ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ನಿವೃತ್ತ ಕಾರ್ಮಿಕರಿಗೆ ವಸತಿಗೃಹಗಳನ್ನು ಉಳಿಸಿಕೊಡುವ ಭರವಸೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿಐಎಸ್’ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ನಾಗಭೂಷಣ್ ಮಾಹಿತಿ ನೀಡಿದರು.
ಕಂಪೆನಿ ಮನೆಗಳನ್ನು ನಿವೃತ್ತ ನೌಕರರಿಗೆ ಉಳಿಸಿಕೊಡುವ ಕುರಿತಾಗಿ ಸಂಸದ ರಾಘವೇಂದ್ರ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದ್ದು, 2500 ನಿವೃತ್ತ ಕಾರ್ಮಿಕರು ಸಹಿ ಹಾಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ಸಿದ್ದ ಪಡಿಸಿರುವ ಮನವಿ ಪತ್ರದ ಪ್ರತಿಯನ್ನು ಹಸ್ತಾಂತರಿಸಿ, ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಂಸದರು ನಿವೃತ್ತ ನೌಕರರಿಗೆ ಮನೆ ಉಳಿಸಿಕೊಡಲು ಸಂಪೂರ್ಣ ಪ್ರಯತ್ನ ಮಾಡಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವ ಆಶ್ವಾಸನೆ ನೀಡಿದ್ದಾರೆ ಎಂದರು.
ಸರ್.ಎಂ. ವಿಶ್ವೇಶ್ವರಯ್ಯನವರಿಂದ ಸ್ಥಾಪಿಸಲ್ಪಟ್ಟ ಕಾರ್ಖಾನೆ ಇಂದು ಶೋಚನೀಯ ಸ್ಥಿತಿಯನ್ನು ತಲುಪಿದೆ. ಖಾಸಗೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 30 ವರ್ಷಗಳಿಂದ ಸೈಲ್ ಆಡಳಿತ ವರ್ಗವು ಈ ಪ್ರತಿಷ್ಠಿತ ಕಾರ್ಖಾನೆಯನ್ನು ಕಡೆಗಣಿಸಿ, ಈ ದುಸ್ಥಿತಿಗೆ ತಂದು ನಿಲ್ಲಿಸಿದೆ. ಆದರೆ, ಕಾರ್ಖಾನೆ ಉಳಿಯಬೇಕು. ಹೀಗಾಗಿ, ಇದಕ್ಕೆ ಸಮರ್ಪಕ ಬಂಡವಾಳ ಹೂಡಿ ಅಭಿವೃದ್ಧಿಪಡಿಸುವ ಉತ್ತಮ ಖಾಸಗಿ ಕಂಪೆನಿಗೆ ವಹಿಸುವುದು ಸೂಕ್ತವಾಗಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಯಾವುದೇ ತೊಂದರೆಯಾಗಬಾರದು. ಅವರು ಕಾರ್ಖಾನೆಯ ಕೆಲಸದಲ್ಲಿ ಮುಂದುವರಿಯಬೇಕು ಹಾಗೂ ಅವರಿಗೆ ತಿಂಗಳ ಪೂರ್ತಿ ವೇತನ ದೊರೆಯುವಂತಾಗಬೇಕು. ಈ ಒಂದು ಷರತ್ತಿನ ಮೇಲೆ ಖಾಸಗಿಯವರಿಗೆ ವಹಿಸುವುದು ಸೂಕ್ತ ಎಂದರು.
ಕಂಟ್ರಾಕ್ಟ್ ಕಾರ್ಮಿಕರಿಗೆ ಕೆಲಸದಲ್ಲಿ ಮುಂದುವರೆಸುವ ವಿಷಯದಲ್ಲಿ ಹಾಗೂ ನಿವೃತ್ತ ಕಾರ್ಮಿಕರಿಗೆ ಮನೆಗಳನ್ನು ಉಳಿಸಿಕೊಡುವ ವಿಷಯದಲ್ಲಿ ಸಕಾರಾತ್ಮಕವಾಗಿ ಭರವಸೆ ನೀಡಿರುವ ಸಂಸದರಿಗೆ ಧನ್ಯವಾದ ಅರ್ಪಿಸಿದ ಅವರು, ಎಲ್ಲ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ, ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್. ಬಾಲಕೃಷ್ಣ, ಮಾಜಿ ಶಾಸಕ ದಿ. ಅಪ್ಪಾಜಿ ಗೌಡರ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post