ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ನಗರದಲ್ಲಿ ಸಂಚಾರಿ ಪೊಲೀಸ್ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಸಂಚಾರ ಪೊಲೀಸರು ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದರು. ಆ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಆಯತಪ್ಪಿ ಬಿದ್ದಿದ್ದಾನೆ. ಕೆಳಬಿದ್ದ ಸವಾರನ ಮೇಲೆ ಹಿಂಬದಿಯಿಂದ ಬಂದ ವ್ಯಾನ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ದುರ್ದೈವಿ ಎಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ, ಸಿವಿಲ್ ಇಂಜಿನಿಯರ್ ದೇವರಾಜು (46) ಎಂದು ಗುರುತಿಸಲಾಗಿದೆ.
ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರನ್ನು ಕಂಡು ಗಾಬರಿಯಾಗಿದ್ದ ದೇವರಾಜು, ಪೇದೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಈ ಅಪಘಾತ ಸಂಭವಿಸಿದೆ. ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















