ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಸ್ಸಂಜೆಯ ಹೊತ್ತಲ್ಲಿ ತುಂತುರು ಮಳೆ ಹನಿಗೆ ತಂಪಾಗಿದ್ದ ಭೂಮಿಯ ಕಂಪಿನ ಸುವಾಸನೆಯ ಸವಿಯುತ್ತಾ, ಖಾಲಿ ರೋಡಲ್ಲಿ ಅಲ್ಲಲ್ಲಿ ನಿಂತಿದ್ದ ನೀರಿನ ಮೇಲೆ ಕಾಲನ್ನಾಡಿಸುತ್ತಾ ಬರುತ್ತಿದ್ದ ಮಡದಿಗೆಸಂತೂ, ಹೇ..ಚಿನ್ನ, ಏನಿದು ಚಿಕ್ಕ ಮಕ್ಕಳ ಹಾಗೆ ಮಳೆ ನೀರಿನಲ್ಲಿ ಆಡೋದು ರೋಡ್ ಸೈಡಲ್ಲಿ ಸುಮ್ಮನೆ ಬರಬಾರದಾ! ಎಂದರು. ಇವರೊಬ್ಬರು ನನ್ನ ಫ್ರೀಯಾಗಿ ಇರೋದಕ್ಕೆ ಬಿಡಲ್ಲ. ಚಿನ್ನ ಅದನ್ನ ಮಾಡಬೇಡ, ಇದನ್ನ ಮಾಡಬೇಡ, ಇವು ನನ್ನ ಪಿಎಚ್’ಡಿ, ಥೀಸಿಸ್ ಬುಕ್ ಅದನ್ನ ಮುಟ್ಟಬೇಡ, ಈ ಕೆಲಸ ಮಾಡಬೇಡ, ಸ್ಪಲ್ಪ ಗಂಭೀರವಾಗಿ ಇರೋದನ್ನ ಕಲಿ, ಬರೀ ಇದೇ ಆಯ್ತು ಒಂದು ದಿನಾವಾದ್ರೂ ನನ್ನೊಂದಿಗೆ ಪ್ರೀತಿಯಿಂದ ಮಾತಾಡ್ಸಿಲ್ಲ.
ಕಾಲೇಜಿನಿಂದ ಬಂದ ತಕ್ಷಣ ಪಿಎಚ್’ಡಿ ವರ್ಕ್ ಅಂತ, ಡಬ್ಬ ಲ್ಯಾಪ್’ಟಾಪ್ ಹಿಡ್ಕೊಂಡು ಕೂತ್ಕೋತಾರೆ. ಏನಾದ್ರೂ ಮಾತಾಡೋಣ ಅಂದರೆ, ಕಾಲೇಜಿನಲ್ಲಿ ಆ ಮಕ್ಕಳ ಕೈಲಿ ಹೆಣಗೋದು. ಅಟೆಂಡೆನ್ಸ್, ರೆಕಾರ್ಡ್ ಇದ್ರಲ್ಲೇ ತಲೆಕೆಟ್ಟೋಗುತ್ತೆ. ನೀನು ಈಗ ನನಗೆ ತೊಂದರೆ ಮಾಡ್ಬೇಡ ಪ್ಲೀಸ್, ನಿನ್ನ ಜೊತೆ ಬೆಳಗ್ಗೆ ಮಾತನಾಡುತ್ತೀನಿ ಅಂತಾರೆ.
ಇವತ್ತೇನೋ ಅಪರೂಪಕ್ಕೆ ನಮ್ಮವರು ಹೊರಗಡೆ, ಕರೆದುಕೊಂಡು ಬಂದಿದ್ದಾರೆ ಅಂತಾ ಖುಷಿ ಪಡುವ ಅಂದರೆ, ಈ ಮಾರಾಯ! ಮೂತಿ ಊದುಸ್ಕೊಂಡು ನಡಿತಿದ್ದಾರೆ ಎಂದು ಎದುರಿಗೆ ಇದ್ದ ಜೋಳದ ಅಂಗಡಿ ನೋಡಿ, ರೀ ಬನ್ನಿ ಜೋಳ ತಿನ್ನೋಣ ವೆದರ್’ಗೆ ತುಂಬಾ ಚೆನ್ನಾಗಿರುತ್ತೆ. ಬನ್ನಿ ಎಂದು ಕೈ ಹಿಡಿದು ಕರೆದುಕೊಂಡು ಹೋದಳು.
ತುಂಬಾ ದಿನಗಳ ನಂತರ ಇಬ್ಬರೂ ಒಟ್ಟಿಗೆ ಇರುವಂಥ ಅವಕಾಶ ಸಿಕ್ಕಿದ್ದು, ಹತ್ತಿರದಲ್ಲೇ ಇದ್ದ ಪಾರ್ಕ್‌ವೊಂದರ ಕಲ್ಲು ಬೆಂಚಿನ ಮೇಲೆ ಕುಳಿತರು. ಅದಾಗಲೇ ಸೂರ್ಯ ಮುಳುಗಲು ಸಿದ್ಧನಾಗಿದ್ದ. ಸಂಜೆ ಪಾರ್ಕಿಗೆ ವಾಕಿಂಗ್ ಎಂದು ಬರುವ ಗಿಜುಗುಡುವ ಜನ ಜಂಗುಳಿಯ ನಡುವೆಯೂ ಏಕಾಂತದ ಭಾವ. ಮದುವೆ ಆಗಿ ಇಷ್ಟು ದಿನಕ್ಕೆ ಪುಣ್ಯಾತ್ಮ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಮುದ್ದು ಇವನು ಅಂತಾ ಮನಸ್ಸಲ್ಲಿಯೇ ರಮಿಸುವುದಕ್ಕೆ ಶುರು ಮಾಡಿದ್ದಳು ಚಿನ್ನ. ಅಸಲಿಗೆ ನನ್ನ ಹೆಸರು ಸೃಷ್ಠಿ. ಪ್ರೀತಿಯ ಸಂತೂ ಮಾಸ್ಟರೇ ಚಿನ್ನ ಅಂತಾ ಕರೆದದ್ದು.
ಯೂನಿವರ್ಸಿಟಿಯ ಡಿಗ್ರಿ ಕಾಲೇಜ್‌ಗೆ ಫಸ್ಟ್ ಇಯರ್ ಅಡ್ಮಿಷನ್‌ಗೆ ಬಂದ ದಿನವೇ ಸಂತೋಷ್ ಮಾಸ್ಟರ್ ಜೊತೆ ಕಿರಿಕ್ ಮಾಡಿಕೊಂಡಿದ್ದಳು. ಪತ್ರಿಕೋದ್ಯಮದ ಬಗ್ಗೆ ಹೆಚ್ಚು ಒಲವು ಇದ್ದುದ್ದರಿಂದ ಕಲಾ ವಿಭಾಗಕ್ಕೆ ಅಡ್ಮಿಷನ್ ಪಡೆದಿದ್ದಳು. ವಾಣಿಜ್ಯ ವಿಭಾಗದವರಿಗೆ ಬೆಳಗ್ಗೆ ಮತ್ತು ಕಲಾ ವಿಭಾಗದವರಿಗೆ ಮಧ್ಯಾಹ್ನದ ಮೇಲೆ ತರಗತಿಗಳು ಆರಂಭವಾಗುತ್ತಿತ್ತು. ಪಿಯೂ ಓದುವಾಗ ಎಂಟು ಗಂಟೆಗೆ ಕಾಲೇಜಿಗೆ ಹೋಗುತ್ತಿದ್ದ ನಾನು, ಈಗ ಹನ್ನೆರಡು ಗಂಟೆಗೆ ಹೋಗೊದಲ್ವಾ ಅಂತಾ ಎದ್ದಿದ್ದು ಲೇಟಾಯ್ತು. ತರಾತುರಿಯಲ್ಲಿ ಹೊರಟು ಕಾಲೇಜು ತಲುಪಿ ಜರ್ನಲಿಸಂ ಡಿಪಾರ್ಟ್‌ಮೆಂಟ್ ಹುಡುಕುವುದರೊಳಗೆ ಸಾಕಾಗಿ ಹೋಗಿ, ಫಸ್ಟ್ ಡೇನೇ ಕ್ಲಾಸಿಗೆ ಲೇಟಾಯ್ತು ಅಂತಾ ಮನಸ್ಸಲ್ಲಿಯೇ ತನ್ನನ್ನ ತಾನು ಬೈಕೊಂಡು ಕ್ಲಾಸ್ ಒಳಗೆ ಹೋದರೆ, ಮತ್ತದೇ ಸಂತೋಷ್. ಅರೇ, ಈ ಹುಡುಗ ಅಡ್ಮಿಷನ್ ದಿನ ಬರೀ ಪೆನ್ ವಿಷ್ಯಕ್ಕೆ ಅಷ್ಟೊಂದು ಜಗಳ ಮಾಡಿದ. ನಾನ್ ಏನಾದರೂ ದಾರಿತಪ್ಪಿ ಬೇರೆ ಕ್ಲಾಸಿಗೆ ಬಂದ್ ಬಿಟ್ನಾ ಅಂತಾ ಬಾಗಿಲಲ್ಲಿಯೇ ಯೋಚಿಸುವಾಗ ಕಮ್’ಇನ್ ಅನ್ನೋ ಶಬ್ದಕ್ಕೆ ಬೆಚ್ಚಿ ಬಿದ್ದಿದ್ದೆ.
ಕ್ಲಾಸ್ ಇರೋದೆ ಲೇಟು ಅದ್ರಲ್ಲೂ ನೀವು ಇನ್ನೂ ಲೇಟಾಗಿ ಬರ್ತಿರಾ? ಫಸ್ಟ್ ಡೇ ಅಂತಾ ಸುಮ್ಮನೇ ಬಿಟ್ಟಿದ್ದೀನಿ. ನಾನ್ ಕ್ಲಾಸ್ ವಿಷ್ಯದಲ್ಲಿ ತುಂಬಾ ಸ್ಟ್ರಿಕ್ಟ್ ಆಯ್ತಾ. ಇನ್ಮುಂದೆ ಲೇಟಾಗಿ ಬರ್ಬೇಡಿ, ಹೋಗಿ ಕುತ್ಕೊಳೀ ಎಂದು ಅಟೆಂಡೆನ್ಸ್ ತಗೋಳೊವರೆಗೂ ಇವರು ಯಾರೂ ಅಂತಾನೆ ಗೊತ್ತಾಗಿರಲಿಲ್ಲ. ಆಮೇಲೆ ತಿಳಿದದ್ದು, ಇವರೇ ನಮ್ಮ ಜರ್ನಲಿಸಂ ಮೇಷ್ಟ್ರು ಮಿಸ್ಟರ್ ಸಂತೋಷ್ ಅಂತಾ. ಸ್ಮಾರ್ಟ್ ಅಂಡ್ ಯಂಗೆಸ್ಟ್ ಲೆಕ್ಚರರ್ ಅಂತಾ ಡಿಗ್ರಿ ಕಾಲೇಜ್‌ಗೆ ಫುಲ್ ಫೇಮಸ್.
ಅಂತೂ ದಿನಾ ಬೆಳಗ್ಗೆ ಒಳ್ಳೆ ಮೂತಿ ನೋಡ್ಕೊಂಡು ಪಾಠ ಕೇಳಬಹುದು. ಆದ್ರೂ ಅವತ್ತು ಇವರು ನನ್ನ ಬೈಬಾರದಿತ್ತು. ಇವ್ರ ಪೆನ್ ನಾನೇನು ಕದ್ಬಿಡ್ತಿದ್ನಾ? ಅಡ್ಮಿಷನ್‌ಗೆ ಬರುವಾಗ ಸೈನ್ ಮಾಡುವುದಕ್ಕಾದರೂ ಪೆನ್ ತರಬೇಕು ಅನ್ನೋ ಕಾಮನ್ ಸೆನ್ಸ್ ಬೇಡ್ವ ಅಂದ್ರಲ್ಲಾ ಸರ್. ಇವತ್ತು ಎರಡು ಪೆನ್ ತಂದೀದಿನಿ ಅಂತಾ ಹೇಳ್ಬೇಕು ಅನ್ಸುದ್ರೂ, ಬೇಡಪ್ಪ ಮೊದಲೇ ಮಿಸ್ಟರ್ ಪರ್ಫೆಕ್ಟ್ ತರ ಆಡ್ತಾ ಇದ್ದಾರೆ. ಇನ್ನೂ ಏನಾದ್ರೂ ಹೇಳಿದ್ರೆ ಅಷ್ಟೇ ನನ್ನ ಕಥೆ. ಬೇಡಪ್ಪ ಇವರ ಸಹವಾಸ ಅಂತಾ ನಗುತ್ತಾ ಸುಮ್ಮನಾಗಿದ್ದೆ.
ಇದಾದ ಮೇಲೆ ಎದುರಿಗೆ ಸಿಕ್ಕಾಗೆಲ್ಲ ಒಂದು ಮುಗುಳು ನಗೆ ಬೀರುತ್ತಾ ಮಾಸ್ಟರ್ ಇನ್ನಷ್ಟು ಹತ್ತಿವಾಗಿದ್ದರೂ. ಪ್ರತಿ ಸಂಜೆ ಮೇಷ್ಟ್ರು ಲೈಬ್ರೆûರಿಯಲ್ಲಿ ಕುಳಿತು ತನ್ನ ಪಿಎಚ್’ಡಿ ಸಲುವಾಗಿ ಓದುತ್ತಿದ್ದರು. ಕನ್ನಡ ಸಾಹಿತ್ಯ ಓದುವ ಹವ್ಯಾಸ ನನಗಿದ್ದರಿಂದ ನಾನು ಲೈಬ್ರರಿಗೆ ಹೋಗುತ್ತಿದ್ದೂ ನಿಜ. ಸಂತೋಷ್ ಸರ್ ದಿನಾ ಬರ್ತಾರೆ ಅನ್ನುವುದನ್ನ ಕೇಳಿ ನಾನು ಪ್ರತಿದಿನ ಹೋಗುವುದಕ್ಕೆ ಶುರು ಮಾಡಿದೆ. ಅಲ್ಲಿಂದ ಮಿಸ್ಟರ್ ಪರ್ಫೆಕ್ಟ್ ಸಂತೋಷ್ ಸರ್ ಸಂತೂ ಸರ್ ಆಗಿ ಬದಲಾದರು. ಪಾಠ ಕೇಳಿದ್ದಕ್ಕಿಂತ ಅವರ ಮುಖ ನೋಡುತ್ತಾ ಕೂತಿದ್ದೇ ಹೆಚ್ಚು.
ಹೇಳಿ ಕೇಳಿ ಹದಿಹರೆಯದ ವಯಸ್ಸು ಕಂಡದ್ದೆಲ್ಲಾ ಬೇಕು ಅನ್ಸೋದು ಸಹಜ. ನಾನು ಪ್ರೀತಿಯಲ್ಲಿ ಬೀಳಬೇಕು, ನನಗೂ ಗೆಳೆಯ ಬೇಕು ಅನ್ಸಿದಾಗೆಲ್ಲಾ ಥಟ್
ಅಂತಾ ಕಣ್ಮುಂದೆ ಬರ್ತಿದ್ದೆ ನಮ್ ಸಂತೂ ಸರ್. ಬೇರೆಯಾರಾದರೂ ನಮ್ಮವರನ್ನ ಸಂತೂ ಸರ್ ಅಂದ್ದದ್ದೂ ಕಿವಿಗೆ ಬಿದ್ದರೆ ರುದ್ರ ತಾಂಡವನೇ ನಡೀತಿತ್ತು. ಕಾರಣ ಗೊತ್ತಿಲ್ಲ. ಸ್ನೇಹಿತೆಯರು ಏನದ್ರೂ ಏನಮ್ಮ ಟ್ರ್ಯಾಕ್ ಬೇರೆನೇ ಇದೆ, ನೀನು ಸಂತೋಷ್ ಸರ್ ಒಟ್ಟಿಗೇನೆ ಲೈಬ್ರೆûರಿಗೆ ಹೋಗ್ತಿರಂತೆ, ತುಂಬಾ ಹೊತ್ತು ಅವರ ಜೊತೆನೇ ಇರ್ತಿಯ ಅಂತಾ ಕಾಣುತ್ತೆ, ಏನ್ ವಿಷ್ಯ ಅಂದರೆ ಸುಮ್ಮನ್ನಿರಮ್ಮ ಅವರು ನಮ್ಮ ಸರ್ ನಾನೂ ಅವರ ಸ್ಟೂಡೆಂಟ್ ಅಷ್ಟೇ. ಅಂತಾ ಜಾರಿಕೊಂಡಿದ್ದು ಇದೆ.
ಮಾತು ಏನೂ ಇಲ್ಲ ಅಂದರೂ, ಮನಸ್ಸು ಮಾತ್ರ ಏನೂ ಇಲ್ಲ ಎನ್ನುವುದನ್ನ ಒಪ್ಕೊಳೋಕೆ ತಯಾರಿರಲಿಲ್ಲ. ಮನದೊಳಗೆ ಮೂಡಿರುವುದು ಪ್ರೀತಿಯ ಪೈರು ಎಂದು ತಿಳಿಯುವ ಹೊತ್ತಿಗೆ ಫಸ್ಟ್ ಸೆಮ್ ಮುಗಿದು ಹೋಗಿತ್ತು. ರಜಾ ದಿನದಲ್ಲಿ ಸಂತೂ ಸರ್ ನಾ ನೋಡದೆ ಇರುವುದಕ್ಕೂ ಆಗ್ತಾಯಿರಲಿಲ್ಲ. ಮನದಲ್ಲಿರುವ ಪ್ರೀತಿಯನ್ನ ಒಪ್ಕೊಳುವುದಕ್ಕೂ ಆಗದೇ ಬಿಡೊದಕ್ಕೂ ಆಗದೇ, ಒದ್ದಾಡುವಂತಾಗಿತ್ತು. ಕಾಲೇಜು ಆರಂಭವಾದ ಕೂಡಲೇ ಎಂದಿನಂತೆ ಸರ್’ನ ಹುಡುಕುತ್ತಾ ಲೈಬ್ರೆûರಿ ಕಡೆಗೆ ಹೋಗಿದ್ದೆ.
ಆದರೆ ಸಂತೂ ಸರ್ ಅಲ್ಲಿ ಇರಲಿಲ್ಲ. ಅಲ್ಲಿದ್ದವರನ್ನ ಕೇಳಿದ್ದಕ್ಕೆ ಅವರು ಬಂದಿಲ್ಲ. ನಾಳೆ ಬರಬಹುದು ಅಂತಾ ಉತ್ತರಿಸಿದಕ್ಕೆ ಕಾದರಾಯಿತು ಅಂತಾ ಇಡೀ ದಿನ ಬೇಸರದಲ್ಲಿಯೇ ಕಳೆದದ್ದಾಯಿತು. ಹೀಗೆ ನಮ್ಮವರು ಒಂದು ವಾರ ಕಾಣದೇ ಇದ್ದದ್ದಕ್ಕೆ ತಲೆಯಲ್ಲಿ ಏನೆನೋ ಯೋಚನೆಗಳು, ಸರ್ ಏನಾದ್ರೂ ಮದುವೆ ಮಾಡಿಕೊಂಡ್ ಬಿಟ್ರ? ಹಾಗಾದ್ರೆ ನನ್ನ ಗತಿ ಏನೂ ಅಥವಾ ಹುಷಾರಿಲ್ವ ಫೋನ್ ಮಾಡೋಣ ಅಂದರೆ ಅದು ಸಹ ಸ್ವಿಚ್ ಆಫ್. ಅಯ್ಯೋ ದೇವರೇ, ನೀನೇ ಕಾಪಾಡು ಅಂತಾ ಇಡೀ ರಾತ್ರಿ ನಿದ್ದೇನೆ ಮಾಡಿರಲಿಲ್ಲ.
ಮರು ದಿನ ಸಂತು ಮಾಸ್ಟರ್ ಮುಖ ನೋಡಿ ಸ್ವರ್ಗವೇ ಕೈ ಸಿಕ್ಕಿದಷ್ಟು ಸಂತೋಷ. ಅವರ ಮುಖ ಬಾಡಿತ್ತು. ಸರ್’ಗೆ ಹುಷಾರಿರಲಿಲ್ಲ ಈಗಷ್ಟೇ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ ಎನ್ನುವ ಮಾತಿಗೆ ಪೂರ್ತಿ ಹುಷಾರಾಗಲಿ ಅಂತಾ ನಮ್ಮ ಏರಿಯಾದಲ್ಲಿ ಇದ್ದ ಎಲ್ಲ ದೇವಸ್ಥಾನದ ಬಾಗಿಲು ಸುತ್ತಿದ್ದೆ.
ಅಂತೂ ಒಂದು ದಿನ ಸಂತೂ ಸರ್’ಗೆ ನನ್ನ ಪ್ರೀತಿಯ ಬಗ್ಗೆ ಹೇಳಿಯೇ ಬಿಟ್ಟೆ. ನನ್ನ ಎದೆಯಲ್ಲಿ ಢವಢವ ಶುರುವಾಗಿತ್ತು. ಎಲ್ಲಿ ನನ್ನ ಬಗ್ಗೆ ಅಪಾರ್ಥ ಮಾಡಿಕೊಳ್ಳುತ್ತಾರೋ ಎನ್ನುವ ಭಯ. ಏನನ್ನೂ ಹೇಳದೆ ಪುಣ್ಯಾತ್ಮ ಶಾಂತವಾಗಿ ಮುಗುಳು ನಗೆ ನೀಡಿ, ನಾನ್ ಯಾಕೆ ನಿನಗೆ ಇಷ್ಟ ಆದೆ, ನನ್ನ ಪಾಠ ಮಾಡೋ ಶೈಲಿಯಿಂದನಾ ಅಥವಾ ನನ್ನ ಡ್ರೆಸಿಂಗ್ ಸ್ಟೈಲ್ ಅಥವಾ ನನ್ನ ನಡತೆ ನೋಡಿ ಮೆಚ್ಚಿದ್ದೀಯ ಹೇಳು. ಮರು ಮಾತಾಡಲು ಬಿಡದೇ ಮತ್ತೇ ತಲೆಗೆ ಮೊಳೆ ಹೊಡಿತ್ತಾ ನೋಡು ಈಗ ನಿನ್ನದು ಎಳೆ ವಯಸ್ಸು ಎಲ್ಲವೂ ಬೇಕು ಅನಿಸುವುದು ಸಹಜ. ಇದು ನಿನಗೆ ನನ್ನ ಮೇಲಿರುವ ಆಕರ್ಷಣೆ ಇರಬಹುದು. ಇವತ್ತು, ಇದ್ದು ನಾಳೆ ಹೊರಟು ಹೋಗಬಹುದು. ಮತ್ತಿನ್ಯಾರೋ ಇಷ್ಟ ಆಗಬಹುದು. ಈಗ ನೀನು ಓದುವುದಕ್ಕೆ ಅಂತಾ ಬಂದಿರುವುದು ಅದನ್ನಷ್ಟೇ ಮುಂದುವರೆಸು ಎಂದು ಬುದ್ಧಿ ಹೇಳುತ್ತಿದ್ದರೆ, ಮನಸ್ಸಲ್ಲಿ ಮಾತ್ರ ಇವರೇನು ವಯಸ್ಸಾದ ವೇದಾಂತಿ ತರಹ ಮಾತಾಡ್ತಾರೆ, ಏನೂ ನನಗಿಂತ ಐದು ವರ್ಷ ದೊಡ್ಡವರಿರಬಹುದಪ್ಪಾ! ಅಷ್ಟಕ್ಕೆ ನಾನೆಲ್ಲೋ ನನಗಿಂತ ಇಪ್ಪತ್ತೈದು ವರ್ಷ ದೊಡ್ಡವರನ್ನ ಪ್ರೀತಿಸುತ್ತೀದ್ದೀನಿ ಅನ್ನೋತರ ಆಡ್ತಾರೆ ಈ ಲಾರ್ಡ್ ಗೌರ‌್ನರ್ ಅಂತಾ ಮನಸ್ಸಲ್ಲಿ ಬೈಕೊಂಡಿದ್ದು ಇದೆ.
ಪ್ರೀತಿ ಇದ್ದ ಕಡೆಯೇ ಕೋಪ ಹೆಚ್ಚಲ್ಲವಾ? ಇದಾದ ಮೇಲೆ ಸಂತೂ ಸರ್ ನನ್ನ ಮಾತಾಡಿಸುತ್ತಲೇ ಇರಲಿಲ್ಲ. ಮುಖ ನೋಡಿ, ನೋಡದ ಹಾಗೆ ಸುಮ್ಮನಾಗುತ್ತಿದ್ದರು. ಪಾಠ ಮಾಡುವಾಗಲೂ ನನ್ನ ಕಡೆ ನೋಡುತ್ತಿರಲಿಲ್ಲ. ನನಗಂತೂ ಅದನ್ನ ಸಹಿಸುವುದಕ್ಕೂ ಆಗುತ್ತಿರಲಿಲ್ಲ. ಆದರೂ ನನ್ನ ಪ್ರಯತ್ನ ಮಾತ್ರ ಬಿಟ್ಟಿರಲಿಲ್ಲ. ದಿನಾ ಹಿಂದೆ ಸುತ್ತಿ ಸುತ್ತಿ ಸಂತೂ ಸರ್ ನಾ ಅಧಿಕೃತವಾಗಿ ನಮ್ಮ ಯಜಮಾನ್ರೂ ಅನ್ನೋದಕ್ಕೆ ಒಪ್ಪಿಗೆ ಸೂಚಿಸಿದರು. ವಿಶೇಷ ಅಂದರೆ ಅವರು ಈ ವಿಷಯವನ್ನ ಮೊದಲು ನನ್ನ ಅಪ್ಪ, ಅಮ್ಮ ಹತ್ತಿರ ಮೊದಲು ತಿಳಿಸಿದ್ದೂ.
ಅವರ ಪಿಎಚ್’ಡಿ ಮುಗಿದು, ನನ್ನ ಡಿಗ್ರಿ ಮುಗಿದ ಮೇಲೆ ಮದುವೆಯಾಗುವುದು ಎಂಬುದು ನಮ್ಮ ನಿರ್ಧಾರ. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ಪ್ರೀತಿಸಿ ವರ್ಷದೊಳಗೆಯೇ ಮದುವೆಯಾದೆವು. ನಾನು ಓದುವುದನ್ನೂ ಮುಂದುವರೆಸುತ್ತಿದ್ದೀನಿ.
ಈಗ ನಮ್ಮವರು ಮನೆಯಲ್ಲಿ ಯಜಮಾನ್ರೂ, ಕಾಲೇಜಿನಲ್ಲಿ ನಮ್ ಮೇಷ್ಟ್ರು. ಮಡದಿಯಾಗಿದ್ದೀನಿ ಅಂದ್ರೂ, ಇಂಟರ್’ನಲ್ ಪ್ರಶ್ನೆ ಕೂಡ ಹೇಳಲ್ಲ ಮಾರಾಯ! ಅವರ ಕೆಲಸದಲ್ಲಿ ಅವರು ಬ್ಯುಸಿ, ಆದರೂ ನನಗಾಗಿ ಒಂದಷ್ಟು ಸಮಯವನ್ನು ಮೀಸಲಿರಿಸುತ್ತಾರೆ. ಕಾಲೇಜು ವಿಷ್ಯಕ್ಕೆ ಏನಾದರೂ ಕೇಳಲು ಹುಡುಗಿಯರು ಫೋನ್ ಅಥವಾ ಮೆಸೇಜ್ ಮಾಡಿದರೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಾ ಹಾಗೆ ಆಗುತ್ತದೆ.
ಇವತ್ತು ನಮ್ ಯಜಮಾನ್ರೂದೂ ಪಿಎಚ್’ಡಿ ಕೆಲಸ ಮುಗಿತು. ಅದೇ ಕಾರಣಕ್ಕೆ, ಸಂತೂ ಸರ್ ಹೊರಗಡೆ ಕರೆದುಕೊಂಡು ಬಂದಿರುವುದು. ಇದು ಯಾವ ಜನುಮದ ಮೈತ್ರಿಯೋ ತಿಳಿಯದು. ನಾನು ಇಷ್ಟ ಪಟ್ಟವರು ನನಗೆ ಸಿಕ್ಕಿದರು. ನನ್ನೆಲ್ಲಾ ಕಾವ್ಯ ಬರಹಗಳು ಸಂತೋಷನಾ ಪಾದಕ್ಕೆ ಸಮರ್ಪಣೆ. ಎಲ್ಲ ನೆನಪುಗಳನ್ನು ಮೆಲುಕು ಹಾಕುವಷ್ಟರಲ್ಲಿ ಹೊತ್ತು ಜಾರಿತ್ತು.
ಪ್ರಥಮಎಂ.ಎ(ಎಂ.ಸಿ.ಜೆ)
ತುಮಕೂರು ವಿಶ್ವವಿದ್ಯಾನಿಲಯ
Get in Touch With Us info@kalpa.news Whatsapp: 9481252093
Discussion about this post