ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ರಾಜ್ಯದ ರೈತರ ಹಿತ ಕಾಯುವ ಸಲುವಾಗಿ ಸುಮಾರು 10-15 ಅತಿ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಶೀಘ್ರ ಆರಂಭವಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತುಂಬಿರುವ ಅಂಜನಾಪುರ ಕೆರೆ ಕುಟುಂಬ ಸಮೇತರಾಗಿ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
ರೈತರು ದೇಶದ ಬೆನ್ನೆಲುಬು ಎಂದು ಕೇವಲ ಭಾಷಣಕ್ಕೆ ಸೀಮಿತವಾಗದೆ, ಬಿ.ಎಸ್. ಯಡಿಯೂರಪ್ಪನವರು ರಾಜ್ಯದಲ್ಲಿಯ 10-15 ಅತಿ ದೊಡ್ಡ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಕೆಲಸ ಮಾಡಲಿದ್ದಾರೆ ಎಂದರು.
ಅಂಜನಾಪುರದ ಕೆರೆಯು ಭರ್ತಿಯಾದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಾಗಿನ ಅರ್ಪಿಸುತ್ತಿದ್ದರು. ಕೊರೋನಾ ಮಹಾಮಾರಿ ಸಂಕಷ್ಟಕ್ಕೆ ಅವರ ಅನುಪಸ್ಥಿತಿಯಲ್ಲಿ ಇಂದು ಸರಳ ಹಾಗೂ ಸಾಂಕೇತಿಕವಾಗಿ ನಾವು ನಮ್ಮ ತಾಲೂಕಿನ ಜನಪ್ರತಿನಿಧಿಗಳು ಬಾಗಿನ ಅರ್ಪಿಸಿದ್ದೇವೆ. ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರ ಬದುಕಿಗೆ ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ರೈತರ ಕನಸು ನನಸಾಗಲಿ, ರೈತರ ಬೆಳೆಗಳು ವೃದ್ಧಿಯಾಗಲಿ ಎಂದು ಗಂಗಾಮಾತೆಗೆ ಬಾಗೀನ ಅರ್ಪಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದೇನೆ. ಅಂಜನಾಪುರ ಜಲಾಶಯವು ತಾಲೂಕಿನ ರೈತರ, ಶಿಕಾರಿಪುರ ಮತ್ತು ಶಿರಾಳಕೊಪ್ಪ ಜನತೆಯ ಕುಡಿಯುವ ನೀರಿಗೆ ಜೀವನಾಡಿಯಾಗಿದ್ದು, ಸಾಧಾರಣವಾಗಿ ಮಳೆಯಿಂದ ಇಂದು ಅಂಜನಾಪುರ ಜಲಾಶಯವು ತುಂಬಿದೆ. ಶಿಕಾರಿಪುರ ಹಾಗೂ ಸಾಗರ ತಾಲ್ಲೂಕಿನ ಗಡಿ ಭಾಗದಲ್ಲಿ ಉತ್ತಮ ಮಳೆಯಾದರೆ ಅಂಬ್ಲಿಗೊಳ್ಳ ಜಲಾಶಯವು ಭರ್ತಿಯಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಾಲೂಕಿನ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈಗಾಗಲೇ 850 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿರುವುದರಿಂದ, ಹಿರೇಕೆರೂರು ತಾಲ್ಲೂಕಿನಲ್ಲಿ ಪುರದಕೆರೆಯಿಂದ ಏತ ನೀರಾವರಿ ಮೂಲಕ ತಾಲೂಕಿನ ಅನೇಕ ಕೆರೆಗಳನ್ನು ತುಂಬಿಸುವ ಕಾಮಗಾರಿ ಆರಂಭವಾಗಿದೆ. ತುಂಗಾ ನದಿಯಿಂದ ಏತ ನೀರಾವರಿಯ ಮೂಲಕ ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಕೆರೆಗಳಿಗೆ ಅರ್ಧ ಟಿಎಂಸಿ ಹಾಗೂ ಶಿಕಾರಿಪುರದ ಜನತೆಗೆ ಕುಡಿಯುವ ನೀರು ಒದಗಿಸುವ ಸದುದ್ದೇಶದಿಂದ ಅಂಜನಾಪುರದ ಕೆರೆಗೆ ಅರ್ಧ ಟಿಎಂಸಿ ನೀರು ಹರಿಸುವ ಕೆಲಸ ನಡೆಯುತ್ತಿದೆ. ಈ ಕಾಮಗಾರಿಯು ಮುಂದಿನ ಆಗಸ್ಟ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇದೇ ತಿಂಗಳ 26 ಕ್ಕೆ ಒಂದು ವರ್ಷವಾಗಲಿದೆ ಆದ ಕಾರಣ ಪಕ್ಷದ ಹಿರಿಯ ನಾಯಕರು, ಮುಖಂಡರು, ಕಾರ್ಯುರ್ತರೆಲ್ಲಾ ಸೇರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರಿಗೆ ಅಭಿನಂದನೆ ಸಲ್ಲಿಸುವ ಕೆಲಸ ಮಾಡಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಜಿಲ್ಲಾ ಪಂಚಾಯತ್ ಸದಸ್ಯೆ ಅರುಂಧತಿ ರಾಜೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಉಡುಗುಣಿ, ಎಂಐಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ವಿವಿಧ ಇಲಾಖೆಗಳ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Get In Touch With Us info@kalpa.news Whatsapp: 9481252093
Discussion about this post