ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದ ಮೈರಾಡ ಕಾಲೋನಿಯ ನಿವಾಸಿಗಳು ಮೂಲ ಸೌಕರ್ಯ ನೀಡುವಂತೆ ಆಗ್ರಹಿಸಿ ಪೌರಾಯುಕ್ತ ಪಾಲಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮೂಲ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಪೂರೈಕೆ ಹೀಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ನಗರಸಭೆ ಮುಂದೆ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತಮಾಡಿದ ಮೈರಾಡ ಕಾಲೋನಿ ನಿವಾಸಿ ದೇವಮ್ಮ 2018ರಲ್ಲಿ ನಗರಸಭೆ ವತಿಯಿಂದ ಹಕ್ಕು ಪತ್ರಗಳನ್ನು ಸಹ ನೀಡಲಾಗಿದೆ, ಒಂದನೇ ವಾರ್ಡಗೆ ಸೇರಿದ ಈ ಜನವಸತಿ ಪ್ರದೇಶವನ್ನು ನಗರಸಭೆ ಕಡೆಗಣಿಸುತ್ತಿದೆ. ಪ್ರತಿಬಾರಿಯು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತೇವೆ ಎಂದು ಹೇಳಿದ ನಗರಸಭೆ ಅಧಿಕಾರಿಗಳು ಇದುವರೆಗೂ ಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅನೇಕ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದು ವೃದ್ದರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ರಾತ್ರಿಯ ಸಮಯದಲ್ಲಿ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ವಾಸಿಸುವ ಪರಿಸ್ಥಿತಿ ಇದೆ ಇದರಿಂದ ಹಾವು, ಚೇಳು ಸೇರಿದಂತೆ ಅನೇಕ ವಿಷ ಜಂತುಗಳು ರಾತ್ರಿಯ ಸಮಯದಲ್ಲಿ ಮನೆ ಒಳಗೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿದೆ. ಅಧಿಕಾರಿಗಳು ಈ ಕೂಡಲೇ ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ನಗಸಭೆ ಸದಸ್ಯ ವೈ.ಪ್ರಕಾಶ ಮಾತನಾಡಿ, ಮೂಲ ಸೌಕರ್ಯಗಳನ್ನು ಮಾಡಿಕೊಡಲಾಗುವುದು. ಶಾಸಕರು ಸಹ ಮೈರಾಡ ಕಾಲೋನಿಗಳಿಗೆ ಹೋಗಿ ಸಮಸ್ಯೆಗಳ ಬಗ್ಗೆ ವಿಚಾರಿಸುತ್ತಿದ್ದು ಸ್ಪಂದಿಸುತಿದ್ದಾರೆ. ಶಾಸಕರ ಜೊತೆ ಮಾತನಾಡಿ ನಗರಸಭೆಯಿಂದ ಹಕ್ಕು ಪತ್ರ ವಿತರಿಸಲಾಗುವುದು ಎಂದರು
ನಗರಸಭೆ ಪೌರಾಯುಕ್ತ ಪಿ.ಪಾಲಯ್ಯ ಮಾತನಾಡಿ, ಈ ಕೂಡಲೇ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಇರುವ ಮೈರಾಡ ಕಾಲೋನಿಗೆ ಭೇಟಿ ನೀಡಲಾಗುವುದು. ಹಾಗೂ ಸ್ಥಳ ಪರಿಶೀಲಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮೀದೇವಿ, ಹನುಮಕ್ಕ, ಈರಮ್ಮ, ರಾಜೇಶ್ವರಿ, ಜಯಶ್ರೀ , ಮಾರಣ್ಣ , ಹೊನ್ನೂರಸ್ವಾಮಿ, ವೆಂಕಟೇಶ್, ಸುನಿಲ್, ಲಿಂಗಣ್ಣ, ಗೀತಮ್ಮ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post