ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುತ್ತಿದ್ದು, ಹೃದ್ರೋಗ ಮತ್ತು ನರ ರೋಗ ವಿಭಾಗ ಒಂದು ವಾರದ ಒಳಗಾಗಿ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭವಾಗಿ 10ವರ್ಷಗಳಾದರೂ ಇದುವರೆಗೆ ಪ್ರಾರಂಭವಾಗಿಲ್ಲ. ಇದೀಗ ಮೆಗ್ಗಾನ್ ಆಸ್ಪತ್ರೆಯ 3ಜನ ಹೃದ್ರೋಗ ತಜ್ಞರು ಮತ್ತು ಒಬ್ಬ ನರರೋಗ ತಜ್ಞರ ಸೇವೆಯನ್ನು ಪಡೆದುಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗದ ಒಪಿಡಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಭಾಗಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಹುಟ್ಟಿನಿಂದಲೇ ಕಿವುಡುತನ ಇರುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಮತ್ತು ವಾಕ್‌ಶ್ರವಣ ಕೇಂದ್ರದಲ್ಲಿ ಬಿಎಸ್ಸಿ (ಸ್ಪೀಚ್ ಅಂಡ್ ಹಿಯರಿಂಗ್) ತರಗತಿಗಳನ್ನು ಆರಂಭಿಸಲು 4.84 ಕೋಟಿ ರೂ. ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಇದರ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಕೋರ್ಸ್ ಶಿಮ್ಸ್‌ನಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದರು.
ನರ್ಸ್, ಟೆಕ್ನಿಷಿಯನ್ ಮತ್ತಿತರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪ್ರಕ್ರಿಯೆ ತಕ್ಷಣ ಆರಂಭಿಸಲು ಸೂಚಿಸಲಾಗಿದೆ. ಎಮರ್ಜೆನ್ಸಿ ಮೆಡಿಸಿನ್ ಮತ್ತು ಜಿರಿಯಾಟ್ರಿಕ್ ವಿಭಾಗವನ್ನು ಪ್ರಾರಂಭಿಸಲು ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ನರೇಗಾ ಜಾಬ್’ಕಾರ್ಡ್ ಸ್ಪಷ್ಟನೆ
ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಕಾರ್ಡ್ ಎಂದು ನಿರ್ಬಂಧವಿಲ್ಲ. ಒಂದು ಕುಟುಂಬದ ಅರ್ಹ ಸದಸ್ಯರೆಲ್ಲರೂ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಕಾರ್ಡ್ ನೀಡಲಾಗುವುದು. ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಮತ್ತು ಆದಾರ ತೆರಿಗೆದಾರರನ್ನು ಹೊರತುಪಡಿಸಿ ಯಾರು ಬೇಕಾದರೂ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಉದ್ಯೋಗಕ್ಕಾಗಿ ಮುಂದೆ ಬರುತ್ತಿದ್ದು, 15 ದಿನಗಳ ಒಳಗಾಗಿ ಕೂಲಿ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಸಚಿವರ ಸ್ಪಷ್ಟನೆ ನೀಡಿದರು.
ಚೆಕ್‌ಪೋಸ್ಟ್‌ನಲ್ಲಿ ಬಿಗಿ ಭದ್ರತೆ
ಜಿಲ್ಲೆಗೆ ಪ್ರಸ್ತುತ 3200 ವಲಸೆ ಕಾರ್ಮಿಕರು ಆಗಮಿಸಿದ್ದು, ಸುಮಾರು 300 ವಲಸೆ ಕಾರ್ಮಿಕರು ಜಿಲ್ಲೆಯಿಂದು ಹೊರ ಹೋಗಿದ್ದಾರೆ. ಹೊರ ರಾಜ್ಯಗಳಿಂದ ಬಂದವರಿಗೆ ಹಾಗೂ ರಾಜ್ಯದ ರೆಡ್‌ಜೋನ್‌ನಿಂದ ಆಗಮಿಸಿದವರಿಗೆ ಕ್ವಾರೆಂಟೈನ್ ವಿಧಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಮಾಹಿತಿ ನೀಡಿದರು.
Get in Touch With Us info@kalpa.news Whatsapp: 9481252093
Discussion about this post