ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.22ರಲ್ಲಿ ಶೀಘ್ರವಾಗಿ ಡ್ರೈನೇಜ್ ಗುಂಡಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಹೆಚ್. ಸಿದ್ದಯ್ಯ ರಸ್ತೆ ಸೇರಿದಂತೆ ವಾರ್ಡ್‌ನಲ್ಲಿ ಅನೇಕ ತಿರುವುಗಳಿದ್ದು, ಇತ್ತೀಚೆಗೆ ಕೆಲವು ಹೊಸ ರಸ್ತೆಗಳು ನಿರ್ಮಾಣವಾಗಿವೆ. ಆದರೆ ಮುಖ್ಯ ರಸ್ತೆಯ ಕಾಮಗಾರಿ ಕೈಗೊಂಡು 4-5ತಿಂಗಳಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ರಸ್ತೆ ದುರಸ್ತಿ ಕಾಮಗಾರಿಗಳಿಂದ ಡ್ರೈನೇಜ್ ಗುಂಡಿ ಸೇರಿದಂತೆ ನಿಂತ ನೀರು ಮುಂದೆ ತೆರಳದ ಪರಿಣಾಮ ಸೊಳ್ಳೆ, ಕ್ರಿಮಿ ಕೀಟ ಹೆಚ್ಚಾಗಿದ್ದು ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದ್ದರೂ, ಪಾಲಿಕೆ ಸದಸ್ಯರು ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟ ಸದಸ್ಯರು ಹಾಗೂ ಅಧಿಕಾರಿಗಳು ಕೂಡಲೇ ರಸ್ತೆ ಹಾಗೂ ವಾರ್ಡಿನಾದ್ಯಂತ ಉತ್ತಮ ಚರಂಡಿ ಸ್ವಚ್ಛತೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಸಮಿತಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ. ಕಿರಣ್ ಕುಮಾರ್ ಪವಾರ್, ರಾಜ್ಯ ಕಾರ್ಯದರ್ಶಿ ಎಂ.ಬಿ. ಅಬ್ದುಲ್ ಲತೀಫ್, ತಾಲೂಕು ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ. ಕೇಶವಮೂರ್ತಿ, ಜಿಲ್ಲಾ ಉಪಾಧ್ಯಕ್ಷೆ ಮಂಗಳಮ್ಮ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post