ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ರೋಗಿಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ 100 ಹಾಸಿಗೆ ಸಾಮರ್ಥ್ಯವುಳ್ಳ ಹಳೆ ನಗರದ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಕೊರೋನಾ 2ನೆಯ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಅವರು, ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಆರೋಗ್ಯ ಇಲಾಖೆಗೆ ಭರವಸೆ ನೀಡಿದ್ದಾರೆ.

ಶಾಸಕರ ನಿಧಿಯಿಂದ ಹಾಗೂ ವೈಯಕ್ತಿಕವಾಗಿ ಸಹ ನೆರವು ನೀಡಲು ಸಿದ್ದವಿದ್ದು, ಸೋಂಕಿತರಿಗೆ ಈ ಆಸ್ಪತ್ರೆಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಲಭ್ಯವಾಗಬೇಕೆಂಬುದು ಶಾಸಕರ ಆಶಯವಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಸಹ ಪೂರಕವಾಗಿ ಸ್ಪಂದಿಸಿದೆ ಎನ್ನಲಾಗಿದೆ.

ಸೋಂಕಿತರಿಗೆ 50 ಆಸನ:
ಪ್ರಸ್ತುತ ಕೊರೋನಾ ಸೋಂಕು ಲಕ್ಷಣವಿರುವವರಿಗೆ (ನಾನ್ ಕೋವಿಡ್) ನಿಗಾವಹಿಸಲು ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕು ದೃಢಪಟ್ಟು ಸೂಕ್ಷ್ಮ ಲಕ್ಷಣ ಹೊಂದಿರುವ 50 ಜನರಿಗೆ ಹಾಗೂ ವೆಂಟಿಲೇಟರ್, ಆಕ್ಸಿಜನ್, ಐಸಿಯು ಅವಶ್ಯಕತೆ ಇರುವ ರೋಗಿಗಳಿಗೆ 50 ಆಸನಗಳ ವ್ಯವಸ್ಥೆ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕೋವಿಡ್ ಹೊರತುಪಡಿಸಿ ಉಳಿದವರಿಗೆ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಪಾಸಣೆ:
ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿ. ಕೆಮ್ಮು, ನೆಗಡಿ, ಶೀತ, ತಲೆ ನೋವು, ಮೈ ಕೈ ನೋವು ಸೇರಿದಂತೆ ಸಣ್ಣಪುಟ್ಟ ಕಾಯಿಲೆ ಇರುವವರು ವಿಐಎಸ್‌ಎಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ನೆರವಾಗುವಂತೆ ೨ ಬಸ್‌ಗಳ ಸಂಚಾರ ಆರಂಭಿಸಲು ಚಿಂತನೆ ಸಹ ನಡೆಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















