ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಅನ್ನು ಸಡಿಲಗೊಳಿಸುವ ಕುರಿತಾಗಿ ಡಾ.ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಾಕ್ ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ.
ಈ ಸಮಿತಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಅವರು ಇದ್ದರು.
ಈ ಸಮಿತಿಯು ಲಾಕ್ ಡೌನ್ ಅನ್ನು ಹಂತ ಹಂತವಾಗಿ ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಮುಂದಿನ ಆರು ತಿಂಗಳವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸಿನ ಕೆಲವು ಮುಖ್ಯಾಂಶಗಳು ಹೀಗಿವೆ:
- ಲಾಕ್ ಡೌನ್ ನಂತರ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್ ಡೌನ್ ಮಾಡಬೇಕು.
- ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರೆಸಬೇಕು.
- ಶಾಲೆ ಕಾಲೇಜುಗಳನ್ನು ಮೇ 31ರ ವರೆಗೆ ಮುಚ್ಚಬೇಕು. ಆನ್ ಲೈನ್ ತರಗತಿಗಳಳಿಗೆ ಉತ್ತೇಜನ ನೀಡಬೇಕು.
- ಎಸಿ ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು.
- ಐಟಿ, ಬಿಟಿ ಉದ್ಯಮಗಳು, ಅತ್ಯಾವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು.
- ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು.
- ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು.
- ಅಂತಾರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು.
- ಕೋವಿಡ್ ಪ್ರಕರಣಗಳು ವರದಿಯಾದಾಗ ಚಿಕಿತ್ಸೆಗೆ ವೈದ್ಯರು, ದಾದಿಯರು, ಇತರ ಅರೆ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಬೇಕು.
- ಎಪ್ರಿಲ್ 12 ರ ನಂತರ ರಾಪಿಡ್ ಟೆಸ್ಟ್ ಕಿಟ್ ಗಳ ಪೂರೈಕೆಯಾಗಲಿದ್ದು, ಕ್ವಾರಂಟೈನ್ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಇನ್ನಷ್ಟು ಪರಿಣಾಮಕಾರಿಯಾಗಲಿವೆ.
- ನಾನ್ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಸಾಧ್ಯವಾದಷ್ಟು ಟೆಲಿ ಕನ್ಸಲ್ಟೇಷನ್ ನಡೆಸಬೇಕು.
- ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು.
- ಏಪ್ರಿಲ್ 30 ರ ವರೆಗೆ ಎಸಿ ಬಸ್/ಮೆಟ್ರೋ ಸೇವೆ ಬೇಡ.
- ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು.
- ಸಮಿತಿಯು ಮುಂದಿನ 15 ದಿನಗಳ ಅವಧಿಗೆ ಈ ಶಿಫಾರಸುಗಳನ್ನು ಮಾಡಿದೆ.
- ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post