ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನಲ್ಲಿ ನಗರಸಭೆ ಚುನಾವಣೆ ಘೋಷಣೆ ಆಗಿರುವುದರಿಂದ ಚುನಾವಣಾ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವುದು ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸ್ಪರ್ಧಿಸುವವರ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಒತ್ತಾಯಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಏ.8ರಿಂದ ಅಭ್ಯರ್ಥಿಗಳ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದ್ದು, ಒಟ್ಟು 35 ವಾರ್ಡ್ಗಳ ವ್ಯಾಪ್ತಿಯಲ್ಲಿ 16 ವಾರ್ಡ್ಗಳಲ್ಲಿ ಸ್ಪರ್ಧಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಥಾನಗಳನ್ನು ಕಲ್ಪಿಸಲಾಗಿದೆ. ಆದರೆ ರಾಜಕೀಯವಾಗಿ, ಆರ್ಥಿಕವಾಗಿ ಪ್ರಬಲರಾಗಿರುವವರು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ದುರುದ್ದೇಶದಿಂದ ಸ್ಥಾನಗಳನ್ನು ಕಬಳಿಸುವ ಸಾಧ್ಯತೆಗಳಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಪ್ಪು ಮಾಹಿತಿ ನೀಡಿ ಸ್ಪರ್ಧಿಸಿದ ಅಭ್ಯರ್ಥಿ ವಿರುದ್ಧ ಯಾರಾದರೂ ನ್ಯಾಯಾಲಯದ ಮೆಟ್ಟೆಲೇರಿದರೆ ಮಾತ್ರ ವಿಚಾರಣೆ ನಡೆಯುತ್ತದೆ. ಅಂತಿಮ ತೀರ್ಪು ಬರುವಷ್ಟರಲ್ಲಿ 4-5 ವರ್ಷಗಳು ಕಳೆದಿರುತ್ತವೆ. ಅಷ್ಟರಲ್ಲಿ ಚುನಾಯಿತ ಪ್ರತಿನಿಧಿಯ 5 ವರ್ಷದ ಅವಧಿ ಮುಕ್ತಾಯಗೊಂಡಿರುತ್ತದೆ. ಇದರಿಂದ ಪ್ರಾಮಾಣಿಕ ಮತ್ತು ನ್ಯಾಯ ಸಮ್ಮತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ಬಗ್ಗೆ ಎಚ್ಚರವಹಿಸಬೇಕು. ನಾಮಪತ್ರ ಸಲ್ಲಿಸಿದ ದಿನವೇ ಕೂಲಂಕುಷವಾಗಿ ಪರಿಶೀಲಿಸಬೇಕು. ಈ ಸಂಬಂಧ ಯಾರಾದೂರು ದೂರು ಕೊಟ್ಟಲ್ಲಿ ತಕ್ಷಣ ಅವರ ನಾಮಪತ್ರವನ್ನು ವಜಾಮಾಡಬೇಕು. ಅಲ್ಲದೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post