ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ದೇಶಕ್ಕೆ ಮಾದರಿ ಆಗುವ ರೀತಿಯಲ್ಲಿ ಕ್ರೀಡಾಕೂಟ ನಡೆಯಬೇಕು. ಅದಕ್ಕೆ ಬೇಕಾದ ಸಿದ್ಧತೆ ಈಗಿನಿಂದಲೆ ಶುರುವಾಗಬೇಕು. ಸಂಪೂರ್ಣ ಕ್ರಿಯಾಯೊಜನೆ ಸಿದ್ದಪಡಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನ ಪೂರ್ವ ಸಿದ್ದತಾ ಸಭೆ ಇಂದು ನಡೆಸಲಾಯಿತು.
ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಳೆದ ತಿಂಗಳು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನ ಎರಡನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಸುವುದಾಗಿ ಘೋಷಿಸಿದ್ದರು. ಅಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಯುವಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಣಗೌಡ ಅವರೊಂದಿಗೂ ಚರ್ಚೆ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಇಂದು ಪೂರ್ವ ಸಿದ್ಧತೆ ಸಭೆ ನಡೆಸಲಾಯಿತು.

ಜೈನ್ ವಿವಿಯಲ್ಲಿಯೆ ವಿವಿಧ ಕ್ರೀಡೆಗೆ ಅವಕಾಶ ಇದೆ. ರಾಷ್ಟ್ರಮಟ್ಟದ ಕ್ರೀಡಾಕೂಟವಾಗಿರುವ ಕಾರಣ ಕೆಲವು ಕ್ರೀಡಾಂಗಣವನ್ನು ಉನ್ನತಮಟ್ಟಕ್ಕೆ ಏರಿಸಬೇಕು. ಕಂಠೀರವ ಕ್ರೀಡಾಂಗಣ ಸೇರಿದಂತೆ, ಬೇರೆ ಬೇರೆ ಕಡೆಗಳಲ್ಲಿ ಕ್ರೀಡಾಕೂಟ ಆಯೋಜನೆ ಬಗ್ಗೆ ಚರ್ಚಿಸಲಾಗಿದೆ. ಜೈನ್ ವಿವಿ ಉಪಕುಲಪತಿ ಡಾ. ಚೆನರಾಜ್ ರಾಯ್ಚಂದ್, ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕ್ರೀಡಾಕೂಟ ಯಶಸ್ಸುಗೊಳಿಸುತ್ತೇವೆ. 8 ತಿಂಗಳ ಸಮಯಾವಕಾಶ ಮಾತ್ರ ಇದ್ದು, ಅಷ್ಟರೊಳಗೆ ಎಲ್ಲ ಸಿದ್ಧತೆ ಆಗಲಿದೆ ಎಂದು ಸಭೆಗೆ ಭರವಸೆ ನೀಡಿದರು. ಮೈದಾನವನ್ನು ಉನ್ನತೀಕರಣಗೊಳಸುವ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ರಾಜ್ಯ ಸರ್ಕಾರದ ನೆರವನ್ನು ಜೈನ್ ವಿವಿ ಕೋರಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.

ಪ್ರಮುಖವಾಗಿ ಕ್ರೀಡಾಕೂಟದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತಿದೆ. 4 ಸಾವಿರಕ್ಕು ಹೆಚ್ಚು ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕ್ರೀಡಾಕೂಟದ ವೀಕ್ಷಣೆಗೆ ಆಗಮಿಸುತ್ತಾರೆ. ಆದ್ದರಿಂದ ಊಟ, ವಸತಿ ಜೊತೆಗೆ ಮೂಲಭೂತ ಸೌಕರ್ಯ, ವಾಹನ ಪಾರ್ಕಿಂಗ್ ವ್ಯವಸ್ಥೆ ಎಲ್ಲವು ಸಮರೋಪಾದಿಯಲ್ಲಿ ಆಗಬೇಕು ಎಂದು ಡಾ ಶಾಲಿನಿ ರಜನೀಶ್ ಹೇಳಿದರು.

ಸಭೆ ಬಳಿಕ ವಿವಿ ಆವರಣದಲ್ಲಿರುವ ವಿವಿಧ ಕ್ರೀಡಾಂಗಣಗಳನ್ನು ವೀಕ್ಷಿಸಲಾಯಿತು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post