ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈಡಿಗರ ಭವನಕ್ಕೆ ಶಂಕುಸ್ಥಾಪನೆಯ ಸಂದರ್ಭದಲ್ಲಿ ನಡೆದ ಘಟನೆಗಳಿಗೆ ಹಾಲಿ ಶಾಸಕರು ಕಾರಣ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿದ್ದ ಆರೋಪಕ್ಕೆ ಶಾಸಕ ಎಚ್. ಹಾಲಪ್ಪ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ವಿವರಣಾತ್ಮಕವಾಗಿ ಅವರು ಸ್ಪಷ್ಟನೆ ನೀಡಿ ತಿರುಗೇಟು ನೀಡಿದ್ದಾರೆ.
2008ರ ನವೆಂಬರ್ 2ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನೆಡೆದ ಈಡಿಗರ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು, ಆಗ ಸಂಘಕ್ಕೆ ನಿವೇಶನ ನೀಡುವಂತೆ ಕೇಳಿಕೊಂಡಿದ್ದೆವು, ಮುಖ್ಯಮಂತ್ರಿಗಳಿಂದ ಭರವಸೆ ಪಡೆದಿದ್ದೆವು. ಅಂದಿನ ಸಮಾವೇಶಕ್ಕೆ ಸುಮಾರು 35 ಲಕ್ಷ ಖರ್ಚಾಗಿತ್ತು ಅಷ್ಟು ಹಣವನ್ನು ನಾನು ಮತ್ತು ನನ್ನ ಸಹೋದರರೆ ಬರಿಸಿದ್ದೇವೆ, ಹುಲ್ತಿಕೊಪ್ಪ ಶ್ರೀಧರ್ ಹಾಗೂ ಪದಾಧಿಕಾರಿಗಳು ಮತ್ತು ನನ್ನ ಸಮಾಜದ ಸ್ನೇಹಿತರು ಅದನ್ನು ಖರ್ಚು ಮಾಡಿ ವ್ಯವಸ್ಥಿತವಾಗಿ ಸಮಾವೇಶ ಸಂಘಟಿಸಿದ್ದರು. ಸಂಘದ ನಿವೇಶನ ಮಂಜೂರಾದ ಮೇಲೆ ನೋಂದಣಿ ಮತ್ತಿತರ ಖರ್ಚಿಗಾಗಿ ಸಂಘದ ಪದಾಧಿಕಾರಿಯೊಬ್ಬರ ಮೂಲಕ ಸದಸ್ಯತ್ವ ಸುಂಕವಾಗಿ ಸುಮಾರು 3.5 ಲಕ್ಷ ರೂ. ನೀಡಿದ್ದೇವೆ ಎಂದಿದ್ದಾರೆ.
ನಾನ್ಯಾವತ್ತು ಈಡಿಗರ ಸಂಘದ ಪದಾಧಿಕಾರಿ ಹಾಗೂ ಆಯಕಟ್ಟಿನ ಹುದ್ದೆಯಲ್ಲಿರಲಿಲ್ಲ, ಮುಂದು ಇರುವುದಿಲ್ಲ, ಸಮಾಜದವನಾಗಿ ಸಮುದಾಯದ ಏಳಿಗೆಗೆ ಸಹಕಾರ ನೀಡುತ್ತೇನೆ ಎಂದಿದ್ದೆ. ನಾನು ಯಾವುದೇ ಸಂಘಕ್ಕೆ ಇಂತಿಷ್ಟು ಹಣ ನೀಡುತ್ತೇನೆಂದು ಬಹಿರಂಗವಾಗಿ ಎಲ್ಲೂ ಹೇಳಿಲ್ಲ, ಹೇಳುವುದು ಇಲ್ಲ. ಖಾಸಗಿಯಾಗಿ ಭವನ ಕಟ್ಟುವ ಸಂದರ್ಭದಲ್ಲಿ ನಾನು ಮತ್ತು ನನ್ನ ಸಹೋದರರು 10 ಲಕ್ಷ ರೂ. ಹಣ ನೀಡುತ್ತೇವೆ ಎಂದಿದ್ದೆ. ಆದರೆ ನಂತರದ ದಿನಗಳಲ್ಲಿ ನನ್ನ ಏಳಿಗೆ ಸಹಿಸದೆ ತಾವು ಮತ್ತು ಕೆಲವರು ನಾನಾ ರೀತಿಯ ತೊಂದರೆ ನೀಡಿದಿರಿ, ಸಂಘದ ಚಟುವಟಿಕೆಗಳಿಂದ ಹೊರಗಿಟ್ಟಿರಿ. ನಂತರ ಯಾರು ಹಣದ ಪ್ರಸ್ತಾಪವನ್ನು ನನ್ನ ಮುಂದಿಡಲಿಲ್ಲ ಎಂದು ಟೀಕಿಸಿದ್ದಾರೆ.
ತಾವು ಬಹಿರಂಗವಾಗಿ ಸಾಗರದ ಈಡಿಗರ ಸಂಘಕ್ಕೆ 5 ಲಕ್ಷ ರೂ. ಶಿವಮೊಗ್ಗ ಈಡಿಗರ ಸಂಘಕ್ಕೆ 5 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದ್ದೀರಿ. ಆ ಹಣ ಜಮಾ ಆಗಿದೆಯೇ..? ಸಿಎಂ ಬಿಎಸ್’ವೈ ನನ್ನ ಮೇಲೆ ಕೋಪಗೊಂಡರು ರೇಗಾಡಿದರು, ಟಿಕೆಟ್ ಟಿಕೆಟ್ ನೀಡಲ್ಲ ಎಂದು ಹೊರಗೆ ಕಳಿಸಿದರು, ಎಂದು ಇಲ್ಲ ಸಲ್ಲದ ಮಾತುಗಳನ್ನು ತಮ್ಮ ಸಂತೋಷಕ್ಕೆ ತಾವು ಹೇಳಿಕೊಂಡಿದ್ದೀರಿ. ಮುಂದು ಹೇಳಿಕೊಂಡು ಓಡಾಡಿ ನನ್ನ ಅಭ್ಯಂತರವಿಲ್ಲ. ನನ್ನ ಹಾಗೂ ಯಡಿಯೂರಪ್ಪನವರ ಪರಿಚಯವಾದ ದಿನದಿಂದ ಇಲ್ಲಿಯವರೆಗೆ ನಾನು ಒಮ್ಮೆಯೂ ಅವರಿಂದ ಬೇಸರದ ಮಾತನ್ನು ಹೇಳಿಸಿಕೊಂಡಿಲ್ಲ. ಯಾಕೆಂದರೆ ನಾನು ಗೋವಾ ಮತ್ತು ಹೈದರಾಬಾದ್’ಗೆ ಹೋಗಿಲ್ಲ, ಕೆಲವು ನಾಯಕರನ್ನು ತಾತ್ವಿಕವಾಗಿ ವಿರೋಧಿಸಿದ್ದೇನೆ ಹೊರತು ತಮ್ಮ ಹಾಗೆ ಊಸರವಳ್ಳಿಯ ರೀತಿ ಸಂದರ್ಭಕ್ಕೆ ತಕ್ಕಂತೆ ಯಾವುದೇ ನಾಯಕರ ಬಗ್ಗೆ ನಾಲಿಗೆ ಹರಿಬಿಟ್ಟವನಲ್ಲ ಎಂದಿದ್ದಾರೆ.
ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ, ಕಾಗೋಡು ತಿಮ್ಮಪ್ಪ ಅವರನ್ನು ಮತ್ತು ಜೆ.ಪಿ. ನಾರಾಯಣಸ್ವಾಮಿ ಅವರನ್ನು ಕರೆಯಕೂಡದು ಎಂದವರು ತಾವೇ ಅಲ್ಲವೇ, ಇದರಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಇದನ್ನು ದೇವಾಲಯಗಳಲ್ಲಿ, ಜನತಾ ನ್ಯಾಯಾಲಯದಲ್ಲಿ ಹೇಳಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post