ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದ್ದನ್ನು ಗಮನಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಹಣವಾಳ, ಸಿಂಗನಾಳ, ಸಿಂಗನಾಳ ಕ್ಯಾಂಪ್, ಜಿರಾಳ ಕಲ್ಲಗುಡಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿದ ಸಚಿವರು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಬೆಳೆ ನಷ್ಟದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ, ಆದಷ್ಟು ಬೇಗ ಬೆಳೆ ನಷ್ಟ ಸಮೀಕ್ಷೆ ಮಾಡಲಾಗುವುದು. ಬೆಳೆ ನಷ್ಟದಿಂದ ಯಾವುದೇ ರೈತರು ಆತಂಕಕ್ಕೊಳಗಾಗುವುದು ಬೇಡ. ಪ್ರಕೃತಿ ವಿಕೋಪಗಳಾದಾಗ ಧೈರ್ಯದಿಂದ ಇರಬೇಕು. ಸರ್ಕಾರ ರೈತರ ಜೊತೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ದಡೆಸೂಗೂರು ಬಸವರಾಜ್, ಪರಣ್ಣ ಮುನವಳ್ಳಿ, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ಸೇರಿದಂತೆ ಕೃಷಿ ತೋಟಗಾರಿಕಾ ಅಧಿಕಾರಿಗಳು ಜೊತೆಗಿದ್ದರು.
ಇದಕ್ಕೂ ಮುನ್ನ ದಾರಿ ಮಧ್ಯದಲ್ಲಿ ಒಂದಿಷ್ಟು ರೈತರನ್ನು ಭೇಟಿಯಾದರು. ಕೊಪ್ಪಳ ಜಿಲ್ಲೆಯ ಮೆಟ್ರಿ ಗ್ರಾಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿ, ಯಾವುದೇ ಆತಂಕವಿಲ್ಲದೇ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಎಂದು ಸೂಚಿಸಿದರು.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post