ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಕೃತಕ ಭೌದ್ಧಿಕ ತಂತ್ರಜ್ಞಾನ ಮತ್ತು ಮಾಹಿತಿ ವಿಜ್ಞಾನ ಬರುವ ದಿನಗಳಲ್ಲಿ ಒಟ್ಟಾರೆ ಸಮಾಜವನ್ನು ಸಂಪೂರ್ಣವಾಗಿ ನಿಯಂತ್ರಿಸಲಿದೆ. ಸಮಕಾಲೀನ ಸಮಾಜ ಮಾಹಿತಿ ಆಧಾರಿತವಾಗಿದ್ದು, ಬಹುತೇಕ ಎಲ್ಲ ಕಾರ್ಯಚಟುವಟಿಕೆಗಳ ಮೇಲೆ ತನ್ನ ಹಿಡಿತ ಸಾಧಿಸಿದೆ ಎಂದು ಪಂಜಾಬ್‌ನ ರೋಪರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರಾಧ್ಯಾಪಕ ಡಾ. ಸುದರ್ಶನ್ ಅಯ್ಯಂಗಾರ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಗಣಕಶಾಸ್ತ್ರ ವಿಭಾಗದ ವತಿಯಿಂದ “ಯಂತ್ರಾಧಾರಿತ ಕಲಿಕೆ ಮತ್ತು ಮಾಹಿತಿ ವಿಜ್ಞಾನ” ಕುರಿತು ಆಯೋಜಿಸಲಾಗಿರುವ ಒಂದು ವಾರದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಮತ್ತಿತರ ಐರೋಪ್ಯ ದೇಶಗಳಲ್ಲಿ ಮಾಹಿತಿ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಅನ್ವಯಿಕತೆ ಕುರಿತು ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯುತ್ತಲಿವೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಯುಜಿಸಿ ಮತ್ತಿತರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಅನ್ವಯಿಕ ಸಂಶೋಧನೆಗೆ ಅನುದಾನ ನೀಡುವ ಮೂಲಕ ಉತ್ತೇಜನ ನೀಡಬೇಕಿದೆ ಎಂದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಪ್ರಸ್ತುತ ಸಮಾಜ ಮಾಹಿತಿ ಆಧಾರಿತ ವ್ಯವಸ್ಥೆಯನ್ನು ಹೊಂದಿದ್ದು, ಆರ್ಥಿಕತೆ, ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ವಿಚಾರ ವಿನಿಮಯ ಎಲ್ಲವೂ ಮಾಹಿತಿ ತಂತ್ರಜ್ಞಾನದ ಮೂಲಕ ನಡೆಯುತ್ತಲಿದೆ. ಮಾಹಿತಿಯ ಮಹಾಹೆದ್ದಾರಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಬೃಹತ್ ಬಂಡವಾಳಗಳನ್ನು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಹೂಡುತ್ತಿವೆ. ಸಮಾಜದ ಪ್ರತಿಯೋರ್ವ ವ್ಯಕ್ತಿ ಒಂದಲ್ಲಾ ಒಂದು ರೀತಿಯಲ್ಲಿ ಮಾಹಿತಿಯನ್ನು ಅವಲಂಬಿಸಿದ್ದಾನೆ. ಹೀಗಾಗಿ, ಮಾಹಿತಿಯ ನಿರ್ವಹಣೆ ಮಹತ್ವವಾದುದು ಎಂದು ಹೇಳಿದರು.
ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್ ಮಾತನಾಡಿ, ಮಾಹಿತಿ ತಂತ್ರಜ್ಞಾನಕ್ಕೆ ವಿಶ್ವವಿದ್ಯಾಲಯದ ಆಡಳಿತ ಪ್ರಾಮುಖ್ಯತೆ ನೀಡಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿವರ್ಗದ ನಿರ್ವಹಣೆ ಅಷ್ಟೇ ಅಲ್ಲದೆ ಶಿಷ್ಯವೇತನ, ಕಡತ ನಿರ್ವಹಣೆ ಮತ್ತಿತರ ವಿಷಯಗಳಲ್ಲಿ ಕೂಡ ಗಣಕೀಕರಣ ಕೈಗೊಳ್ಳಲಾಗಿದೆ ಎಂದರು.
ಗಣಕಶಾಸ್ತ್ರ ವಿಭಾಗದ ಡಾ. ಸುರೇಶ್ ಕಾರ್ಯಾಗಾರದ ರೂಪುರೇಷೆ ಕುರಿತು ಮಾತನಾಡಿದರು. ವಿಭಾಗದ ಅಧ್ಯಕ್ಷ ಡಾ. ರವಿಕುಮಾರ್ ಸ್ವಾಗತಿಸಿದರು. ಡಾ. ಯೋಗೀಶ್ ನಾಯಕ್ ವಂದಿಸಿದರು. ಡಾ. ಪ್ರಭಾಕರ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಐಐಟಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post