ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋವಿಡ್19 ಲಾಕ್ ಡೌನ್ ನಂತರ ಸರ್ಕಾರದ ಆದೇಶದಿಂದ ಇಂದು ಪದವಿ ತರಗತಿಗಳು ಮತ್ತೆ ಆರಂಭವಾಗಿದ್ದು, ಬಹುತೇಕ ಕಾಲೇಜುಗಳನ್ನು ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು.
ಇಂದಿನಿಂದ ಪದವಿ ಕಾಲೇಜು ಆರಂಭಕ್ಕೆ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಕಾಲೇಜುಗಳ ಆಡಳಿತಗಳು ಕಟ್ಟಡಕ್ಕೆ ಸ್ಯಾನಿಟೈಸ್, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಹಾಗೂ ವಿರಳ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ.
ತರಗತಿ ಆರಂಭ ಕುರಿತಂತೆ ಮಾತನಾಡಿದ ಸರ್.ಎಂವಿ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಎಂ.ಜಿ. ಉಮಾಶಂಕರ್, 140 ವಿದ್ಯಾರ್ಥಿಗಳು ದಾಖಲಾಗಿದ್ದು ಇವರಲ್ಲಿ 90 ಮಂದಿ ಗರಿಷ್ಟ ಪ್ರಮಾಣದಲ್ಲಿ ಹಾಜರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರು ಎಂದರು.
ಇನ್ನು, ಸರ್ಕಾರದ ಆದೇಶದಂತೆ ಕಟ್ಟಡಕ್ಕೆ ಸ್ಯಾನಿಟೈಸ್ ಮಾಡಿಸಲಾಗಿದೆ. ಹಾಜರಾದ ವಿದ್ಯಾರ್ಥಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ಪ್ರಾಧ್ಯಾಪಕರು ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ಆದರೂ ಸಹ ನಾಳೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಟೆಸ್ಟ್ ಮಾಡಿಸಲಾಗುತ್ತದೆ. ಬಂದ ವಿದ್ಯಾರ್ಥಿಗಳಿಗೆ ಪೋಷಕರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಬರುವಂತೆ ಕಾಲೇಜಿನಿಂದಲೇ ಅರ್ಜಿ ನೀಡಲಾಗಿದೆ ಎಂದರು.
ನ್ಯೂಟೌನ್ ವಿಐಎಸ್‌ಎಸ್‌ಜೆ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ರವೀಂದ್ರ ಮಾತನಾಡಿ, ನಮ್ಮಲ್ಲಿ ಇಂದು ಕಾಲೇಜು ಆರಂಭವಾಗಿಲ್ಲ. ವಿದ್ಯಾರ್ಥಿಗಳ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ನ.19 ರಂದು ಕೋವಿಡ್ ಟೆಸ್ಟ್ ಮಾಡಿಸುತ್ತೇವೆ. ನೆಗೆಟಿವ್ ವರದಿ ಮತ್ತು ಪೋಷಕರ ಒಪ್ಪಿಗೆ ಪತ್ರ ಇಲ್ಲದೆ ಒಳಗೆ ಬರುವಂತಿಲ್ಲ. ಈಗಾಗಲೆ ಪ್ರಾಧ್ಯಾಪಕರಿಗೂ ಸಹ ಟೆಸ್ಟ್ ಮಾಡಿಸಲಾಗಿದೆ ಎಂದಿದ್ದಾರೆ.
ಬೊಮ್ಮನಕಟ್ಟೆ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮಾತನಾಡಿ, ದಾಖಲಾಗಿರುವ 185 ವಿದ್ಯಾರ್ಥಿಗಳ ಪೈಕಿ 30 ಮಂದಿ ಮಾತ್ರ ಇಂದು ಹಾಜರಾಗಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಈಗಾಗಲೇ ಕಟ್ಟಡವನ್ನೂ ಸ್ಯಾನಿಟೈಸ್ ಮಾಡಿಸಲಾಗಿದೆ ಎಂದಿದ್ದಾರೆ.
ಹೊಸಮನೆ ಸರ್ಕಾರಿ ಪದವಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ಧನಂಜಯ ಮಾತನಾಡಿ, 58 ವಿದ್ಯಾರ್ಥಿಗಳು ದಾಖಲಾಗಿದ್ದರೂ ಇಂದು ಹಾಜರಾಗಿದ್ದು ಕೇವಲ 7 ವಿದ್ಯಾರ್ಥಿಗಳು ಮಾತ್ರ. ಬಂದವರು ಕೋವಿಡ್ ಟೆಸ್ಟ್ ಮಾಡಿಸದ ಕಾರಣ ಮಾಹಿತಿ ಪಡೆದು ಪೋಷಕರ ಒಪ್ಪಿಗೆ ಪತ್ರ ತರುತ್ತೇವೆಂದು ಹೇಳಿ ಹೋಗಿದ್ದಾರೆ. ಒಂದು ವಾರದಿಂದ ಕೋವಿಡ್ ವಿಷಯ ಕುರಿತು ವಾಟ್ಸಪ್‌ನಲ್ಲಿ ಮಾಹಿತಿ, ಅರಿವು ಕಾರ್ಯಕ್ರಮವನ್ನು ಮಾಡಿದ್ದೇವೆ. ನಾಳೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗುತ್ತದೆ. ಸಿಬ್ಬಂದಿ ಮತ್ತು ಪ್ರಾಧ್ಯಾಪಕರು ಈಗಾಗಲೇ ಕೋವಿಡ್ ಪರೀಕ್ಷಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post