ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಪ್ರಸಕ್ತ ಸಾಲಿನ ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥ ಶರ್ಮಾ ಪ್ರಶಸ್ತಿಯನ್ನು ವಿದ್ವಾನ್ ಪ್ರೊ.ರಾಮಚಂದ್ರ ಜಿ. ಭಟ್ ಕೋಟೆಮನೆ ಅವರಿಗೆ ನೀಡಲಾಗುತ್ತಿದೆ ಎಂದು ಇಲ್ಲಿನ ವಿದ್ವಾನ್ ಎನ್. ರಂಗನಾಥ ಶರ್ಮಾ ಸೇವಾ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಿಳಿಸಿದೆ.
ಸುದೀರ್ಘ 44 ವರ್ಷ ಅಧ್ಯಾಪಕರಾಗಿಯೂ, 21 ವರ್ಷ ಸಂಶೋಧನಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಇವರು ಉಪನಿಷತ್, ಯೋಗ ಮನಃಶಾಸ್ತ್ರ, ಭಗವದ್ಗೀತೆ ಭಾಷ್ಯದಕುರಿತು, ಬ್ರಹ್ಮಸೂತ್ರ, ಶಿವಾನುಭವ ಸೂತ್ರ, ನ್ಯಾಯ ಸೂತ್ರ, ಪತಂಜಲಿ ಯೋಗ, ಸಾಂಖ್ಯಾಸೂತ್ರ, ಹಠಯೋಗ ವೇದಆಧರಿತ ಪರಿಸರ ಮುಂತಾದ ವಿಷಯ ಕುರಿತ ತಜ್ಞ ಉಪನ್ಯಾಸ ನೀಡಿದ್ದಾರೆ.
ಸಂಸ್ಕೃತ-ವಿಜ್ಞಾನ, ಸಂಸ್ಕೃತ-ಕಂಪ್ಯೂಟರ್, ವೇದ ಆಧರಿತ ಇಕೋಲಜಿ, ಭಾರತದ ಸಾಂಸ್ಕೃತಿಕ ಇತಿಹಾಸ, ಉಪನಿಷತ್ ಕಲಿಕಾ ವಿಧಾನ ಮುಂತಾದ ಸಂಶೋಧನಾ ಗ್ರಂಥ ರಚಿಸಿದ್ದು, ಟೆಕ್ಸಾಸ್ ವಿವಿ ಲಂಡನ್, ಆಸ್ಟ್ರೇಲಿಯಾ ಮೆಲ್ಬೋರ್’ನ ಇನ್ನೂ ಮುಂತಾದ ದೇಶಗಳಲ್ಲಿ 50 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರಾಯೋಗಿಕವಾಗಿ ಗುರುಕುಲ ಪದ್ಧತಿಯಲ್ಲಿ ಯಜ್ಞ ಥೆರಪಿ ಪ್ರಯೋಗ ನಡೆಸಿದ್ದಾರೆ. ಶೈಕ್ಷಣಿಕ ಹಂತದಲ್ಲಿ ಯೋಗದ ಪರಿಣಾಮ, ಅವಶ್ಯಕತೆ ಕುರಿತಂತೆ ಸಂಶೋಧನಾ ಕೃತಿ ರಚಿಸಿದ್ದು, ಸಂಸ್ಕೃತ ಮತ್ತು ಕನ್ನಡದಲ್ಲಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.

ಭೂಪಾಲ್’ನಲ್ಲಿ ಭವಭೂತಿ ಪುರಸ್ಕಾರ, ಸಿರಸಿಯಲ್ಲಿ ಸ್ವಾಮಿ ಗಂಗೇಶ್ವರ ನಂದ್ಜೀ ಪುರಸ್ಕಾರ, ಆಚಾರ್ಯ ಪ್ರವರ ಪುರಸ್ಕಾರ, ಪುಣೆಯಲ್ಲಿ ಗುರು ಗೌರವ ಪುರಸ್ಕಾರ, ಬೆಂಗಳೂರಿನಲ್ಲಿ ದೀರ್ಘಕಾಲ ಸಂಸ್ಕೃತ ಸೇವಾ ಪುರಸ್ಕಾರ, ತುಮಕೂರು ವಿವಿಯಿಂದ ವೇದ ವಿಜ್ಞಾನ ಪಾರಾಮ್ಯಂಗ್ರಂಥಕ್ಕೆ ಡಿಲಿಟ್, ಹಿಮಾಚಲ ಪ್ರದೇಶದಲ್ಲಿ ವಿದ್ವತ್ ಸಮ್ಮಾನ, ವಾರಣಾಸಿಯಲ್ಲಿ ಶಾಸ್ತ್ರ ವಿದ್ವತ್ ಸಮ್ಮಾನ, ಎರ್ಯಾ ಪ್ರಶಸ್ತಿ, ಆತ್ಮ ಸ್ವಾಸ್ತ್ಯ ಶ್ರೀಪ್ರಶಸ್ತಿ, ಪ್ರತಿಭಾರತ್ನ, ವಿಶಿಷ್ಟ ನಾಗರೀಕ ಸಮ್ಮಾನ, ಶಾಸ್ತ್ರ ವಿದ್ತಾನಿಧಿಯಂತಹ ಅನೇಕ ಗೌರವ ಪುರಸ್ಕಾರಗಳನ್ನು ಶ್ರೀಯುತರು ಮುಡಿಗೇರಿಸಿಕೊಂಡಿದ್ದಾರೆ.

ವಿದ್ವಾನ್ ನಡಹಳ್ಳಿ ಡಾ.ರಂಗನಾಥ ಶರ್ಮಾ ಸೊರಬ ತಾಲ್ಲೂಕು ನಡಹಳ್ಳಿಯವರು. ಭಾರತೀಯ ದರ್ಶನ, ವ್ಯಾಕರಣ ಹಾಗೂ ಅಲಂಕಾರ ಶಾಸ್ತ್ರಗಳಲ್ಲಿ ಇದಂಇತ್ಥಂ ಎನ್ನುವಷ್ಟು ಮೇರು ವಿದ್ವಾಂಸರು. ಇಂತಹ ಮಹನೀಯರ ಹೆಸರಿನಲ್ಲಿ ವಿದ್ವಾನ್ ರಂಗನಾಥ ಶರ್ಮಾ ಸೇವಾ ಪ್ರತಿಷ್ಠಾನ 2018ರಿಂದ ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಸಮ್ಮಾನಿಸಿ ಪುರಸ್ಕರಿಸುತ್ತಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ
ಇದೇ ತಿಂಗಳ 18ರ ಶುಕ್ರವಾರ ಬೆಳಿಗ್ಗೆ 10-30ಕ್ಕೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಹರಿಹರಪುರದ ಪ್ರಭೋದಿನಿ ಗುರುಕುಲದಲ್ಲಿಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post