ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಮತ್ತು ಸೌಲಭ್ಯ ಕಲ್ಪಿಸುವ ಸದಾಶಯವನ್ನು ಸಂವಿಧಾನ ಹೊಂದಿದೆ. ಸಂವಿಧಾನದ ಆಶಯವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿರುವ ನಮ್ಮೆಲ್ಲರ ಮೇಲಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ವಿವಿಯ ಪರೀಕ್ಷಾಂಗ ಭವನದ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ವರ್ಗ, ಸಮುದಾಯಗಳಿಗೂ ಸಮಾನವಾದ ಅವಕಾಶ, ಸೌಲಭ್ಯಗಳನ್ನು ನೀಡುವುದು ಸಂವಿಧಾನ ಮಹತ್ತರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ಯಾತೀತತೆ, ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಸಂವಿಧಾನದಲ್ಲಿ ಒದಗಿಸಲಾಗಿದೆ. ಅದಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳುವ, ಜಾರಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹಸಿವು, ಬಡತನ, ನಿರುದ್ಯೋಗದಿಂದ ಮುಕ್ತಿ ಪಡೆಯಲು ಜಗತ್ತಿನ ಎಲ್ಲರಿಗೂ ಇರುವ ಒಂದೇ ಮಾರ್ಗವೆಂದರೆ ಅದು ಶಿಕ್ಷಣ. ಶಿಕ್ಷಣ ಪಡೆಯುವುದನ್ನು ಹಕ್ಕಾಗಿ ನೀಡಿರುವುದು ಸಂವಿಧಾನ, ಅದನ್ನು ಅರ್ಥೈಸಿಕೊಂಡು ಉತ್ತಮ ರಾಷ್ಟ್ರನಿರ್ಮಾಣಕ್ಕೆ ಕೈಜೋಡಿಸಬೇಕು. ಶಿಕ್ಷಣದ ಪಡೆದ ಪ್ರತೀ ವ್ಯಕ್ತಿಯು ನಾಗರೀಕ ಸಮಾಜದ ಪ್ರಜ್ಞೆಯಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ಕೊಟ್ಟರು.
ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್ ಮಾತನಾಡಿ, ಗಣರಾಜ್ಯೋತ್ಸವ ಕೇವಲ ವಾರ್ಷಿಕ ಆಚರಣೆಗೆ ಸೀಮಿತವಾಗಬಾರದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವವರು ತಂತಮ್ಮ ಕಾರ್ಯಕ್ಷೇತ್ರಗಳಲ್ಲಿ ನಿಷ್ಠೆಯಿಂದ, ಕರ್ತವ್ಯಪರತೆಯಿಂಮದ ಕಾರ್ಯನಿರ್ವಹಿಸಿದರೆ ಅದು ಸಂವಿಧಾನದ ಆಶಯಗಳಿಗೆ ಗೌರವ ತೋರಿದಂತಾಗುತ್ತದೆ. ದುರದೃಷ್ಟವಶಾತ್, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳಂತಹ ರಾಷ್ಟ್ರೀಯ ದಿವಸಗಳು ಕೇವಲ ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ. ಕಣ್ಣನ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ. ವಿರೂಪಾಕ್ಷ ಸೇರಿದಂತೆ ವಿವಿಯ ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post