ಷದ ಸಪ್ತಮಿಯನ್ನು ಶ್ರೀರಾಯರ ವರ್ಧಂತಿ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ಒಂದು ವಾರದ ಕಾಲದಲ್ಲಿ ಶ್ರೀರಾಯರಿಗೆ ವಿಶೇಷ ಉತ್ಸವ, ಪೂಜೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಶ್ರೀರಾಘವೇಂದ್ರ ಸಪ್ತಾಹ ಎಂದೂ ಆಚರಿಸುತ್ತಾರೆ.
ಜನರ ಕಷ್ಟಗಳ ನಿವಾರಣೆಗೆ ಮತ್ತು ಲೋಕೋದ್ಧಾರಕ್ಕಾಗಿ ಅವತರಿಸಿದ ಮಹಾನುಭಾವರು ಶ್ರೀರಾಘವೇಂದ್ರ ಸ್ವಾಮಿಗಳು. ಯಾರು ರಾಯರನ್ನು ದೃಢ ಭಕ್ತಿಯಿಂದ ತಮ್ಮ ಇಷ್ಟಾರ್ಥ, ಸಿದ್ಧಿಗಾಗಿ ಮೊರೆ ಹೋಗುತ್ತಾರೋ ಅಂತಹವರ ಬೇಡಿಕೆಗಳನ್ನು ಈಡೇರಿಸುವ ಕರುಣಾಮಯಿಗಳು ಶ್ರೀ ಗುರುರಾಯರು.
ರಾಯರನ್ನು ನಂಬಿ ಕೆಟ್ಟವರಿಲ್ಲ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಮನುಷ್ಯನ ಆತ್ಮ ಜ್ಞಾನಕ್ಕೆ ಪ್ರತಿಯೊಬ್ಬರ ಬದುಕಿನಲ್ಲಿ ಓರ್ವ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಅಂತಹ ಗುರುಗಳ ಪಂಕ್ತಿಯಲ್ಲಿ ಅಗ್ರಸ್ಥಾನ ಪಡೆದಿರುವವರು ಶ್ರೇಷ್ಠ ಗುರುಗಳಾದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರು.
ರಾಯರು ಓರ್ವ ಮಹಿಮಾ ಪುರುಷರು. ಶ್ರೀರಾಯರು ಅವರ ಪೂರ್ವಾಶ್ರಮದಲ್ಲಿ(ವೆಂಕಟನಾಥರು) ಅವರ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭಕ್ಕೆ ಹೋಗಿದ್ದಾಗ ಅವರಿಗೆ ಆಹ್ವಾನ ಕೊಟ್ಟವರು ಸರಿಯಾದ ಗೌರವ ಕೊಡದೆ ಅವರಿಗೆ ಗಂಧ ತೇಯುವ ಕೆಲಸವನ್ನು ಕೊಟ್ಟರು. ಗಂಧವನ್ನು ಹಚ್ಚಿಕೊಂಡ ಬ್ರಾಹ್ಮಣರಿಗೆ ಮೈಯೆಲ್ಲಾ ಉರಿಯಾಗಿ ಒದ್ದಾಟ ಪ್ರಾರಂಭವಾಯಿತು. ಕಾರ್ಯಕ್ರಮ ನಿರ್ವಾಹಕರಿಗೆ ತಕ್ಷಣ ಆಗಿರುವ ಪ್ರಮಾದವನ್ನರಿತು ವೆಂಕಟನಾಥರನ್ನು ಒದಗಿರುವ ಈ ಸಂದಿಗ್ಧ ಪರಿಸ್ಥಿತಿಯಿಂದ ಪಾರು ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ತಕ್ಷಣ ವೆಂಕಟನಾಥರು ವರುಣ ಸೂಕ್ತವನ್ನು ಪಠಿಸಿ ಎಲ್ಲರ ಮೈಯಲ್ಲಾದ ಉರಿಯನ್ನು ತಮ್ಮ ಮಂತ್ರ ಶಕ್ತಿಯಿಂದ ಶಮನಗೊಳಿಸುತ್ತಾರೆ.
ರಾಯರು ತಮ್ಮ ಶಿಷ್ಯನೊಬ್ಬನು ತನ್ನ ಕಡು ಬಡತನದ ಬಗ್ಗೆ ಅರಿಕೆ ಮಾಡಿಕೊಂಡಾಗ ಗುರುಗಳು ಒಂದು ಹಿಡಿ ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸುತ್ತಾರೆ. ಶಿಷ್ಯನು ತನ್ನ ಮನೆಗೆ ಹೋಗುವಾಗ ಕತ್ತಲಾಗಿದ್ದರಿಂದ ದಾರಿಯಲ್ಲಿ ಸಿಕ್ಕ ಒಂದು ಮನೆಯ ಜಗಲಿಯ ಮೇಲೆ ತನ್ನ ಮಂತ್ರಾಕ್ಷತೆಯ ಗಂಟಿನೊಂದಿಗೆ ಮಲಗುತ್ತಾನೆ.
ಆ ಮನೆಗೆ ಪಿಶಾಚಿ ಬಾಧೆ ಇರುತ್ತದೆ. ಆ ದಿನವು ಎಂದಿನಂತೆ ಪಿಶಾಚಿ ಬರಲು ಶ್ರೀರಾಯರ ಮಂತ್ರಾಕ್ಷತೆ ಪ್ರಭಾವದಿಂದ ಮನೆಯೊಳಗೆ ಹೋಗಲಾಗದೇ ಹೊರಗಡೆಯೇ ಸುಟ್ಟು ಭಸ್ಮವಾಗುತ್ತದೆ. ಅಂದೇ ಆ ಮನೆಯಲ್ಲಿ ಮನೆಯೊಡತಿಗೆ ಮಗು ಹುಟ್ಟುತ್ತದೆ. ಆ ಮನೆಯಲ್ಲಿ ಮಗು ಹುಟ್ಟುವ ಪ್ರತಿ ಸಂದರ್ಭದಲ್ಲಿಯೂ ಪಿಶಾಚಿಯ ಕಾಟದಿಂದ ಹುಟ್ಟುವ ಮಕ್ಕಳು ಸತ್ತು ಹೋಗುತ್ತಿದ್ದವು. ಆದರೆ ಈ ಬಾರಿ ಮಂತ್ರಾಕ್ಷತೆಯ ಪ್ರಭಾವದಿಂದ ಹುಟ್ಟಿದ ಮಗು ಬದುಕಿತು, ಪಿಶಾಚಿ ಸುಟ್ಟು ಭಸ್ಮವಾಯಿತು.
ಹರಿದಾಸರಲ್ಲಿ ಅಗ್ರಗಣ್ಯರಾಗಿದ್ದ ಶ್ರೀಜಗನ್ನಾಥದಾಸರಿಗೂ ಅವರಿಗೆ ಬಂದಿದ್ದ ವ್ಯಾಧಿ ಪರಿಹಾರಕ್ಕೆ ದಾರಿ ತೋರಿಸಿದ ಮಹಾನುಭಾವರು. ತಮ್ಮ ಅಪೂರ್ವ ತಪಃಶಕ್ತಿಯ ಬಲದಿಂದ ದೇಹೀ ಎಂದು ಬರುವ ಭಕ್ತರ ಮನಸ್ಸಿನ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸುವ ಕಲಿಯುಗದ ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರು.
ಶ್ರೀಗುರುರಾಯರು ಹುಟ್ಟಿದ್ದು ತಮಿಳುನಾಡಿನ ಭುವನಗಿರಿಯಲ್ಲಿ ಮತ್ತು ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ್ದು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ.
ಶ್ರೀಗುರುರಾಜರ ನಾಲ್ಕು ನೂರ ಇಪ್ಪತ್ತೈದನೆಯ ವರ್ಧಂತಿ ಉತ್ಸವದ ಸಂದರ್ಭದಲ್ಲಿ, ಭಕ್ತಿಯ ನಮನಗಳನ್ನು ಅರ್ಪಿಸಿ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಿ ಅನುಗ್ರಹಿಸುವಂತೆ ಶ್ರೀರಾಯರಲ್ಲಿ ಪ್ರಾರ್ಥಿಸೋಣ.
Get in Touch With Us info@kalpa.news Whatsapp: 9481252093
Discussion about this post