ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕಳೆದ ತಿಂಗಳು ಯುವ ಸಬಲೀಕರಣ ಮತ್ತು ಕ್ರೀಡಾ ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸ್ಯಾಂಖಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಈ ಸಂಬಂಧ ಸಭೆ ನಡೆಸಿದ್ದರು. ಸಚಿವರ ಆಶಯದಂತೆ ಹಾಸ್ಟೆಲ್ ನಿರ್ಮಾಣಕ್ಕೆ ಸಂಪುಟ ಸಭೆ ಅಸ್ತು ಎಂದಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಿಂದ ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಇರಲಿಲ್ಲ. ಈ ಕಾರಣದಿಂದಲೇ ಸಾಕಷ್ಟು ಪ್ರತಿಭಾನ್ವಿತ ಯುವಕರು ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದರು. ಇದನ್ನ ಅರಿತ ಸಚಿವ ಡಾ. ನಾರಾಯಣಗೌಡ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯಲ್ಲಿ ವಸತಿ ಕಟ್ಟಡ ನಿರ್ಮಿಸಲು ತೀರ್ಮಾನಿಸಿದರು. ಫೆ.10 ರಂದು ಸಚಿವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಮತ್ತು ಅಧಿಕಾರಿಗಳ ಜೊತೆ ಈ ಸಂಬಂಧ ಸಭೆ ನಡೆಸಿದ್ದರು.
ಹೆಚ್‌ಎಸ್‌ಆರ್ ಸೆಕ್ಟರ್ 6 ಸರ್ವೆ ನಂಬರ 30/7, ರೂಪೇನ ಅಗ್ರಹಾರ ಪ್ರದೇಶದಲ್ಲಿ 59 ಕೋಟಿ ರೂ. ವೆಚ್ಚದಲ್ಲಿ, ಸುಮಾರು 3237 ಚದರ್ ಅಡಿ ನಿವೇಶನದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದ್ದು, ಇದು ನಾಲ್ಕು ಮಹಡಿಯ ಕಟ್ಟಡವಾಗಿದೆ. ಸುಮಾರು 400 ವಿದ್ಯಾರ್ಥಿಗಳು ವಾಸಿಸಬಹುದಾಗಿದೆ. ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ವಸತಿ ನಿಲಯ ನಿರ್ಮಿಸುತ್ತಿದ್ದು, ಪುರುಷ ವಿಭಾಗದಲ್ಲಿ 44 ಕೋಣೆಗಳು, ಅಡುಗೆ ಮನೆ, ಹಾಗೂ ಮಹಿಳಾ ವಿಭಾಗದಲ್ಲಿ 30 ಕೋಣೆಗಳು, ಅಡುಗೆ ಮನೆ ವ್ಯವಸ್ಥೆ ಹಾಗೂ ವಿವಿಧೋದ್ದೇಶ ಸಭಾಂಗಣ, ಗ್ರಂಥಾಲಯ, ಜಿಮ್ ಸುಸಜ್ಜಿತ ಕ್ಲಾಸ್ ರೂಮಗಳು ಒಳಗೊಂಡಿರಲಿವೆ ಎಂದು ಮಾಹಿತಿ ನೀಡಿದ್ದಾರೆ.
ಸಂಪುಟದ ಅನುಮೋದನೆ ನೀಡಿದ್ದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಜನರ ಪರವಾಗಿ ಸಚಿವ ಡಾ. ನಾರಾಯಣಗೌಡ ಅವರು ಮುಖ್ಯಮಂತ್ರಿಗಳಿಗೆ, ಸಂಪುಟ ಸಹುದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಒಂದು ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್‌ಸಿ, ಕೆಪಿಎಸ್‌ಸಿ ಕೌಶಾಲ್ಯಾಭಿವೃದ್ಧಿ ಸೇರಿದಂತೆ ಇತರ ತರಬೇತಿಗಳಿಗಾಗಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಆಗಮಿಸುತ್ತಾರೆ. ಹೀಗಾಗಿ ಅತಿ ಶೀಘ್ರದಲ್ಲಿ ಕಟ್ಟಡ ನಿರ್ಮಿಸಿ, ಕಲ್ಯಾಣ ಕರ್ನಾಟಕದ ಜನರ ಏಳಿಗೆಗೆ ಅನುವು ಮಾಡಿಕೊಡಲು ಸಚಿವರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post