ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಇಡೀ ನಗರದಲ್ಲಿ ರಸ್ತೆಗಳು ಗುಂಡಿಗಳ ಆಗರವಾಗಿದ್ದು, 24×7 ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಯುಜಿಡಿ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ ಮೀತಿಮೀರಿದ್ದು ಜಿಲ್ಲಾಡಳಿತ ಮತ್ತು ಪಾಲಿಕೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸೊರಬದಲ್ಲಿ ಜಿಲ್ಲಾ ಮಂತ್ರಿಗಳು 700 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಶಿವಮೊಗ್ಗ ನಗರದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದು, ನೂರಾರು ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಗಮನಹರಿಸುತ್ತಿಲ್ಲ. ಡಿ.ಸಿ. ಕಛೇರಿ ಎ.ಸಿ. ಕಛೇರಿ, ಪಾಲಿಕೆ ಅಧಿಕಾರಿ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮಾತ್ರ ಫೈಲುಗಳ ವಿಲೇವಾರಿ ಮಾಡುತ್ತಿದ್ದಾರೆ. ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದು, ನಾಗರೀಕರ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದರು.
ಯುಜಿಡಿ, ಬಾಕ್ಸ್ ಡ್ರೈನೇಜ್ ಸಮಸ್ಯೆ ಕೂಡ ಗಂಭೀರವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರೌಡಿಸಂ, ಗಾಂಜಾ, ಓಸಿ ಎಲ್ಲೆಮೀರಿದೆ. ಟ್ರಾಫಿಕ್ ಪೊಲೀಸರು ದಂಡ ಹಾಕುವುದರಲ್ಲಿ ರಾಜ್ಯದಲ್ಲೇ ನಂಬರ್ ಒನ್ ಆಗಿದ್ದು ಮರದ ಮೂಲೆಯಲ್ಲಿ ಅಡಗಿಕೊಂಡು ದರೋಡೆಕೋರರನ್ನು ಹಿಡಿದ ಹಾಗೆ ಅಮಾಯಕರನ್ನು ಹಿಡಿದು ದಂಡ ಹಾಕುತ್ತಿದ್ದಾರೆ. ಎಷ್ಟಿದೆಯೋ ಅಷ್ಟು ವಸೂಲಿ ಕೂಡ ಮಾಡುತ್ತಿದ್ದಾರೆ ಇದು ನಿಲ್ಲಬೇಕು ಈ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದು ಕೂಡಲೇ ಅನುದಾನ ತಂದು ನಗರವನ್ನು ಗುಂಡಿಭಾಗ್ಯಗಳಿಂದ ಕಾಪಾಡಿ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪ್ರಮುಖರಾದ ದೀಪಕ್‍ಸಿಂಗ್, ಹೆಚ್.ಎಂ. ಸಂಗಯ್ಯ, ಶ್ಯಾಂ, ಗಂಧದಮನೆ ನರಸಿಂಹ, ಬೊಮ್ಮನಕಟ್ಟೆ ಮಂಜುನಾಥ್, ರಮೇಶ್‍ನಾಯಕ್, ವಿಜಯಕುಮಾರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

