ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರಜಾಪ್ರಭುತ್ವದ ಯಶಸ್ಸಿಗೆ ಉತ್ತಮ ತೆರಿಗೆ ಯೋಜನೆಗಳನ್ನು ರೂಪಿಸಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಜಿ.ಟಿ. ಗೋವಿಂದಪ್ಪ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕಾರ್ಪೊರೇಟ್ ತೆರಿಗೆ ಯೋಜನೆ ಮತ್ತು ಕಾರ್ಯ ನಿಯಮ – ಪ್ರಾಯೋಗಿಕ ವಿಧಾನ ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಾಣಿಜ್ಯ ಅಧ್ಯಯನವು ಹೆಚ್ಚು ಪ್ರಾಯೋಗಿಕವಾಗಿ ಜನೋಪಯೋಗಿ ಧೋರಣೆಗೆ ತೆರೆದುಕೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ತೆರಿಗೆ ಯೋಜನೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಜಾಗತಿಕ ಹಣಕಾಸು ವ್ಯವಸ್ಥೆಯು ಸಂಪನ್ಮೂಲಗಳ ಕ್ರೋಢೀಕರಣ ಎಷ್ಟು ಮುಖ್ಯವೆಂದು ಭಾವಿಸುತ್ತದೆಯೋ ತೆರಿಗೆಯನ್ನು ಸಹ ಅಷ್ಟೇ ಮುಖ್ಯವೆಂದು ಭಾವಿಸುತ್ತದೆ. ತೆರಿಗೆಯನ್ನು ಸಾಮೂಹಿಕ ಸಂಗ್ರಹವೆಂಬ ಮಾದರಿಯಲ್ಲಿ ನೋಡುವುದಾದರೆ ಅದು ಅಭಿವೃದ್ಧಿಯ ಆದ್ಯತೆಯ ವಿಷಯವಾಗುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಉತ್ತಮ ತೆರಿಗೆ ಯೋಜನೆಗಳನ್ನು ರೂಪಿಸಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿರುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಕೆ. ವೀಣಾ ಅವರು ಮಾತನಾಡಿ, ಕೋವಿಡ್ ನಂತರದ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಣೆಗೊಳ್ಳುವಲ್ಲಿ ತೆರಿಗೆಯು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಸರಕಾರವು ಯಾವುದೇ ತೆರಿಗೆ ಯೋಜನೆಯನ್ನು ಮಾಡುವಾಗ ಕಾನೂನಿನ ಚೌಕಟ್ಟಿನಲ್ಲಿಯೇ ಮಾಡುತ್ತದೆ ಎಂಬ ಅರಿವು ನಮಗಿರಬೇಕು. ತೆರಿಗೆಯಿಂದ ತಪ್ಪಿಸಿಕೊಳ್ಳುವುದೂ ಒಂದು ಅಪರಾಧ. ವಿದ್ಯಾರ್ಥಿಗಳು ಈ ಕುರಿತು ಹೆಚ್ಚಿನ ತಿಳುವಳಿಕೆ ಪಡೆಯುವುದು ಅತ್ಯಗತ್ಯ ಎಂದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಶಿವಮೊಗ್ಗದ ಚಾರ್ಟಡ್ ಅಕೌಂಟೆಂಟ್ ಸಿ.ಎ. ಮಹೇಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಕುಂದನ್ ಬಸವರಾಜ, ಡಾ. ಕೆ.ಎಸ್. ಸರಳಾ ಡಾ.ಕೆ.ವಿ. ಗಿರಿಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post