ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಣಾಂತಿಕ ಕರೋನ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುಳ್ಳು ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಅವರು, ಜಿಲ್ಲೆಗೆ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದೆ ಅಲ್ಲದೆ ಅಂತಹ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದಿದ್ದಾರೆ.
ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆ ಇದಾಗಿದೆ. ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ ಹರಡುತ್ತದೆ. ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಅಂತಹ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೇ ಬಳಸಿದಾಗ, ಸ್ವಚ್ಚಗೊಳಿಸದ, ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಈ ಕಾಯಿಲೆ ಹರಡಲಿದೆ. ಆದ್ದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಅವರು ತಿಳಿಸಿದ್ದಾರೆ.
ಕರೋನಾ ವೈರಸ್ ಪ್ರಾಣಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯೂಮೋನಿಯ ಮತ್ತು ಬೇಧಿ ಮುಂತಾದವು ಸೋಂಕಿನ ಲಕ್ಷಣಗಳಾಗಿವೆ. ಇದರ ಪತ್ತೆಗೆ ಸೋಂಕಿನ ಲಕ್ಷಣ ಕಂಡು ಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ, ಸೋಂಕನ್ನು ದೃಢಪಡಿಸಿಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಸೋಂಕಿನ ಕುರಿತು ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಆದರೆ, ಸಾರ್ವಜನಿಕರು ವಿದೇಶ ಪ್ರಯಾಣವನ್ನು ನಿರ್ಬಂಧಿಸುವುದು ಕ್ಷೇಮ. ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು, ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈತೊಳೆದುಕೊಳ್ಳುವುದು, ಕೆಮ್ಮುವಾಗ, ಸೀನುವಾಗ ಮಾಸ್ಕ್, ಕರವಸ್ತ್ರ ಉಪಯೋಗಿಸುವುದು ಸೂಕ್ತ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕುಪ್ರಾಣಿಗಳನ್ನು ಮುಟ್ಟಬಾರದಾಗಿ ಅವರು ಸೂಚಿಸಿದ್ದಾರೆ.
Get in Touch With Us info@kalpa.news Whatsapp: 9481252093






Discussion about this post