ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಸಾಂಕ್ರಾಮಿಕ ಸೋಂಕು ದೇಶವ್ಯಾಪಿ ತೀವ್ರಗತಿಯಲ್ಲಿ ಹರಡುತ್ತಿದ್ದು ಎರಡನೆಯ ಅಲೆಗೆ ಜನರು ತತ್ತರಿಸಿ ಹೋಗುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವಂತೆ ಆಮ್ ಆದ್ಮಿ ಪಾರ್ಟಿ ರಾಜ್ಯ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.
ಕೊರೋನಾ ಸೋಂಕಿನ ಮೊದಲ ಅಲೆ ಉಂಟು ಮಾಡಿದ ಸಂಕಷ್ಟದಿಂದ ಜನತೆ ಇನ್ನೂ ಹೊರಬಂದಿಲ್ಲ. ನಿನ್ನೆ ಒಂದೇ ದಿನ ಇಡೀ ದೇಶದಲ್ಲಿ 2.75 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಂದೇ ದಿನದಲ್ಲಿ 20 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರು ಸೋಂಕಿಗೆ ಒಳಗಾಗಿದ್ದಾರೆ. ಲ್ಯಾನ್ಸೆಟ್ ಕೋವಿಡ್-19 ಕಮಿಷನ್ ಹತ್ತು ಮಂದಿಗಿಂತ ಹೆಚ್ಚು ಜನರು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೋಂಕು ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗ ಎಂದಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಗೊಂದಲ ಮತ್ತು ಸಂಕಷ್ಟಗಳ ನಡುವೆ ರಾಜ್ಯ ಚುನಾವಣಾ ಆಯೋಗ ಏಪ್ರಿಲ್ ೨೭ರಂದು ಹತ್ತು ಸ್ಥಳೀಯ ಸಂಸ್ಥೆಗಳಾದ ಬಳ್ಳಾರಿ ಮಹಾನಗರ ಪಾಲಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಮತ್ತು ಹಾಸನ ಜಿಲ್ಲೆಯ ಬೇಲೂರು ಪುರಸಭೆ, ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ತೀರ್ಥಹಳ್ಳಿ, ಕೊಡಗು ಜಿಲ್ಲೆಯ ಮಡಿಕೇರಿ, ಬೀದರ್ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರ, ಬೀದರ್ ಜಿಲ್ಲೆಯ ಹಳ್ಳಿಖೇಡ ಪಟ್ಟಣ ಪಂಚಾಯಿತಿಗೆ ಉಪಚುನಾವಣೆ ನಡೆಸಲು ತೀರ್ಮಾನಿಸಿರುವುದನ್ನು ಖಂಡಿಸಿದ್ದಾರೆ.
ಮತ ಪ್ರಚಾರದಿಂದ ಹಿಡಿದು ಮತದಾನದವರೆಗಿನ ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರು ಗುಂಪು ಸೇರುವುದರಿಂದ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳಿವೆ. ಮತ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆ-ಮನೆ ಬೇಟಿ ಮಾಡುವುದರಿಂದ ಸೋಂಕು ವೇಗವಾಗಿ ಹರಡುತ್ತದೆ. ಈಗಾಗಲೇ ನಮ್ಮ ರಾಜ್ಯದ ಆಸ್ಪತ್ರೆಗಳು ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಗಳು, ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್, ಇಲ್ಲದೆ ಜನರು ಚಿಕಿತ್ಸೆ ಪಡೆಯದೆ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಸೋಂಕು ವ್ಯಾಪಕವಾಗಿ ಹರಡಿ ಸೋಂಕಿತರ ಸಂಖ್ಯೆ ಹೆಚ್ಚಿದರೆ ಅದನ್ನು ಎದುರಿಸಲು ರಾಜ್ಯ ಸರಕಾರಕ್ಕೆ ಅಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೋಂಕನ್ನು ಇನ್ನಷ್ಟೂ ವೇಗವಾಗಿ ಹರಡಲು ನಾವೇ ಮಾರ್ಗ ಮಾಡಿಕೊಟ್ಟ ಹಾಗೆ ಆಗುತ್ತದೆ. ಚುನಾವಣೆ ನಡೆಸಿ ಜನತೆಯ ಜೀವವನ್ನು ಬಲಿಕೊಡುವುದು ಸರಿಯಲ್ಲ. ಈಗಾಗಲೇ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ನೀಡದೇ ಇರುವುದನ್ನು ಖಂಡಿಸಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪಕ್ಷ ಆಗ್ರಹಿಸಿತ್ತು. ಈಗ ಸೋಂಕು ಹರಡುವಿಕೆಯನ್ನು ತಡೆಗಟ್ಟಿ ಜನರ ಜೀವವನ್ನು ಉಳಿಸಲು ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರಕಾರ ಚುನಾವಣೆಗಳನ್ನು ಮುಂದೂಡಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರವಿಕುಮಾರ್ ಹಾಗೂ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post