ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಧಿಕ ಮಾಸದಲ್ಲಿ ಏಕಭುಕ್ತ (ಒಂದೇ ಊಟ), ನಕ್ತಭೋಜನ (ರಾಶಿಯಲ್ಲಿ ಮಾತ್ರ ಭೋಜನ) ಅಥವಾ ಉಪವಾಸವ್ರತಗಳನ್ನು ಆಚರಿಸಬೇಕು. ಉಪವಾಸವ್ರತ, ನಕ್ತವ್ರತ ಅಥವಾ ಏಕಭುಕ್ತವ್ರತಗಳಲ್ಲಿ ಯಾವುದಾದರೂ ಒಂದನ್ನು ಆಚರಿಸಲು ಸಂಕಲ್ಪ ಮಾಡಿ ಯೋಗ್ಯಬ್ರಾಹ್ಮಣರನ್ನು ಆಹ್ವಾನಿಸಬೇಕು.
ಅಧಿಕಮಾಸದಲ್ಲಿ ಶುಕ್ಲಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಉಪವಾಸ, ನಕ್ತವ್ರತ ಅಥವಾ ಏಕಭುಕ್ತವ್ರತವನ್ನು ಸಂಕಲ್ಪಿಸಿ ಪ್ರತಿನಿತ್ಯದ ದಾನನೀಡಬೇಕು. ವಿಶೇಷವಾಗಿ ಅಪೂಪಗಳನ್ನು ದಕ್ಷಿಣೆಸಮೇತ ದಾನಮಾಡಬೇಕು. ಕೊನೆಯಲ್ಲಿ ಉದ್ಯಾಪನೆ ಮಾಡಿ ಶ್ರೀಹರಿಯನ್ನು ಪೂಜಿಸಿದಲ್ಲಿ ಸಕಲಪಾಪಗಳು ಪರಿಹಾರವಾಗುವುವು.
ದಾನ ಮಾಡಲು, ವ್ರತವನ್ನಾಚರಿಸಲು ಶಕ್ತಿ ಸಾಲದವನು ಉಪವಾಸ ವ್ರತಗಳಿಂದ ದೇಹದಂಡನೆ ಮಾಡಬೇಕು; ತೀರ್ಥಕ್ಷೇತ್ರಗಳಲ್ಲಿ ನೆಲೆಸಬೇಕು. ಶಾಸ್ತ್ರಶ್ರವಣವನ್ನಂತೂ ತಪ್ಪದೇ ಮಾಡಲೇಬೇಕು.
ಅಧಿಕಮಾಸದಲ್ಲಿ ನಕ್ತ(ರಾತ್ರಿಮಾತ್ರ) ಭೋಜನ ವ್ರತವನ್ನು ಮಾಡುವುದು ಸಹ ವಿಹಿತ. ಇದನ್ನು ಆಚರಿಸುವವನು ಸಕಲ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳವನು; ಇದು ನಿಶ್ಚಿತ.
ಪೂರ್ವಾಹ್ನ ದೇವತೆಗಳ ಭೋಜನಕಾಲ; ಮಧ್ಯಾಹ್ನ ಮುನಿಗಳದು; ಅಪರಾಹ್ನ ಪಿತೃಗಣಗಳದ್ದು. ನಾಲ್ಕನೆಯ ಭಾಗ ಮನುಷ್ಯನದು. ಅದನ್ನೂ ಮೀರಿ ರಾತ್ರಿಕಾಲದಲ್ಲಿ ಭೋಜನ ಮಾಡುವುದು ಅಧಿಕಮಾಸದಲ್ಲಿ ವಿಶೇಷಪುಣ್ಯಕರ. ಬ್ರಹ್ಮಹತ್ಯಾದಿ ಪಾಪಗಳನ್ನು ಇದು ಪರಿಹರಿಸುವುದು; ದಿನದಿನದಲ್ಲೂ ಅಶ್ವಮೇಧಯಾಗದ ಫಲವು ಲಭಿಸುವುದು.
ಒಂದು ಬಾರಿ ಮಾತ್ರ ಉಂಡ ಊಟ, ಕುಡಿದ ನೀರು ಎಂಬ ಏಕಾನ್ನಭೋಜನದ ವ್ರತ ಅಧಿಕಮಾಸದಲ್ಲಿ ವಿಶೇಷವಾಗಿ ವಿಹಿತ. ಇದನ್ನು ಆಚರಿಸುವವನು ಚತುರ್ಭುಜದಿಂದ ಕೂಡಿದ ಸಾರೂಪ್ಯ ಮುಕ್ತಿಯನ್ನು ಪಡೆಯುವನು. ಈ ವ್ರತಕ್ಕೆ ಸಮನಾದ ಬೇರೊಂದು ಪವಿತ್ರವ್ರತ ಇಲ್ಲ. ಇದರ ಅನುಷ್ಠಾನದಿಂದ ಮುನಿಗಳು ಶ್ರೇಷ್ಠಸಿದ್ಧಿಯನ್ನು ಮುಂದೆ ಮುಕ್ತಿಯನ್ನೂ ಪಡೆದಿರುವರು.
ದಶಮಿ ಹಾಗೂ ದ್ವಾದಶಿಗಳಂದು ಒಂದು ಬಾರಿ ಮಾತ್ರ ಭೋಜನ ಎಂಬುದು ಏಕಾದಶೀ ಉಪವಾಸಕ್ಕೆ ಅಗತ್ಯವಾದ ವ್ರತ. ಅಧಿಕಮಾಸದಲ್ಲಿ ಸಹ ಈ ನಿಯಮವನ್ನು ಶ್ರೀಹರಿಪ್ರೀತಿಗೆಂದು ಪಾಲಿಸುವ ಮನುಷ್ಯನು ಸ್ವರ್ಗವನ್ನು ಪಡೆಯುವನು.
ಸಕಲಕಾಮನೆಗಳು ಸಿದ್ಧಿಗಾಗಿ ಉಪವಾಸವ್ರತವನ್ನು ಅಧಿಕಮಾಸದಲ್ಲಿ ಮಾಡಲೇಬೇಕು. ಪೂರ್ತಿತಿಂಗಳು ಉಪವಾಸ. ಒಂದು ಪಕ್ಷದ ಉಪವಾಸ, ಆರು ದಿನ, ಮೂರು ದಿನಗಳ ಉಪವಾಸ ಅಥವಾ ಒಂದು ದಿನವಾದರೂ ಉಪವಾಸವನ್ನು ಯಥಾಶಕ್ತಿ ಆಚರಿಸಲೇಬೇಕು. ಪುರುಷರು, ಸ್ತ್ರೀಯರು, ಕನ್ಯೆಯರು, ಕುಮಾರರು, ರೋಗಿಗಳು, ವೃದ್ಧರು ಸಹ ಒಂದು ದಿನವಾದರೂ ಉಪವಾಸವನ್ನು ಮಾಡಲೇಬೇಕು. ವಿಧವೆಯರಿಗಂತೂ ಇದು ವಿಶೇಷ ಕರ್ತವ್ಯ.
ಶ್ರೀಹರಿಗೆ ಪ್ರಿಯವಾದ ಅಧಿಕಮಾಸದಲ್ಲಿ ಒಂದು ತಿಂಗಳುಪೂರ್ತಿ ಉದ್ದನ್ನು ಉಪಯೋಗಿಸದಿರುವುದು ಮತ್ತೊಂದು ವ್ರತ. ಇದರಿಂದ ಸಕಲಪಾಪಗಳು ಪರಿಹಾರವಾಗಿ ವಿಷ್ಣುಲೋಕವು ಲಭಿಸುವುದು.
ಸ್ವರ್ಗಪ್ರಾಪ್ತಿಯನ್ನು ಬಯಸುವವನು ಅಧಿಕಮಾಸದಲ್ಲಿ ಹುಲ್ಲು, ಧಾನ್ಯಗಳನ್ನು ನೀಡುವ ಮೂಲಕ ವಿಶೇಷವಾಗಿ ಗೋಸೇವೆ ಮಾಡಬೇಕು. ಅಧಿಕಮಾಸದಲ್ಲಿ ಗೋವುಗಳಿಗೆ ಮಾಡುವ ಪ್ರದಕ್ಷಿಣೆಯೂ ಇಡೀ ಭೂಮಿಯನ್ನು ಪ್ರದಕ್ಷಿಣೆ ಮಾಡಿದ ಫಲವನ್ನು ನೀಡುವುದು.
ಗೋವುಗಳ ಸ್ಪರ್ಶ ಪಾಪನಾಶಕ; ಗೋದಾನ ಸ್ವರ್ಗಪ್ರಾತಕ; ಗೋವುಗಳ ಸಂರಕ್ಷಣೆ ಸಂಪತ್ಕರ; ಗೋದಾನಕ್ಕಿಂತ ಮಿಗಿಲಾದ ಮತ್ತೊಂದು ಸಂಪತ್ತು ಮತ್ತೊಂದಿಲ್ಲ.
ಕಾಡಿನಲ್ಲಿ ಒಣಗಿದ ಹುಲ್ಲನ್ನು ತಿಂದು, ನೀರನ್ನು ಕುಡಿದು ಗೋವುಗಳು ಅಮೃತವನ್ನು ನೀಡುವವು. ಗೋಮಯವು ಸಹ ಲೋಕಗಳನ್ನು ಪಾವನಗೊಳಿಸುವವು; ಆದ್ದರಿಂದ ಗೋವುಗಳಿಗೆ ಸಮನಾದದ್ದು ಲೋಕದಲ್ಲಿ ಬೇರಾವುದೂ ಇಲ್ಲ.
ವಿದ್ಯುಕ್ತವಾಗಿ ಸತ್ಪಾತ್ರರಿಗೆ ನೀಡುವ ಗೋದಾನವು ದಾನನೀಡುವವನನ್ನು ಹಾಗೂ ಅವನ ಸಾವಿರಾರು ಕುಲದವರನ್ನು ಉದ್ಧರಿಸುವುದು. ಅಪಾತ್ರರಿಗೆ ಗೋದಾನ ನೀಡುವವನು ತನ್ನ ಇಪ್ಪತ್ತೊಂದು ಕುಲದೇವರೊಂದಿಗೆ ನರಕಕ್ಕೆ ಹೋಗುವನು; ಅರ್ಹತೆ ಇಲ್ಲದೆ ದಾನ ಸ್ವೀಕರಿಸಿದವನು ಸಹ ಅನರ್ಥಕ್ಕೆ ಗುರಿಯಾಗುವನು. ಆದ್ದರಿಂದ ತನಗೆ ಒಳಿತನ್ನು ಬಯಸುವವನು ಅಪಾತ್ರರಿಗೆ ದಾನ ನೀಡಕೂಡದು. ಗೀತಾ, ಗೋವು ಹಾಗೂ ಚಿನ್ನ ಇವು ಸತ್ಪಾತ್ರರಿಗೆ ದಾನ ನೀಡಿದಾಗ ಅನಂತವೆನ್ನಿಸುವುದು.
ವಿಶ್ವರೂಪಧರನಾದ ಶ್ರೀಹರಿಯು ಯಜ್ಞಕ್ಕೆ ಸಾಧನಭೂತವೂ, ಲೋಕದ ಪಾಪರಾಶಿಯನ್ನು ಪರಿಹರಿಸುವಂತಹುದೂ ಆದ ಈ ಗೋದಾನದಿಂದ ಪ್ರೀತನಾಗಲಿ.
ಸಮುದ್ರಶಾಯಿಯೂ, ಬ್ರಹ್ಮಜನಕನೂ, ಪದ್ಮನಾಭನೂ, ನಾಗಶಯನನೂ, ಸರ್ವೋತ್ತಮನೂ ಆದ ಪ್ರಭು ಶ್ರೀಹರಿಯು ಈ ಗೋದಾನದಿಂದ ಪ್ರೀತನಾಗಲಿ.
ಅಧಿಕಮಾಸ ಬಂದಾಗ ವೇದವ್ಯಾಸರನ್ನೇ ಪುರುಷೋತ್ತಮನಾದ ಶ್ರೀಹರಿ ಎಂದು ಧ್ಯಾನಿಸಿ ಯಾವ ಜಲದಲ್ಲಿ ಸ್ನಾನ ಮಾಡಿದರೂ ವಿಶೇಷ ಪುಣ್ಯ ಲಭಿಸುವುದು.
ತ್ರಿವರ್ಣದ ಸ್ತ್ರೀಪುರುಷರುಗಳಿಂದ ಮಾಡಲ್ಪಟ್ಟ ಪಾಪಗಳೆಲ್ಲ ಅಧಿಕಮಾಸದಲ್ಲಿ ಸ್ನಾನಕ್ಕೆ ಅಶ್ವತ್ಥದ ಎಲೆಯಂತೆ ಕಂಪಿಸುವವು. ಏಳು ಜನ್ಮಗಳಿಂದ ಒದಗಿದ ಪಾಪ ಒಂದೇ ಸ್ನಾನದಿಂದ ಪರಿಹಾರವಾಗುವುದು. ಹತ್ತು ಜನ್ಮಗಳ ಪಾಪ ಪರ್ವಕಾಲದ ಸ್ನಾನದಿಂದಲೂ, ನೂರು ಜನ್ಮಗಳ ಪಾಪ ಪಕ್ಷವೊಂದರ ಸ್ನಾನದಿಂದಲೂ, ಸಾವಿರಾರು ಜನ್ಮಗಳ ಪಾಪ ಒಂದು ತಿಂಗಳ ಸ್ನಾನದಿಂದಲೂ ಅಧಿಕಮಾಸದಲ್ಲಿ ಪರಿಹಾರವಾಗುವವು.
ಸ್ನಾನದಿಂದ ತೇಜಸ್ಸು ಲಭಿಸುತ್ತದೆ. ಹೋಮದಿಂದ ಉತ್ತಮ ಸಂಪತ್ತು ದೊರೆಯುತ್ತದೆ. ಮೌನಭೋಜನದಿಂದ ಆಯುಷ್ಯ ಹೆಚ್ಚುತ್ತದೆ. ಆದ್ದರಿಂದ ಸ್ನಾನ, ಹೋಮ ಹಾಗೂ ಭೋಜನ ಸಮಯದಲ್ಲಿ ಮೌನವ್ರತವನ್ನು ಆಚರಿಸಬೇಕು.
ಸ್ನಾನ ಮಾಡದಿದ್ದಲ್ಲಿ ವರುಣನು ತೇಜಸ್ಸನ್ನು ಅಪಹರಿಸುವನು. ಹೋಮ ಮಾಡದಿದ್ದಲ್ಲಿ ಅಗ್ನಿಯು ಸಂಪತ್ತನ್ನು ಕಸಿಯುವನು. ಮೌನವನ್ನಾಚರಿಸದಿದ್ದಲ್ಲಿ ಮೃತ್ಯುವು ಆಯುಷ್ಯವನ್ನು ಕಳೆಯುವುದು. ಆದ್ದರಿಂದ ಸ್ನಾನ ಹೋಮಾದಿಗಳನ್ನು ಮೌನದಿಂದಲೇ ಆಚರಿಸಲೇಬೇಕು.
ಒಂದು ತಿಂಗಳ ಅಧಿಕಮಾಸಕ್ಕೆ ಉಳಿದ ಹನ್ನೆರಡು ತಿಂಗಳುಗಳು ಸಮವೆನ್ನಿಸವು. ಮೌನಭೋಜನ ಇದಕ್ಕಿಂತ ಮಿಗಿಲು. ಪೃಥ್ವೀದಾನ ಒಂದು ಕಡೆ; ಮೌನಭೋಜನ ಮತ್ತೊಂದು ಕಡೆ. ಇವು ಸಮವೆನ್ನಿಸವು ಎಂದು ಬ್ರಹ್ಮವಿಷ್ಣುಮಹೇಶ್ವರ ವಚನ (ಪೃಥ್ವೀದಾನಕ್ಕಿಂತ ಮೌನವ್ರತ ಮಿಗಿಲು ಎಂದರ್ಥ).
ಅಧಿಕಮಾಸದಲ್ಲಿ ಸ್ನಾನ ಮಾಡುವ ಮನುಷ್ಯ ಧನ್ಯ; ಅವನಿಗಿಂತಲೂ ಪುರುಷೋತ್ತಮನಿಗೆ ದೀಪಾರಾಧನೆ ಮಾಡುವವನು ಇನ್ನೂ ಹೆಚ್ಚು ಧನ್ಯ ಅವನಿಗಿಂತ ಸ್ನಾನ, ಭೋಜನ ಹಾಗೂ ಪೂಜಾಕಾಲದಲ್ಲಿ ಮೌನವ್ರತ ಮಾಡುವವನು ಮತ್ತೂ ಧನ್ಯ; ಜನ್ಮಾರಭ್ಯ ಮಾಡಿದ ಸಕಲದಾನಗಳು ಅದರಿಂದ ನಾಶವಾಗುತ್ತವೆ. ಸಂಶಯವಿಲ್ಲ.
ಪುರುಷೋತ್ತಮನೇ! ನಾನು ಸಮರ್ಪಿಸುವ ಈ ಉತ್ತಮದೀಪವನ್ನು ಸ್ವೀಕರಿಸು; ಪ್ರಸನ್ನನಾಗಿ ನಾನು ಬಯಸಿದ್ದನ್ನು ನೀಡಿ ಅನುಗ್ರಹಿಸು. ದೀಪವು ಕತ್ತಲೆಯನ್ನು ಕಳೆಯುವುದು; ಕಾಂತಿಯನ್ನು ನೀಡುವುದು. ಆದ್ದರಿಂದ ದೀಪದಾನದಿಂದ ಪುರುಷೋತ್ತಮ ಪ್ರೀತನಾಗಲಿ. ಅವಿದ್ಯೆಯ ಕತ್ತಲಿನಿಂದ ಕೂಡಿದ, ಒಡಲಲ್ಲಿ ಪಾಪವನ್ನು ತುಂಬಿಕೊಂಡಿರುವ ಸಂಸಾರಕ್ಕೆ ದೀಪವು ಜ್ಞಾನಮೋಕ್ಷಗಳನ್ನು ನೀಡುವಂತಹುದು; ಆದ್ದರಿಂದಲೇ ನಾನು ನಿನಗೆ ದೀಪವನ್ನು ನೀಡಿರುವೆನು.
ವೇದೋಕ್ತವಾದ ಸಕಲಧರ್ಮಗಳು, ನಾನಾತೆರನಾದ ದಾನಗಳು ಸಹ ಅಧಿಕಮಾಸದಲ್ಲಿ ದೀಪಸಮರ್ಪಣೆಗೆ ಹದಿನಾರನೆಯ ಒಂದಂಶಕ್ಕೂ ಸಾಟಿ ಎನ್ನಿಸವು.
ಸಕಲತೀರ್ಥಗಳು ಹಾಗೂ ಸಕಲಶಾಸ್ತ್ರಗಳು ಅಧಿಕಮಾಸದ ದೀಪಾರಾಧನೆಯ ಹದಿನಾರನೆಯ ಒಂದಂಶಕ್ಕೂ ಸಾಟಿ ಎನ್ನಿಸವು.
ಯೋಗ, ಜ್ಞಾನ, ಸಾಂಖ್ಯ ಹಾಗೂ ಸಕಲ ತಂತ್ರಗಳು ಸಹ ಅಧಿಕಮಾಸದ ದೀಪಾರಾಧನೆಯ ಹದಿನಾರನೆಯ ಒಂದಂಶಕ್ಕೂ ಸಾಟಿಯಾಗಲಾರವು.
ಕೃಚ್ಛ್ರ, ಚಾಂದ್ರಾಯಣ ಮೊದಲಾದ ಸಕಲವ್ರತಗಳು ಅಧಿಕಮಾಸದ ದೀಪಕ್ಕೆ ಹದಿನಾರನೆಯ ಒಂದಂಶಕ್ಕೂ ಸಾಟಿಯಾಗಲಾರವು.
ವೇದಾಧ್ಯಯನ, ಗಯಾಶ್ರಾದ್ಧ, ಗೋಮತೀತೀರದ ಸೇವನೆಗಳು ಸಹ ಅಧಿಕಮಾಸದ ದೀಪಕ್ಕೆ ಹದಿನಾರನೆಯ ಒಂದಂಶಕ್ಕೂ ಸಾಟಿಯಿಲ್ಲ.
ಸಾವಿರಾರು ಗ್ರಹಣಗಳು, ನೂರಾರು ವ್ಯತೀಪಾತಯೋಗಗಳು ಸಹ ಅಧಿಕಮಾಸದ ದೀಪಕ್ಕೆ ಹದಿನಾರನೆಯ ಒಂದಂಶಕ್ಕೂ ಸಾಟಿಯೆನ್ನಿಸವು.
ಕುರುಕ್ಷೇತ್ರ ಮೊದಲಾದ ಕ್ಷೇತ್ರಗಳು ದಂಡಕಾರಣ್ಯ ಮೊದಲಾದ ಅರಣ್ಯಗಳು ಅಧಿಕಮಾಸದ ದೀಪಕ್ಕೆ ಹದಿನಾರನೆಯ ಒಂದಂಶಕ್ಕೂ ಸಾಟಿಯೆನ್ನಿಸವು. ಶಕ್ತನಾದವನು ಆಯುಷ್ಯ ಅಸ್ಥಿರ ಎಂಬುದನ್ನು ಗಮನಿಸಿ ಅಧಿಕಮಾಸದಲ್ಲಿ ವೈಷ್ಣವಬ್ರಾಹ್ಮಣನಿಗೆ ಶ್ರೀಮದ್ಭಾಗವತ ಗ್ರಂಥವನ್ನು ದಾನವಾಗಿ ನೀಡಬೇಕು.
ಶ್ರೀಮದ್ಭಾಗವತವು ಸಾಕ್ಷಾತ್ ಶ್ರೀಹರಿಯ ಪ್ರತಿಕೃತಿ; ವಿದ್ವಾಂಸನಾದ ವೈಷ್ಣವ ಬ್ರಾಹ್ಮಣನಿಗೆ ಅದನ್ನು ದಾನವಾಗಿ ನೀಡಬೇಕು.
ಶ್ರೀಮದ್ಭಾಗವತ ಗ್ರಂಥವನ್ನು ದಾನ ನೀಡುವವನು ಅಪ್ಸರೆಯರ ಗುಂಪಿನಿಂದ ಸೇವಿತನಾಗಿ ವಿಮಾನವನ್ನೇರಿ ಯೋಗಿಗಳಿಗೂ ದೊರಕದ ಗೋಲೋಕವನ್ನು ಹೊಂದುವನು.
ಸಾವಿರಾರು ಕನ್ಯಾದಾನಗಳು, ನೂರಾರು ವಾಜಪೇಯಯಾಗಗಳು, ಉತ್ತಮ ಧಾನ್ಯಗಳನ್ನು ಬೆಳೆಯುವ ಕ್ಷೇತ್ರಗಳ ದಾನಗಳು, ತುಲಾಪುರುಷದಾನಾದಿ ಎಂಟು ಮಹಾದಾನಗಳು, ವೇದೋಪದೇಶಗಳು ಮೊದಲಾದವುಗಳು ಶ್ರೀಮದ್ಭಾಗವತದಾನದ ಹದಿನಾರನೆಯ ಒಂದಂಶಕ್ಕೂ ಸಾಟಿಯೆನ್ನಿಸವು (ಇಲ್ಲಿ ಶ್ರೀಮದ್ಭಾಗವತ ಎಂದರೆ ಹದಿನೆಂಟು ಮಹಾಪುರಾಣಗಳಲ್ಲಿ ಪ್ರಧಾನವಾದ ಶ್ರೀಮದ್ಭಾಗವತಮಹಾಪುರಾಣ ಹಾಗೂ ಭಗವಂತನಾದ ಮಹಾವಿಷ್ಣುವಿನ ಮಹಿಮೆಯನ್ನು ತಿಳಿಸುವ ಮಹಾಭಾರತ, ಭಗವದ್ಗೀತೆ, ಸರ್ವಮೂಲಗ್ರಂಥಗಳು, ನ್ಯಾಯಸುಧಾರಿ ಟೀಕಾಗ್ರಂಥಗಳು, ಪರಿಮಳ ಮೊದಲಾದ ಟಿಪ್ಪಣಿ ಗ್ರಂಥಗಳು, ನ್ಯಾಯಾಮೃತ, ಯುಕ್ತಿಮಲ್ಲಿಕಾ ಮೊದಲಾದ ವಾದ ಗ್ರಂಥಗಳು, ಹರಿಕಥಾಮೃತಸಾರ ಮೊದಲಾದ ಹರಿದಾಸಸಾಹಿತ್ಯದ ಕೃತಿಗಳು ಸಹ ಗ್ರಾಹ್ಯ; ಆದ್ದರಿಂದ ಇವುಗಳಲ್ಲಿ ಯಾವುದೇ ಗ್ರಂಥದ ದಾನವೂ ವಿಹಿತ).
ಅಧಿಕಮಾಸದಲ್ಲಿ ವಿಹಿತವಾದ ಬಗೆಬಗೆಯ ದಾನಗಳು ಹಾಗೂ ಅವುಗಳ ಫಲ ಪದ್ಮಪುರಾಣದಲ್ಲಿ ನಿರೂಪಿತವಾಗಿದ್ದು ಅವುಗಳಲ್ಲಿ ಕೆಲವು ಹೀಗಿವೆ:
ಅಧಿಕಮಾಸದಲ್ಲಿ ವಿಶೇಷವಾಗಿವ್ರತಗಳ ಪೂರ್ಣತೆಗಾಗಿ ಕೈಗೊಳ್ಳಬೇಕಾದ ವ್ರತಗಳು ವಿಹಿತವಾದ ದಾನಗಳು ರಾತ್ರಿಭೋಜನವ್ರತ ಬ್ರಾಹ್ಮಣಭೋಜನ ಅಯಾಚಿತವ್ರತ ಸುವರ್ಣದಾನ ಅಮಾವಾಸ್ಯೆಯವರೆಗೆ ಮಾಸೋಪವಾಸ ಗೋದಾನ, ನೆಲ್ಲೀಕಾಯಿ ಸ್ನಾನ, ದಧಿ ಅಥವಾ ಕ್ಷೀರದಾನ ಫಲಾಹಾರವ್ರತ ಫಲದಾನ, ತೈಲತ್ಯಾಗವ್ರತ, ಘೃತದಾನ, ಘೃತತ್ಯಾಗವ್ರತ, ಕ್ಷೀರದಾನ, ಧಾನ್ಯತ್ಯಾಗವ್ರತ, ಗೋಧಿ ಮತ್ತು ಅಕ್ಕಿ ದಾನ, ನೆಲದ ಮೇಲೆ ಮಲಗುವ ವ್ರತ, ಶಯ್ಯಾದಾನ, ಎಲೆಯಲ್ಲಿ ಊಟ ಮಾಡುವ ನಿಯಮ, ಬ್ರಾಹ್ಮಣಭೋಜನ, ಮೌನವ್ರತ, ಘಂಟೆ, ತಿಲ, ಸುವರ್ಣಗಳ ದಾನ, ನಖಕೇಶಧಾರಣೆ, ದರ್ಪಣದಾನ, ಪಾದರಕ್ಷೆಗಳ ತ್ಯಾಗ, , ಪಾದರಕ್ಷೆಗಳ ದಾನ, ಅಲವಣವ್ರತ, ಬಗೆಬಗೆಯ ರಸಪದಾರ್ಥಗಳ ದಾನ, ದೀಪದಾನದ ವ್ರತ, ಬಂಗಾರದ, ಬತ್ತಿಯ ದೀಪದ ದಾನ, ಧಾರಣಪಾರಣ ವ್ರತ, ಎಂಟು ಉದಕುಂಭಗಳ ದಾನ ಸಾಮಾನ್ಯವಾಗಿ ಅಧಿಕಮಾಸದಲ್ಲಿ ವಿಶೇಷವಾಗಿ ಕೈಗೊಳ್ಳಬೇಕಾದ ವ್ರತಗಳು ಹಾಗೂ ಆ ವ್ರತಗಳ ಪೂರ್ಣತೆಗಾಗಿ ವಿಹಿತವಾದ ದಾನಗಳು. ಅನಿವಾರ್ಯ ಕಾರಣಗಳಿಂದ ಇವುಗಳ ದಾನ ಅಶಕ್ಯವಾದಲ್ಲಿ ಬ್ರಾಹ್ಮಣರನ್ನು ಯಥಾಶಕ್ತಿ ಸಂತೃಪ್ತಿಪಡಿಸಿ ಅವರಿಂದ ವ್ರತಸಂಕ್ರಾಂತಿಯ ಆಶೀರ್ವಚನವನ್ನು ಪಡೆದುಕೊಳ್ಳಬೇಕು.
ವಿತ್ತಶಾಠ್ಯವನ್ನು ಮಾಡದೇ ಬ್ರಾಹ್ಮಣನಿಗೆ ದಾನನೀಡಬೇಕು. ಐಶ್ವರ್ಯವಿದ್ದಗಾಲೂ ಯಥಾಶಕ್ತಿ ದಾನಮಾಡದವರು ರೌರವನರಕವನ್ನು ಹೊಂದುವನು.
ಅಧಿಕಮಾಸದಲ್ಲಿ ಬ್ರಹ್ಮಯಜ್ಞಾಂಗವಾದ ಪಿತೃತರ್ಪಣ, ಅಮಾವಾಸ್ಯಾತಿಲತರ್ಪಣಾದಿಗಳನ್ನು ಎಂದಿನಂತೆ ತಪ್ಪದೇ ನೀಡಲೇಬೇಕು. ಅಧಿಕಮಾಸದಲ್ಲೇ ಒದಗುವ ಮೃತರಾದವರ ಶ್ರದ್ಧವನ್ನು ಅಧಿಕವೈಶಾಖಮಾಸದಲ್ಲಿ ಪಿಂಡಪ್ರದಾನಪೂರ್ವಕವಾಗಿಯೇ ಆಚರಿಸಬೇಕು. ನಿಜಮಾಸದಲ್ಲಿ ಮೃತರಾದವರ ಶ್ರಾದ್ಧವನ್ನು ಅಧಿಕಮಾಸ ಹಾಗೂ ನಿಜಮಾಸ ಎರಡರಲ್ಲಿಯೂ ಮಾಡಬೇಕು ಎಂಬುದು ಕಾಲಾದರ್ಶಗ್ರಂಥದ ಪಕ್ಷ:
ಇದರಂತೆ ವೃದ್ಧವಾಸಿಷ್ಠ, ಸತ್ಯವ್ರತ, ಹೇಮಾದ್ರಿ ಮೊದಲಾದವರ ಪಕ್ಷವೂ ಇದೇ ಆಗಿದೆ. ಅಧಿಕಮಾದಲ್ಲಿ ಬ್ರಾಹ್ಮಣಭೋಜನಾದಿಗಳನ್ನು ಮಾಡಿಸಿ ನಿಜಮಾಸದಲ್ಲಿ ಮಾತ್ರ ಪ್ರತಿವರ್ಷದ ಶ್ರಾದ್ಧವನ್ನು ಪಿಂಡಪ್ರದಾನಪೂರ್ವಕ ಮಾಡಬೇಕು ಎಂಬುದು ಸ್ಮತಿಮುಕ್ತಾವಲಿಯಲ್ಲಿ ಉದಾಹೃತವಾದ ನಿರ್ಣಯಾಮೃತ ಮೊದಲಾದ (ನಿರ್ಣಯಸಿಂಧು ಇತ್ಯಾದಿ) ಗ್ರಂಥಕಾರರ ಪಕ್ಷ:
ಹಿಂದಿನ ಸಂವತ್ಸರ ಆ ಮಾಸದಲ್ಲಿ ಮೃತರಾದವರ ಪ್ರಥಮಾಬ್ದಿಕವನ್ನು ಈ ಸಂವತ್ಸರದ ಆ ಮಾಸದ ಅಧಿಕಮಾಸದಲ್ಲಿಯೇ ಮಾಡಬೇಕು. ಇತರ ಶ್ರಾದ್ಧಾದಿಗಳನ್ನು ನಿಜಮಾಸದಲ್ಲಿಯೇ ಮಾಡಬೇಕು. ಅಧಿಕಮಾಸದಲ್ಲಿ ಸಂಕಲ್ಪಶ್ರಾದ್ಧವನ್ನು ಮಾಡುವ ಪಕ್ಷವೂ ಉಂಟು. ಮಾಸಿಕ ಶ್ರಾದ್ಧವನ್ನು ಅಧಿಕಮಾಸದಲ್ಲಿ ಸಹ ಮಾಡಬೇಕು.
ಅಧಿಕಮಾಸದ ಮಹಿಮೆಯನ್ನು ಬರೆದು ವಸ್ತ್ರಸಮೇತವಾಗಿ ಬ್ರಾಹ್ಮಣನಿಗೆ ವಿಧ್ಯುಕ್ತವಾಗಿ ದಾನಮಾಡುವವನು ಮೂರುಕುಲಗಳನ್ನು ಉದ್ಧರಿಸಿ ಗೋಪಿಕಾವೃಂದದಿಂದ ಸುತ್ತುವರಿದ ಶ್ರೀಪುರುಷೋತ್ತಮ ನೆಲೆಸಿದ ಗೋಲೋಕವನ್ನು ಪಡೆಯುವನು.
ಉತ್ತಮವಾದ ಅಧಿಕಮಾಸಮಹಾತ್ಮ್ಯ ಪುಸ್ತಕವನ್ನು ಬರೆದು ಮನೆಯಲ್ಲಿ ಇರಿಸಿಕೊಳ್ಳುವುದು ಪುಣ್ಯಕರ. ಅಂತಹ ಮನೆಯಲ್ಲಿ ಸಕಲತೀರ್ಥಗಳು ಸದಾ ನೆಲೆಸಿರುವವು.
ಅಧಿಕಮಾಸದ ಮಹಿಮೆಯನ್ನು ಕೇಳಿ ಧರ್ಮವು ತಿಳಿಯುವುದು; ಕೇಳಿದಂತೆ ಪಾಪಬುದ್ಧಿ ತೊಲಗುವುದು. ಕೇಳುತ್ತ ಕೇಳುತ್ತ ಮೋಹವು ಪರಿಹಾರವಾಗುವುದು; ಶ್ರವಣದ ಫಲವಾಗಿ ಜ್ಞಾನಾಮೃತವು ಲಭಿಸುವುದು.
ಅಧಿಕಮಾಸದ ಮಹಿಮೆಯ ಕೀರ್ತನೆ ನಡೆಯುವ ಸ್ಥಳದಲ್ಲಿಯೂ ಸಕಲತೀರ್ಥಗಳು ನೆಲೆಸುವುದು ಹಾಗೂ ತುಲಸಿಯೊಂದಿಗೆ ಶ್ರೀಹರಿಯು ಸನ್ನಿಹಿತನಾಗುವನು.
ಯಾವ ಮನುಷ್ಯನು ಅಧಿಕಮಾಸದ ಮಹಾತ್ಮ್ಯವನ್ನು ಕೇಳುವನೋ ಅಥವಾ ಹೇಳುವನೋ, ಅವನೂ ಸಹ ಶ್ರೀಹರಿಯು ನೆಲೆಸಿರುವ ಪುಣ್ಯವಾದ ವೈಕುಂಠವನ್ನು ಸೇರುವನು.
ಪಾವನವಾದ ಈ ಅಧಿಕಮಾಸ ಮಹಾತ್ಮ್ಯೆಯನ್ನು ಭಕ್ತಿಯಿಂದ ಶ್ರವಣ ಮಾಡಬೇಕು. ಇದರ ಒಂದೊಂದು ಶ್ಲೋಕದ ಕೇವಲ ಶ್ರವಣದಿಂದಲೂ ಸಕಲಪಾಪಗಳು ಪರಿಹಾರವಾಗುವವು. ಗಂಗಾದಿ ಸಕಲತೀರ್ಥಗಳಲ್ಲಿ ಸ್ನಾನಮಾಡಿದ ಪುಣ್ಯ ಇದರ ಶ್ರವಣದಿಂದ ಲಭಿಸುವುದು. ಸಕಲಭೂಪ್ರದಕ್ಷಿಣೆಯನ್ನು ಮಾಡಿದ ಪುಣ್ಯವೂ ಇದರ ಶ್ರವಣದಿಂದ ಬರುವುದು. ಇದನ್ನು ಕೇಳಿದ ಬ್ರಾಹ್ಮಣ ಬ್ರಹ್ಮವರ್ಚಸ್ವಿಯಾಗುವನು; ಕ್ಷತ್ರಿಯ ಚಕ್ರವರ್ತಿಯಾಗುವನು; ವೈಶ್ಯ ಕುಬೇರನೆನ್ನಿಸುವನು; ಶೂದ್ರ ಹಿರಿಮೆ ಗಳಿಸುವನು.
ಪುರುಷೋತ್ತಮ ಮಾಸದಲ್ಲಿ ರಾಧಾ ಪುರುಷೋತ್ತಮರ ಪೂಜೆಯನ್ನು ಮಾಡಬೇಕು. ಪೂಜಾವಿಧಾನವನ್ನು ಬೃಹನ್ನಾರದೀಯ ಪುರಾಣವೇ ತಿಳಿಸುತ್ತದೆ. ವಿದ್ವಾಂಸರಿಂದ ಅದನ್ನು ತಿಳಿದುಕೊಂಡು, ಶ್ರೇಷ್ಠ ಬ್ರಾಹ್ಮಣರನ್ನು ಪುರೋಹಿತರನ್ನಾಗಿ ಪಡೆದು ಈ ವ್ರತವನ್ನು ಆಚರಿಸಬೇಕು. ಒಂದು ತಿಂಗಳ ವ್ರತ. ಕೃಷ್ಣಪಕ್ಷದ ಅಷ್ಟಮೀ, ನವಮೀ, ಚತುರ್ದಶಿ ಅಥವಾ ಅಮಾವಾಸ್ಯೆಯಂದು ಇದರ ಉದ್ಯಾಪನೆಯನ್ನು ಮಾಡಬೇಕು. ಉದ್ಯಾಪನೆಯ ದಿವಸ ವ್ರತಸಂಪೂರ್ತಿಗಾಗಿ ಗೋದಾನವನ್ನು ಮಾಡಬೇಕು.
ದಾನ ಇದು ಧನಸಾಪೇಕ್ಷವಾದದ್ದು. ಹಣವಿದ್ದರೆ ಮಾಡಲಾಗುತ್ತದೆ, ಇಲ್ಲದಿದ್ದರೆ ಇಲ್ಲ. ಆದರೆ, ಪೂಜೆಗೇನು ಬೇಕು? ಒಂದು ಕೊಡ ನೀರು. ಒಂದು ಬೊಗಸೆ ತುಳಸಿ. ಪೂರ್ಣವಾದ ಶ್ರದ್ಧೆ. ನಿರ್ಮಲವಾದ ಭಕ್ತಿ. ಮೊದಲ ಎರಡು ದುರ್ಲಭವಲ್ಲ. ಕಡೆಯ ಎರಡು ಇಲ್ಲದಿದ್ದರೆ ವೈಷ್ಣವನೇ ಅಲ್ಲ. ಹೀಗಾಗಿ ವೈಷ್ಣವನಾದವನು ಅವಶ್ಯವಾಗಿ ರಾಧಾಪುರುಷೋತ್ತಮರ ಪೂಜಾವ್ರತವನ್ನು ಮಾಡಬೇಕು ಎಂದು ಶಾಸ್ತ್ರ ಆದೇಶಿಸುತ್ತದೆ. ಪುರುಷೋತ್ತಮಮಾಸದ ಕಾಲ ಮೋಕ್ಷದಾಯಕವಾದ ಕಾಲ. ಹೀಗಾಗಿ ಮೋಕ್ಷಪ್ರದವಾದ ಭಾಗವತದ ಶ್ರವಣ ಅನಂತ ಪುಣ್ಯಪ್ರದಾಯಕ.
(ವಿವಿಧ ಮೂಲಗಳಿಂದ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post