ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ತಾಲೂಕಿನ ಎಲ್ಲಾ ಬಿಜೆಪಿ ಕಾರ್ಯಕರ್ತರು ಜಾತಿ ಭೇದವಿಲ್ಲದೆ ಒಟ್ಟಾಗಿ ಸೇರಿ ಮುಂಬರುವ ಗ್ರಾಮ ಪಂಚಾಯಿತಿಯ ಚುನಾವಣೆಯನ್ನು ಎದುರಿಸಿ, ನಮ್ಮ ಪಕ್ಕದ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ಇಂದು ಪಟ್ಟಣದ ಮಾಳೇರ ಕೇರಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೋವೀಡ್ 19ನ ಹರಡುವಿಕೆಯು ಹೆಚ್ಚುತ್ತಿರುವುದರಿಂದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎದೆಗುಂದದೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ತಾಲೂಕಿನ ಬಿಜೆಪಿ ಪಕ್ಷದ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು, ಓಬಿಸಿ ಕಾರ್ಯಕರ್ತರು, ಅಲ್ಪಸಂಖ್ಯಾತ ಕಾರ್ಯಕರ್ತರು ಎಲ್ಲಾರೂ ಒಟ್ಟಾಗಿ ಜಾತಿ ಭೇದವಿಲ್ಲದೆ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸ ನಿರ್ವಹಿಸಬೇಕಿದೆ ಎಂದರು.
ತಾಲೂಕಿನಲ್ಲಿ ಒಟ್ಟು 44 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ ತರ್ಲಘಟ್ಟ, ಹಾರೋಗೊಪ್ಪ ಮತ್ತು ಚುರ್ಚುಗುಂಡಿ ಈ ಮೂರು ಪಂಚಾಯಿತಿಗಳಲ್ಲಿ ತಡವಾಗಿ ಚುನಾವಣೆ ನಡೆಯಲಿದ್ದು, ಇನ್ನು ಉಳಿದ 41 ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 487 ಅಭ್ಯರ್ಥಿಗಳ ಆಯ್ಕೆಯನ್ನು, 185 ಮತಗಟ್ಟೆಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಈ 487 ಅಭ್ಯರ್ಥಿಗಳಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಲ್ಲಿ, 425 ಕ್ಕೂ ಅಧಿಕ ಬಿಜೆಪಿದವರು ವಿಜೇತರಾಗಿ ಆಯ್ಕೆ ಮಾಡುವ ಹೊಣೆ ನಮ್ಮೆಲ್ಲರ ಕೈಯಲ್ಲಿದೆ ಎಂದರು.
ಶಿಕಾರಿಪುರ ತಾಲೂಕಿನಲ್ಲಿ ಅತ್ಯಂತ ಹೆಮ್ಮೆಯಿಂದ, ಸ್ವಾಭಿಮಾನದಿಂದ, ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ಚುನಾವಣೆ ಎದುರಿಸಲು ಸಂಘಟನಾತ್ಮಕ ವ್ಯೂಹವಾಗಿರಬೇಕಿದೆ. ಯಾರು ಪಕ್ಷದ ಸಿದ್ಧಾಂತವನ್ನ ಅರಿತ್ತಿದ್ದಾರೋ, ಯಾರು ಪಕ್ಷದ ಬೆಳವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೋ ಅಂಥವರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣೆಯಲ್ಲಿ ಅತ್ಯಂತ ಸೂಕ್ಷ್ಮತೆಯಿಂದ, ಅತ್ಯಂತ ಎಚ್ಚರಿಕೆಯಿಂದ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆಗೆ ಎಲ್ಲರ ಸಹಕರಿಸಬೇಕು. ಈ ಚುನಾವಣೆ ಮುಂದಿನ ಯಾವುದೇ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಲು ನೆರವಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ರಾಜ್ಯ ಅರಣ್ಯಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಅಗಡಿ ಅಶೋಕ, ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಶ್ ಪಾಟೀಲ್, ತಾಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಉಡುಗುಣಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬೆಂಗಳೂರು ನಾಮ ನಿರ್ದೇಶಿತ ನಿರ್ದೇಶಕ ರಾಮಾನಾಯ್ಕ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಹಾಲಪ್ಪ, ಬಂಗಾರಿ ನಾಯ್ಕ್, ಗಾಯಿತ್ರಿ ಮಲ್ಲಪ್ಪ, ಜಿಲ್ಲಾ ಬಿಜೆಪಿ ಮುಖಂಡ ಪ್ರಮೋದ್ ಪ್ರಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post