ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜೀವನಾನುಭವಗಳನ್ನು ವಿಶಾಲ ದೃಷ್ಟಿಕೋನದಲ್ಲಿ ಕಟ್ಟಿಕೊಳ್ಳಬೇಕಾದರೆ ಸಾಹಿತ್ಯ ಸಂಗೀತ ಕಲೆಗಳ ಆಸರೆ ಅವಶ್ಯ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎನ್. ಗುರುದತ್ ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಪುರಲೆಯ ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ತಿಂಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಸಾಹಿತ್ಯ-ಸಾಂಗತ್ಯ-ಏನಿದರ ಅಗತ್ಯ ಎಂಬ ವಿಷಯವಾಗಿ ಮಾತನಾಡಿದರು.
ಸಾಹಿತ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದರೆ ಮನೋವಿಕಾಸ ಸ್ವಾಭಾವಿಕವಾಗಿ ವೃದ್ಧಿಸುತ್ತಾ ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ನೆಲೆಗೊಳ್ಳುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಅಧ್ಯಾಯನ ಮಾಡಿದಲ್ಲಿ ಭವಿಷ್ಯದ ಯಾವುದೇ ಪರಿಸ್ಥಿತಿಯನ್ನಾದರೂ ಸದೃಢವಾಗಿ ಆತ್ಮಸ್ಥೈರ್ಯದಿಂದ ನಿಭಾಯಿಸಬಹುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಿಂದ ವೈದ್ಯಕೀಯ ಪದವಿಯಂತಹ ವೃತ್ತಿಪರ ಶಿಕ್ಷಣ ಪಡೆಯಲು ವಲಸೆ ಹೋದಾಗ ಸಹಜವಾಗಿ ಕೀಳರಿಮೆ ಕಾಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರೆ ಖಿನ್ನತೆ, ಮನೋವ್ಯಸನ, ಕೀಳರಿಮೆಗಳು ಮಾಯವಾಗುತ್ತವೆ ಎಂದು ಸಲಹೆ ನೀಡಿದರು.
ಪ್ರತಿ ಘಟನೆ ಅಥವಾ ವ್ಯಕ್ತಿ ಸಂಬಂಧಿ ವಿಷಯಗಳನ್ನು ಒಬ್ಬ ಸಾಹಿತಿಯಾಗಿ ಪರಿಭಾವಿಸುವುದಕ್ಕೂ, ಸಾಮಾನ್ಯ ವ್ಯಕ್ತಿಯಾಗಿ ನೋಡುವುದಕ್ಕೂ ವಿಭಿನ್ನತೆ ಕಾಣ ಸಿಗುತ್ತದೆ. ಆರೋಗ್ಯಕರವಾದ ಸಾಹಿತ್ಯ ಓದುವುದು, ಬರೆಯುವುದು ಮನೋವಿಕಾಸದ ದೃಷ್ಟಿಯಿಂದ ಅತಿ ಮುಖ್ಯವಾಗುತ್ತದೆ ಎಂದು ಹೇಳಿದರು.
ಸಾಹಿತ್ಯ, ಸಂಗೀತ ಕಲೆ ಇವುಗಳಲ್ಲಿ ಯಾವುದರಲ್ಲಿಯೂ ಆಸಕ್ತಿ ಇಲ್ಲದ ಮನುಷ್ಯ ಬಾಲ, ಕೊಂಬು, ಕಿವಿಗಳಿಲ್ಲದ ಪಶುವಿಗೆ ಸಮ ಎಂಬ ಸಂಸ್ಕೃತದ ಮಾತಿನಂತೆ ಮನುಷ್ಯ ಭಾವಜೀವಿಯಾಗಿ ಬದುಕು ಸಾಗಿಸಬೇಕೆಂದರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಆಗ ತುಂಬು ಜೀವನದ ಮಹತ್ವ ಅರಿಯಲು ಸಾಧ್ಯ. ಸಂವೇದನಾಶೀಲತೆಯಿಂದ ಸ್ಪಂದಿಸುವ ಮನಸ್ಸಿನ ಜೀವಕಾರುಣ್ಯವನ್ನು ಸಾಹಿತ್ಯ ಅಧ್ಯಯನ ಮಾಡುವುದರಿಂದ ಚಿಂತನಾಶೀಲತೆ ಲವಲವಿಕೆಯಿಂದ ಚಟುವಟಿಕೆಯಲ್ಲಿರುತ್ತದೆ ಎಂದು ತಿಳಿಸಿದರು.
ವೈದ್ಯಕೀಯ ವೃತ್ತಿಯಲ್ಲಿಯೂ ಸಹ ಸಾಹಿತ್ಯ ತುಂಬ ಮಹತ್ವವನ್ನು ಪಡೆದುಕೊಂಡಿದೆ. ಪ್ರತಿ ರೋಗಿಯ ಹಿನ್ನೆಲೆಯನ್ನು ಗ್ರಹಿಸಿ ಸೂಕ್ತ ಚಿಕಿತ್ಸೆಯ ಜೊತೆಗೆ ಕಾಯಿಲೆಯ ಕುರಿತು ರೋಗಿಗೆ ಸೂಕ್ಷ್ಮವಾಗಿ ಸಲಹೆ ನೀಡುವ ಕೌಶಲ್ಯ ವೃತ್ತಿಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿದೇರ್ಶಕರಾದ ಡಾ.ವಿನಯ ಶ್ರೀನಿವಾಸ್, ಪ್ರಾಂಶುಪಾಲರಾದ ಡಾ.ಎಸ್.ಎಮ್ ಕಟ್ಟಿ, ಡಾ.ಸಿದ್ಧಲಿಂಗಪ್ಪ, ಶೈಕ್ಷಣಿಕ ನಿರ್ದೇಶಕರಾದ ಡಾ.ಆರ್.ಪಿ ಪೈ, ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post