ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೆತ್ತವರು ತಮ್ಮ ಮಕ್ಕಳ ಧಾರಣ ಶಕ್ತಿಯನ್ನು ಕಂಡುಕೊಂಡು ಆ ಕ್ಷೇತ್ರದಲ್ಲಿ ಬೆಳೆಯುವಂತೆ ಪ್ರೇರಣೆ ನೀಡಬೇಕು. ಅದನ್ನು ಬಿಟ್ಟು ತಮ್ಮಲ್ಲಿ ಧನಬಲ ಇದೆಯೆಂಬ ಕಾರಣಕ್ಕೆ ಮಕ್ಕಳ ಧಾರಣ ಶಕ್ತಿಗಿಂತ ಹೆಚ್ಚಿನದನ್ನು ಪ್ರೇರೇಪಿಸಬಾರದು.
ಕಲಾ ವಿಭಾಗ (Art Division) ತೆಗೆದುಕೊಂಡು ಸಾಹಿತ್ಯ, ಚರಿತ್ರೆ, ಕಲೆ ಮುಂತಾದುಗಳನ್ನು ಓದಬೇಕೆಂದು ಹಪಹಪಿಸುವ ಮಕ್ಕಳನ್ನು ಬಲವಂತದಿಂದ ಇಲ್ಲ ನೀನು ವಿಜ್ಞಾನ ವಿಭಾಕ್ಕೆ ಸೇರು. ಹಣ ಎಷ್ಟು ಖರ್ಚಾದರೂ ಪರ್ವವಾಗಿಲ್ಲ. ನೀನು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಪ್ರೇರೇಪಿಸುವ ಹೆತ್ತವರನ್ನು ನಾವು ಪ್ರಸ್ತುತ ಸಮಾಜದಲ್ಲಿ ಕಾಣುತ್ತೇವೆ. ಈ ತೆರನಾದ ಬಲವಂತದ ಉತ್ಪಾದನೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಆದ್ದರಿಂದ ತಮ್ಮ ಮಕ್ಕಳ ಧಾರಣ ಶಕ್ತಿ, ಅಭಿರುಚಿ ಮೊದಲಾದುವುಗಳನ್ನು ಕಂಡುಕೊಂಡು ಆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವಂತೆ ಪ್ರೇರೇಪಿಸುವುದು ಪ್ರಜ್ಞಾವಂತ ಮಾತಾಪಿತರ ಕರ್ತವ್ಯವಾಗಿದೆ. ಆಗ ಆ ಮಕ್ಕಳ ಕಲಿಕೆಯ ಲವಲವಿಕೆ, ಉತ್ಸಾಹ, ತುಡಿತ ಉಲ್ಲಾಸದಿಂದ ನೂರ್ಮಡಿಗೊಳ್ಳುತ್ತದೆ. ಈ ತೆರನಾದ ಮಾತಾಪಿತರು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ವಿರಳ ಎನ್ನಬಹುದು. ಈ ವಿರಳರ ಸಾಲಿನಲ್ಲಿ ಕುಂದಾಪುರದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ದಂಪತಿ ಶ್ರೀಮತಿ ಪ್ರತಿಭಾ ಹಾಗೂ ಶ್ರೀ ಚಂದ್ರಮೌಳಿ ರಾವ್ ಅವರುಗಳು. ತಮ್ಮ ಮಗಳು ’ಅವ್ಯಕ್ತ’ಳ ಅವ್ಯಕ್ತವಾದ ಕಲ್ಪನೆಗಳನ್ನು ವ್ಯಕ್ತವಾಗಿಸಿದವರು.
ಅವ್ಯಕ್ತ ಅವರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುವಾಗ ತನ್ನ ಮನದಾಳದ ಅಮುಹೂರ್ತ ಕಲ್ಪನೆಗಳಿಗೆ ಮೂರ್ತರೂಪ ಕೊಟ್ಟವರು. ತರಗತಿ ನಡೆಯುತ್ತಿದ್ದಂತೆ ಪಠ್ಯಪುಸ್ತಕದ ಪುಟದ ಮೇಲೆ ಚಿತ್ರಿಸಿದ ಭಾವಚಿತ್ರವೇ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ಎನ್ನುವ ಮಂತ್ರದಿಂದ ನಾಂದಿ ಹಾಡಿದ ಹಾಗಾಯಿತು. ಅನಂತರ ಡ್ರಾಯಿಂಗ್ ಪುಸ್ತಕ ಮನೆಗೆ ತಂದು ಬಿಡಿಸಿದ ಚಿತ್ರಗಳನ್ನು ಅವ್ಯಕ್ತ ಅವರ ತಾಯಿಯವರು ನೋಡಿ ಪ್ರೋತ್ಸಾಹಿಸಿದರೆ, ತಂದೆಯವರು ನೀರೆರೆದರು. ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ಸೇರಿ ತಮ್ಮ ಚಿತ್ರಕಲಾ ಕಲಿಕೆಯನ್ನು ಮುಂದುವರಿಸಿದರು. ಆದರೆ ಪದವಿ ವಿದ್ಯಾಭ್ಯಾಸದತ್ತ ಗಮನ ನೀಡಬೇಕಾಗಿದ್ದರಿಂದ ಕೋರ್ಸ್ ಸಂಪೂರ್ಣ ಮಾಡಲಾಗಲಿಲ್ಲ ಎಂಬ ವೇದನೆ ಅವ್ಯಕ್ತ ಅವರಿಗೆ ಇಂದಿಗೂ ಇದೆ. ಪದವಿ ಮಾಡುತ್ತಿದ್ದಾಗಲೂ ತಮ್ಮ ಚಿತ್ರಕಲಾ ಕಲಿಕೆಯನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಲೇ ಇದ್ದರು.
ಬಿಎ ಪದವಿಯ ಅನಂತರ ಅವ್ಯಕ್ತ ಅವರು ’ಸಾಧನಾ ಕಲಾ ಸಂಗಮ ಟ್ರಸ್ಟ್’ ಎಂಬ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಇಲ್ಲಿ ತಜ್ಞ ಗುರುಗಳಾದ ಶ್ರೀ ನಾರಾಯಣ ಐತಾಳ್, ಶ್ರೀ ಮಂಜುನಾಥ್ ಮಯ್ಯ, ಶ್ರೀ ಸುಪ್ರೀತ್ ಬೈಂದೂರು ಮೊದಲಾದವರ ಗರಡಿಯಲ್ಲಿ ಪಳಗಿದ ಅವ್ಯಕ್ತ ಚಿತ್ರಕಲೆಯ ಆಳ, ಅಗಲ, ಹರವುಗಳನ್ನು ಕಲಿತುಕೊಂಡರು. ಒಂದು ಶುಭದಿನ ಶುಭಗಳಿಗೆಯಲ್ಲಿ ಆಕಸ್ಮಿಕವಾಗಿ ಇವರ ತಾಯಿ ಹಿರಿಯ ಕಲಾಶಿಕ್ಷಕರಾದ ಭೋಜು ಹೊಂಡ ಅವರನ್ನು ಭೇಟಿಯಾದರು. ಅವ್ಯಕ್ತ ಅವರ ಕಲಾಕೃತಿಗಳನ್ನು ನೋಡಿ ಮೆಚ್ಚಿದ ಅವರು ಉಡುಪಿಯ ’ಚಿತ್ರಕಲಾ ಮಂದಿರ’ದಲ್ಲಿ ಚಿತ್ರಕಲಾ ಅಭ್ಯಾಸವನ್ನು ಮುಂದುವರಿಸುವಂತೆ ಸಲಹೆ ನೀಡಿದರು. ಅದರಂತೆ ಅವ್ಯಕ್ತ ಅವರು ಚಿತ್ರಕಲಾ ಮಂದಿರದ ವಿದ್ಯಾರ್ಥಿಯಾಗಿ ಸೇರಿದರು. ಚಿತ್ರಕಲಾ ಮಂದಿರದ ಪ್ರಾಚಾರ್ಯರಾದ ಶ್ರೀ ರಾಜೇಂದ್ರ ತ್ರಾಸಿ, ಹಾಗೂ ಕಲಾ ಶಿಕ್ಷಕರಾದ ಶ್ರೀ ಕೆ.ಎಲ್. ಭಟ್, ರಮೇಶ್ ರಾವ್ ಇವರುಗಳು ಅದ್ಭುತ ಚಿತ್ರರಚನಾ ಕೌಶಲ್ಯವನ್ನು ಹೊಂದಿದ ಗುರುಗಳು. ಇವರುಗಳ ಪ್ರಶಂಸೆಗೆ ಪಾತ್ರರಾದ ಅವ್ಯಕ್ತ ತನ್ನ ಬೊಗಸೆಯಲ್ಲಿ ಹಿಡಿಯುವಷ್ಟನ್ನು ಕರಗತ ಮಾಡಿಕೊಂಡರು. ಇಲ್ಲಿ ನಾಲ್ಕು ವರ್ಷ ವಿದ್ಯಾರ್ಜನೆ ಮಾಡಿ ಬಿ.ವಿ.ಎ. (Bachelor of Visual Arts) ಪದವಿ ಗಳಿಸಿದರು.
ಚಿತ್ರಕಲೆಯ ಹಲವಾರು ಪ್ರಕಾರಗಳನ್ನು ಸುಲಲಿತವಾಗಿ ಬಲ್ಲ ಅವ್ಯಕ್ತ, ಕೇರಳ ಶೈಲಿಯಿಂದ ಮೊದಲ್ಗೊಂಡು ಕಾಶ್ಮೀರದ ಭಾರತೀಯ ಜನಪದೀಯ ಶೈಲಿಯಲ್ಲೂ ಚಿತ್ರರಚನೆ ಮಾಡುತ್ತಾರೆ. ಆಧುನಿಕ ಕಲಾ (Modern Arts) ಕ್ಷೇತ್ರದಲ್ಲೂ ತನ್ನನ್ನು ತಾನು ಪಳಗಿಸಿಕೊಂಡಿದ್ದಾರೆ. ಪರಿಸರ ಜನ್ಯ ಚಿತ್ರಗಳನ್ನು ಬಹಳ ಮುದದಿಂದ ರಚಿಸುತ್ತಾರೆ. ಪ್ಲೈವುಡ್ ಮತ್ತು ಎಂಸೀಲ್ ಉಪಯೋಗಿಸಿ ಸಹ ಕಲಾಕೃತಿ ರಚಿಸುತ್ತಾರೆ. ಬೆಂಗಳೂರಿನಲ್ಲಿ ವರ್ಷಂಪ್ರತೀ ನಡೆಯುವ ಚಿತ್ರಸಂತೆಯಲ್ಲಿ ಸತತ ಏಳು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಹಲವಾರು ಚಿತ್ರ ಕಮ್ಮಟಗಳಲ್ಲಿ ಭಾಗವಹಿಸಿ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ. ಇವರು ರಚಿಸಿರುವ ಕಲಾಕೃತಿಗಳು ಭಾರತದಾದ್ಯಂತದ ಕಲಾಪ್ರೇಮಿಗಳು ಖರೀದಿಸಿದ್ದಾರೆ. ಅಮೆರಿಕಾ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳಿಗೂ ಕೆಲವೊಂದು ಕಲಾಕೃತಿಗಳು ರವಾನೆಯಾಗಿವೆ. ಕಲಿತದ್ದು ಸಾಸಿವೆಯಷ್ಟು ಇನ್ನೂ ಸಾಗರದಷ್ಟು ಕಲಿಯಲು ಬಾಕಿ ಇದೆ ಎಂದು ವಿನಯದಿಂದ ಹೇಳುವ ಅವ್ಯಕ್ತ ಅವರು ಈಗ ’ಯುಟ್ಯೂಬ್’ ನಿಂದಲೂ ಕಲಿಯುತ್ತಿದ್ದಾರೆ. ಈ ಚಿತ್ರ ಕಲಾವಿದೆ ಕನ್ನಡದ ಖ್ಯಾತ ಚಲನಚಿತ್ರ ನಟ ’ಡಿಬಾಸ್’ ದರ್ಶನ್ ಅವರ ಅಭಿಮಾನಿ. ಕಲಾಚಿತ್ರ ರಚಿಸುವಾಗ ಲಹರಿಗಾಗಿ ದರ್ಶನ್ ಚಿತ್ರದ ಹಾಡುಗಳನ್ನು ಗುನುಗುನಿಸುವುದು ಅವ್ಯಕ್ತ ಅವರ ಹವ್ಯಾಸ.
ಅವ್ಯಕ್ತ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಡುಪಿಯ ’ಮುಕುಂದ ಕೃಪಾ’ ಇಲ್ಲಿಂದ ಮಾಡಿದವರು. ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಹೈಸ್ಕೂಲಿನಿಂದ ಫ್ರೌಢಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ ಓದಿದವರು. ಉಡುಪಿಯ ಪೂರ್ಣ ಪ್ರಜ್ಞಾ ಕಾಲೇನಿಂದ ಬಿಎ ಪದವಿಗಳಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೂ ಬೀಗದೆ ಬಾಗುವವರು ಅವ್ಯಕ್ತ. ಹುಟ್ಟಿದ ಮನೆಯಂತೆ ಮೆಟ್ಚಿದ ಮನೆಯ ಅತ್ತೆ ಮಾವಂದಿರು, ಶ್ರೀಮತಿ ಆಹಲ್ಯ ಹಾಗೂ ಶ್ರೀ ರಮೇಶ್ ಉಪಾಧ್ಯಾಯ ದಂಪತಿಗಳು ಸಂಪೂರ್ಣ ಸಹಕಾರದೊಂದಿಗೆ ಪ್ರೋತ್ಸಾಹಿಸುತ್ತಾರೆ. ವಿದ್ಯಾವಂತರಾದ ಪತಿ ಅಭಿಷೇಕ್ ಕಲಾ ಪ್ರೇಮಿ.
ಇವರೆಲ್ಲರ ಆಶಯ ಹಾಗೂ ಪ್ರೇರಣೆಯಿಂದ ಇನ್ನಷ್ಟು ಎತ್ತರಕ್ಕೇರಿ ಶ್ರೇಷ್ಠ ಚಿತ್ರಕಲಾವಿದೆ ಆಗುವ ಹೆಬ್ಬಯಕೆ ಅವ್ಯಕ್ತ ಅವರದು. ಶ್ರೀಕಲಾಮಾತೆ ಸರಸ್ವತಿಯ ಅನವರತ ಅನುಗ್ರಹ ಪ್ರಾಪ್ತವಾಗಿ ಅವರ ಸರ್ವ ಕನಸುಗಳು ವರ್ಣಮಯವಾಗಲಿ.
Get In Touch With Us info@kalpa.news Whatsapp: 9481252093
Discussion about this post