ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೇಂದ್ರ ಸರ್ಕಾರದ ವಿದ್ಯುತ್ ಬಿಲ್ 2020 ತಿದ್ದುಪಡಿ ವಿರೋಧಿಸಿ ಹಾಗೂ ವಿದ್ಯುತ್ ಸಂಸ್ಥೆಗಳ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರು ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ವಿದ್ಯುತ್ ಸಂಸ್ಥೆಗಳ ಖಾಸಗೀಕರಣವನ್ನು ವಿರೋಧಿಸಿದರು.
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿದ ಕೆಪಿಟಿಸಿಎಲ್ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್, ವಿದ್ಯುತ್ ಬಿಲ್ ತಿದ್ದುಪಡಿ 2020ನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿ, ರಾಜ್ಯಗಳ ಅಭಿಪ್ರಾಯ ಕೇಳಿತ್ತು. ಈ ವೇಳೆ ಮುಖ್ಯ ಕಾರ್ಯದರ್ಶಿಯರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. ಈ ಕುರಿತಂತೆ ಮುಖ್ಯಮಂತ್ರಿಯವರೂ ಸಹ ಖಾಸಗೀಕರಣ ಮಾಡುವುದಿಲ್ಲ ಎಂದಿದ್ದಾರೆ. ಆದರೆ, ಉತ್ತರ ಪ್ರದೇಶದಲ್ಲಿ ಈಗಾಗಲೇ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ದಾಪುಗಾಲು ಇಟ್ಟಿದೆ. ಇಂತಹ ವೇಳೆಯಲ್ಲಿ ನಮ್ಮ ಸಹೋದ್ಯೋಗಿಗಳಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಇಲ್ಲಿ ಕಪ್ಪುಪಟ್ಟಿ ಧರಿಸಿ, ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಧೀಕ್ಷಕ ಇಂಜಿನೀಯರ್’ಗಳಾದ ಶಶಿಧರ್, ವೆಂಕಟೇಶ್ ಪ್ರಸಾದ್, ಕಾರ್ಯನಿರ್ವಾಹಕ ಇಂಜಿನೀಯರ್ ವೀರೇಂದ್ರ, ಇಂಜಿನೀಯರ್ ಅಸೋಸಿಯೇಶನ್ ವಲಯ ಪ್ರತಿನಿಧಿ ಯೋಗೀಶ್, ಎಸ್’ಸಿ,ಎಸ್’ಟಿ ಅಸೋಸಿಯೇಶನ್ ಉಪಾಧ್ಯಕ್ಷ ವಸಂತ ಕುಮಾರ್, ಎಒ ಅಸೋಸಿಯೇಶನ್’ನ ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post