ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರೂಪಾಂತರಗೊಂಡಿರುವ ಕೊರೋನಾ ಎರಡನೇ ಅಲೆಯ ಸ್ವಭಾವ ವೈದ್ಯಕೀಯ ಕ್ಷೇತ್ರವನ್ನೇ ದಾರಿ ತಪ್ಪಿಸಿದೆ. ಈ ಕಾರಣಕ್ಕಾಗಿಯೇ ವೇಗವಾಗಿ ಹರಡ್ತಿದೆ. ಬೇರೆ ದೇಶಗಳಲ್ಲಿ ಎರಡನೇ ಅಲೆಯ ಸ್ವಭಾವ ಒಂದೇ, ನಮ್ಮಲ್ಲಿ ಮಾತ್ರ ಸ್ವಭಾವ ಬೇರೆ ಇದೆ. ಇದು ಹೊಸ ರೂಪದ ವೈರಾಣು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ. ಇಲ್ಲಿಯ ತನಕ ಹಾಸಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಲಿದೆ. ಹೀಗಾಗಿ, ಸಿಎಂ ಕೂಡ ಆಕ್ಸಿಜನ್ ಒದಗಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಸದ್ಯ, ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲರೂ ಸಹಕರಿಸಿ ಹೋರಾಡಬೇಕಿದೆ ಎಂದರು.
ವೈರಾಣು ಬದಲಾವಣೆ ಮುಂದುವರಿಸ್ತಿದೆ, ಚೆಸ್ ರೀತಿ ಪಾನ್ ಮೂವ್ ಆದಾಗಲೆಲ್ಲ ಬದಲಾವಣೆ ಆಗ್ತಿದೆ. ವೈದ್ಯ ಕ್ಷೇತ್ರಕ್ಕೆ ಇದು ಸವಾಲಿನ ಕೆಲಸವಾಗಿದೆ. ಈಗಾಗಲೇ 500 ಟನ್ ಆಕ್ಸಿಜನ್ ಬಳಸಿದ್ದೇವೆ. ಇದೇ ರೀತಿ ಮುಂದುವರಿದರೆ ಆಕ್ಸಿಜನ್ ಅಗತ್ಯತೆ ಅಂದಾಜು 1,414 ಟನ್ ಬೇಕಾಗುತ್ತೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸೋಮವಾರ ಸಚಿವ ಸಂಪುಟ ಸಭೆ ಇದೆ. ಅಲ್ಲಿ ಎಲ್ಲಾ ನಾಯಕರು, ಸಂಪುಟ ಸದಸ್ಯರು ಸೇರಿ ಮಾತನಾಡಲಿದ್ದೇವೆ. ಅಂತಿಮವಾಗಿ ಇನ್ನಷ್ಟು ಕಠಿಣ ಕ್ರಮದ ಬಗ್ಗೆ ನಿರ್ಧಾರವಾಗಲಿದೆ. ಆರೋಗ್ಯ ಇಲಾಖೆಯಿಂದ ಯಾವುದೆಲ್ಲ ಸಲಹೆ ನೀಡಬೇಕೋ ಅದನ್ನು ಕೊಡ್ತೇವೆ ಎಂದು ತಿಳಿಸಿದರು
ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ :
ಬೆಂಗಳೂರಿನಲ್ಲಿ 2 ಸಾವಿರ ಬೆಡ್ಗಳ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಗಳ ನಿರ್ಮಾಣ 15 ದಿನಗಳಲ್ಲಿ ಆಗಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80 ರಷ್ಟು ಬೆಡ್ಗಳನ್ನು ಕೊರೋನಾ ಗೆ ಮೀಸಲಿಡಲು ಆದೇಶಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.ಆಸ್ಪತ್ರೆ ಮುಖ್ಯಸ್ಥರಿಗೆ ಸೂಚನೆ : ಸರ್ಕಾರ ಹಣ ಕೊಡುತ್ತೆ ಎಂದು ರೋಗಲಕ್ಷಣ ರಹಿತರನ್ನು ಆಸ್ಪತ್ರೆಗೆ ದಾಖಲು ಮಾಡುವಂತಿಲ್ಲ. ಯಾರೂ ಈ ಪ್ರಯತ್ನಕ್ಕೆ ಮುಂದಾಗಬಾರದು. ಚಿಕಿತ್ಸೆ ಕೊಡುವುದು ಸುಲಭ ಎಂಬ ಕಾರಣಕ್ಕೆ ಕೇವಲ ರೋಗಲಕ್ಷಣಗಳು ಇಲ್ಲದೆ ಇರುವವರನ್ನು ಆಸ್ಪತ್ರೆಗೆ ದಾಖಲು ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post