ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ಇಂದು ಮುಂಜಾನೆ 6 ಗಂಟೆಯಿಂದ ಕಠಿಣ ಲಾಕ್ ಡೌನ್ ಜಾರಿಗೊಳಿಸಿ, ವಾಹನ ಸಂಚಾರಕ್ಕೆ ನಿಷೇಧವಿದ್ದರೂ ತಿರುಗಾಡುತ್ತಿದ್ದ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಇಂದು ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೂ ನಡೆದುಕೊಂಡು ತೆರಳಿ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ. ಆದರೆ, ಜನರು ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದೇ ವಾಹನಗಳಲ್ಲಿ ವಿಧ ವಿಧ ಕಾರಣ ಕೊಟ್ಟು ತಿರುಗಾಡುತ್ತಿದ್ದು, ಪೊಲೀಸರು ಕಠಿಣ ಕಾರ್ಯಾಚರಣೆಗೆ ಇಳಿದಿದ್ದಾರೆ.
ಬಿಳಕಿ ಕ್ರಾಸ್, ಬಾರಂದೂರು ಬೈಪಾಸ್ ಸೇರಿದಂತೆ ನಗರವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ತೆರಳುವವರ ವಾಹನಗಳನ್ನು ಮಾತ್ರ ನಗರದೊಳಗೆ ಬಿಡಲಾಗುತ್ತಿದೆ.
ಇನ್ನು, ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಹೊಸ ಸೇತುವೆ ರಸ್ತೆಯ ಶಂಕರ ಮಠ ಬಳಿಯ ಮುಖ್ಯ ತಿರುವು, ಹೊಸ ಹಾಗೂ ಹಳೇ ಸೇತುವೆ, ಬಸ್
ನಿಲ್ದಾಣ, ಅಂಡರ್ ಬ್ರಿಡ್ಜ್, ಹುತ್ತಾ ಬಸ್ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಪೊಲೀಸರು ಕಠಿಣ ಕಾರ್ಯಾಚರಣೆಗೆ ಇಳಿದಿದ್ದಾರೆ.
ಒಬ್ಬೊಬ್ಬರದ್ದು ಒಂದೊಂದು ಕಾರಣ:
ಇಂದು ಮುಂಜಾನೆ 6 ಗಂಟೆಯಿಂದಲೇ ತುರ್ತು ಹಾಗೂ ಅಗತ್ಯ ಸೇವೆ ಹೊರತುಪಡಿಸಿ ಬೇರಾವುದೇ ಖಾಸಗಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಜಾಗೃತಿ ಮೂಡಿಸಿದ್ದರೂ, ಜನರು ಇದಕ್ಕೆ ಕ್ಯಾರೆ ಎಂದಿಲ್ಲ.
ಆಸ್ಪತ್ರೆ, ಮೆಡಿಕಲ್ ಶಾಪ್, ಮೆಡಿಕಲ್ ರಿಪೋರ್ಟ್ ತರುವುದಕ್ಕೆ, ದಿನಸಿ ಸಾಮಾನು, ತರಕಾರಿ ತರುವುದಕ್ಕೆ ಎಂದೆಲ್ಲಾ ನಾನಾ ಕಾರಣ ನೀಡಿ ಜನರು ಸಂಚರಿಸುತ್ತಿದ್ದಾರೆ. ಆದರೆ, ಇದಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಪೊಲೀಸರು ಕಠಿಣ ಜಾರಿಗೆ ಇಳಿದಿದ್ದಾರೆ.
ಹಲವು ವಾಹನ ಸೀಜ್
ಇನ್ನು, ಸಕಾರಣ ಹಾಗೂ ದಾಖಲೆಯಿಲ್ಲದೇ ರಸ್ತೆಗೆ ಇಳಿದಿದ್ದ ಹಲವು ದ್ವಿಚಕ್ರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮತ್ತೊಮ್ಮೆ ಬರುವುದಿಲ್ಲ, ಈಗ ಬಿಟ್ಟುಬಿಡಿ ಎಂದು ಜನರು ಗೋಗರೆಯುತ್ತಿದ್ದ ದೃಶ್ಯ ಕಂಡು ಬಂದಿತು. ಆದರೆ, ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ನು ಕಠಿಣವಾಗಿ ಜಾರಿಗೆ ತರುತ್ತಿರುವ ಪೊಲೀಸರು ಇದನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.
ಖುದ್ದು ಫೀಲ್ಡಿಗಿಳಿದ ಡಿವೈಎಸ್’ಪಿ ಕೃಷ್ಣಮೂರ್ತಿ
ಇನ್ನು, ಲಾಕ್ ಡೌನ್ ಕಠಿಣ ಜಾರಿಗೆ ಡಿವೈಎಸ್’ಪಿ ಕೃಷ್ಣಮೂರ್ತಿ ಅವರು ಖುದ್ದು ಫೀಲ್ಡಿಗೆ ಇಳಿದಿದ್ದಾರೆ.
ಮುಂಜಾನೆ 6 ಗಂಟೆಯಿಂದಲೇ ಪರಿಶೀಲನೆ ನಡೆಸುತ್ತಾ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಅವರು, ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದರು.
ಈ ವೇಳೆ ಕಲ್ಪ ಮೀಡಿಯಾ ಹೌಸ್’ಗೆ ಪ್ರತಿಕ್ರಿಯಿಸಿದ ಅವರು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ನಗರದಲ್ಲಿ ಜಾರಿಗೆ ತರುತ್ತಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ ತುರ್ತು ಹಾಗೂ ಅಗತ್ಯ ಸೇವೆ ಹೊರತಾಗಿ ಬೇರಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು. ಇದನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಿ, ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post