ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೈನ ಧರ್ಮದ ವರ್ತಮಾನ ಕಾಲದ 24 ನೆಯ ತೀರ್ಥಂಕರರಾದ ಮಹಾವೀರ ಸ್ವಾಮಿಗೆ ಕೇವಲ ಜ್ಞಾನ ಪ್ರಾಪ್ತಿಯಾದರೂ ಅದೆಷ್ಟೋ ವರ್ಷಗಳ ಕಾಲ ಸ್ವಾಮಿಯ ಮುಖದಿಂದ ದಿವ್ಯ ಧ್ವನಿ ಮೊಳಗಿರಲಿಲ್ಲ. ಈ ಬಗ್ಗೆ ದೇವೇಂದ್ರನ ಗಮನಕ್ಕೆ ಬಂದಾಗ ಮಹಾವೀರ ಸ್ವಾಮಿಯ ಮುಖದಿಂದ ಹೊರಡುವ ದಿವ್ಯಧ್ವನಿಯನ್ನು ಅರ್ಥ ಮಾಡಿಕೊಂಡು ಪ್ರಪಂಚಕ್ಕೆ ವಿವರಿಸುವ ಮೇಧಾವಿಗಳು ಯಾರೂ ಇರಲಿಲ್ಲ. ಹಾಗಾಗಿ ದಿವ್ಯಧ್ವನಿ ಮೊಳಗಿರಲಿಲ್ಲ.
ಹಾಗಾದರೆ ಈ ದಿವ್ಯವಾಣಿಯನ್ನು ಅರ್ಥ ಮಾಡಿಕೊಳ್ಳಬಲ್ಲ ಸಮರ್ಥರು ಯಾರು? ಹೀಗೆ ಯೋಚಿಸಿದಾಗ ಗೌತಮನೆಂಬ ಜ್ಞಾನಿ ಬ್ರಾಹ್ಮಣನೊಬ್ಬ ಈ ದಿವ್ಯವಾಣಿಯನ್ನು ಪ್ರಪಂಚಕ್ಕೆ ತಲುಪಿಸಬಲ್ಲ ಸಾಮರ್ಥ್ಯವಿದೆ ಎಂದು ತಿಳಿದುಬಂತು. ಆದರೆ ಗೌತಮ ಆತನ ಪಾಂಡಿತ್ಯದ ಬಗ್ಗೆ ಗರ್ವಿಯಾಗಿರುತ್ತಾನೆ. ಇದನ್ನರಿತ ದೇವೇಂದ್ರ ಬ್ರಾಹ್ಮಣನ ವೇಷದಲ್ಲಿ ಗೌತಮನಿದ್ದಲ್ಲಿಗೆ ಬರುತ್ತಾನೆ. ಒಂದು ಜಟಿಲವಾದ ಶ್ಲೋಕವನ್ನು ಹೇಳಿ ಅದರರ್ಥ ತಿಳಿಸುವಂತೆ ಹೇಳುತ್ತಾನೆ. ಆ ಶ್ಲೋಕ ಹೀಗಿದೆ..
ತ್ರೈಕಾಲ್ಯಂ ದ್ರವ್ಯ ಷಟ್ಕಂ ನವಪದ ಸಹಿತಂ
ಜೀವಷಟ್ಕಾಯ ಲೇಶಾಃ
ಪಂಚಾನ್ಯೇ ಚಾಸ್ತಿಕಾಯಾ ವ್ರತ ಸಮಿತಿ
ಗತಿರ್ಜ್ಞಾನಚಾರಿತ್ರ ಭೇದಾಃ
ಇತ್ಯೇತಾನ್ಮೋಕ್ಷ ಮೂಲಂ ತ್ರಿಭುವನಮಹಿತೈಃ
ಪ್ರೋಕ್ತಮರ್ಹದ್ಭಿರೀಶೈಃಈ
ಪ್ರತ್ಯೇತಿಶ್ರದ್ಧಧಾತಿಸ್ಮೃಶತಿಮತಿಮಾನ್ ಯಃ ಸವೈಃ ಶುದ್ಧದೃಷ್ಟಿಃ.
(ಇದರರ್ಥ ಹೀಗಿದೆ. ಶುದ್ಧ ದೃಷ್ಟಿಯಲ್ಲಿ ನೋಡುವುದಾರೆ 3 ಕಾಲದಲ್ಲಿ 6 ದ್ರವ್ಯ, 9 ತತ್ವ ಜೀವಾದಿ ಷಟ್ಕಾಯ ಅಸ್ತಿ ಕಾಯಗಳು 5, ವ್ರತ ಸಮಿತಿ ಭುಕ್ತಿಗಳು ಜ್ಞಾನ ಚಾರಿತ್ರ್ಯ ಭೇದಗಳು ಇದು ಮೋಕ್ಷದ ಮೂಲಗಳು.
ಇದೇ ಸಾಲುಗಳು ರತ್ನಾಕರವರ್ಣಿಯ ಶತಕದಲ್ಲಿ ಹೀಗೆ ಉಲ್ಲೇಖಿಸಲ್ಪಟ್ಟಿವೆ.
ಮಿಗೆ ಷಡ್ ದ್ರವ್ಯ ಮನಸ್ತಿಕಾಯಮೆನಿಪೈದಂ ತತ್ವವೇಳಂ ಮನಂ
ಬುಗಲೊಂಬತ್ತು ಪದಾರ್ಥಮಂ ತಿಳಿದೊಡಂ ತನ್ನಾತ್ಮನೀ ಮೆಯ್ಯ ದಂ
ದುಗದಿಂ ಬೇರೊಡಲೇನ ಚೇತನಮೆ ಜೀವಂ ಚೇತನಂ ಜ್ಞಾನರೂ
ಪಿಗಡಾಯೆಂದರಿದಿರ್ದನೇ ಸುಖಿಯಲಾ, ರತ್ನಾಕರಾಧೀಶ್ವರಾ….
(ಜೀವ ಪುದ್ಗಲ ಧರ್ಮ ಅಧರ್ಮ ಆಕಾಶ ಕಾಲ, ಈ ಆರಿ ದ್ರವ್ಯಗಳನ್ನೂ, ಜೀವಾಸ್ತಿ ಕಾಯ ಪುದ್ಗಲಾಸ್ತಿ ಕಾಯ, ಧರ್ಮಾಸ್ತಿ ಕಾಯ, ಅಧರ್ಮಾಸ್ತಿಕಾಯ, ಆಕಾಶಾಸ್ತಿಕಾಯ ಈ ಐದು ಅಸ್ತಿ ಕಾಯಗಳನ್ನೂ, ಜೀವ ಅಜೀವ, ಆಶ್ರವ, ಬಂಧ, ಸಂವರ, ನಿರ್ಜರ, ಮೋಕ್ಷ ಈ ಏಳು ತತ್ವಗಳನ್ನೂ ಜೀವಾಜೀವ, ಆಶದರವ, ಬಂಧ ಅಂವರ ನಿರ್ಜರ, ಮೋಕ್ಷ, ಪಾಪ ಪುಣ್ಯ ಈ ಒಂಬತ್ತು ಪದಾರ್ಥಗಳನ್ನು ಮನಸ್ಸಿಗೆ ಹೋಗುವಂತೆ ತಿಳಿದರೂ ತನ್ನ ಆತ್ಮನು ಈ ಶರೀರದ ಬಾಧೆಯಿಂದ ಬೇರೆಯಾಗಿರುವವನು. ಶರೀರವೇನು ಅಚೇತನವೇ??? ಜೀವವು, ಚೈತನ್ಯಸ್ವರೂಪವೂ, ಜ್ಞಾನರೂಪವೂ ಅಲ್ಲವೇ?? ಎಂದು ತಿಳಿದವನು ಸುಖಿಯಲ್ಲವೆ?? ಬೇಧವಿಜ್ಞಾನವು ಸುಖಿ ಎಂಬ ಭಾವವು..)
ಈ ಅರ್ಥ ವಿವರಣೆ ಗೌತಮನಿಂದ ಸಾಧ್ಯವಾಗುವುದಿಲ್ಲ. ಈ ವಾಕ್ಯದ ಮೇಲೆ ಆತನಿಗೆ ನಂಬಿಕೆ ಬರುವುದಿಲ್ಲ. ಆಗ ಬ್ರಾಹ್ಮಣನ ರೂಪದಲ್ಲಿದ್ದ ದೇವೇಂದ್ರ ಅವನಿಗೆ ಒಂದು ಸಲಹೆ ನೀಡುತ್ತಾನೆ. ಇಲ್ಲೇ ಸನಿಹದಲ್ಲಿ ಮಹಾವೀರ ಸ್ವಾಮಿಯ ಸಮವಸರಣಕ್ಕೆ ಹೋಗೋಣ. ಅವನಿಗೆ ಉತ್ತರ ಗೊತ್ತಿದೆಯೋ ತಿಳಿದುಕೊಳ್ಳೋಣ ಎಂದು.
ಗೌತಮ ಅವನಲ್ಲಿ ಇದಕ್ಕೆ ಉತ್ತರ ನೀಡೋ ಜ್ಞಾನ ಇದೆಯೋ ತಿಳಿಯೋಣ ಎಂದು ಮನವೊಲಿಸುತ್ತಾನೆ. ಅದಕ್ಕೊಪ್ಪಿ ಗೌತಮ ದೇವೇಂದ್ರನೊಡನೆ ಮಹಾವೀರರಿದ್ದಲ್ಲಿಗೆ ಹೊರಡುತ್ತಾನೆ. ಹೇಳಿದಾಗ ಮಹಾವೀರನಿದ್ದಲ್ಲಿಗೆ ಅವರು ಬರುತ್ತಾರೆ. ಸಮವಸರಣಕ್ಕೆ ಬರುತ್ತಲೇ ಅಲ್ಲಿ ಎದುರುಗಡೆಯಿದ್ದ ಮಾನಸ್ಥಂಭವನ್ನು ನೋಡಿದ ಕೂಡಲೇ ಗೌತಮನ ಅಹಂಕಾರವೆಲ್ಲ ಒಮ್ಮೆಗೇ ಇಳಿದು ಪರಿಶುದ್ಧನಾಗಿಬಿಡುತ್ತಾನೆ.
ಆ ಹೊತ್ತಿಗೆ ಮಹಾವೀರ ಸ್ವಾಮಿಯ ಮುಖದಿಂದ ದಿವ್ಯ ವಾಣಿ ಮೊಳಗುತ್ತದೆ. ನಂತರ ಗೌತಮ ಮಹಾವೀರ ಸ್ವಾಮಿಯ ಶಿಷ್ಯತ್ವ ಪಡೆದು ಗೌತಮ ಗಣಧರರಾಗಿ ಅವರ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ. ಎಪ್ರಿಲ್ 06 ರಂದು ದಿವ್ಯ ಪುರುಷ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ. ಭಗವಾನ್ ಮಹಾವೀರನ ಸಂದೇಶಗಳು ಜಗತ್ತಿಗೆ ಬೆಳಕಾಗಲಿ.. ಅಹಿಂಸಾ ಧರ್ಮ ವಿಶ್ವಧರ್ಮವಾಗಲಿ. ಎಲ್ಲೆಡೆ ಶಾಂತಿ ನೆಲೆಸಲಿ. ಜಗತ್ತಿಗೆ ಪ್ರಸಕ್ತ ಕಾಡುತ್ತಿರುವ ಸಮಸ್ಯೆಗಳು ಪರಿಹಾರವಾಗಲಿ ಎಂದು ದಿವ್ಯಜ್ಯೋತಿಯನ್ನು ಬೆಳಗಿಸಿ ಮಹಾವೀರ ಜಯಂತಿ ಆಚರಣೆ ಮಾಡೋಣ. ಎಲ್ಲರಿಗೂ ಮಹಾವೀರ ಜಯಂತಿ ಯ ಶುಭಾಶಯಗಳು.
Get in Touch With Us info@kalpa.news Whatsapp: 9481252093
Discussion about this post