ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್‌ಗಳನ್ನು ಪುನರಾರಂಭಿಸಲು ಷರತ್ತು ಬದ್ಧ ಅನುಮತಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷ ಹಾಗೂ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ಸ್(ರಿ) ನ ಗೌರವಾಧ್ಯಕ್ಷ ಎಸ್. ದತ್ತಾತ್ರಿ ಧನ್ಯವಾದ ತಿಳಿಸಿದ್ದಾರೆ.
ಹುಣಸೋಡು ಮತ್ತು ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ತಿಂಗಳಿನಿಂದ ಕ್ರಷರ್ ಮತ್ತು ಕ್ವಾರಿ ಮಾಲೀಕರು ಹಾಗೂ ಕಾರ್ಮಿಕರು ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದರು. ಅಲ್ಲದೆ ಇದರಿಂದಾಗಿ ಸರ್ಕಾರವೂ ಕೂಡ 300 ಕೋಟಿ ರೂ.ಗಳಷ್ಟು ನಷ್ಟ ಕಂಡಿದೆ, ಹಾಗೂ ಸರ್ಕಾರದ ಮತ್ತು ಸಾರ್ವಜನಿಕರ ಅನೇಕ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.
ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ಸ್(ರಿ) ವತಿಯಿಂದಲೂ ಹಲವು ಬಾರಿ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ, ಅನೇಕ ಸಭೆಗಳನ್ನು ನಡೆಸುವ ಮೂಲಕ ನಾವು ನಡೆಸಿದ ಪ್ರಯತ್ನಕ್ಕೆ ಅಂತಿಮವಾಗಿ ಫಲ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಕಲ್ಲುಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್‌ಗಳನ್ನು ಷರತ್ತು ಬದ್ಧವಾಗಿ ಪುನರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ (ಡಿಜಿಎಮ್‌ಎಸ್) ಪರವಾನಗಿ ಪಡೆಯಲು ಕನಿಷ್ಠ 3 ತಿಂಗಳು ಕಾಲಾವಕಾಶಬೇಕೆಂದು ಸಚಿವರಲ್ಲಿ ಫೆಡರೇಷನ್ ವತಿಯಿಂದ ಕೋರಿದ್ದ ಪರಿಣಾಮವಾಗಿ ಸಚಿವರು ಅದಕ್ಕೆ ಸಮ್ಮತಿಸಿದ್ದಾರೆ, ಹಾಗೂ ಅಲ್ಲಿಯತನಕ ಸದರಿ ವ್ಯವಸ್ಥೆಯಲ್ಲಿಯೇ ಮುಂದುವರಿಸಬೇಕೆಂದು ರಾಜ್ಯದ ಎಲ್ಲಾ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ಗಣಿ ಮತ್ತು ಕ್ರಷರ್ ಚಟುವಟಿಕೆ ಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ರಾಜ್ಯದ ಸಮಸ್ತ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘದ ಪರವಾಗಿ ಎಸ್. ದತ್ತಾತ್ರಿ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post