ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಂಜಾನ್ ಹಬ್ಬದ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಾರಕ್ಕೆ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿರುವುದು ಅಲ್ಪ ಸಂಖ್ಯಾತರಿಗೆ ತೊಂದರೆ ಮಾಡುವ ದುರುದ್ದೇಶ ಹೊಂದಿರುವಂತಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ ಮುಖಂಡರು, ಕೊರೋನಾ ಮಹಾಮಾರಿ ವ್ಯಾಪಕವಾಗಿದ್ದರಿಂದ ಜನರಿಗೆ ಸೋಂಕು ತಗುಲದಂತೆ ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಕಟ್ಟು ನಿಟ್ಟಾಗಿ ನಿಯಮ ಪಾಲಿಸುತ್ತಿದ್ದೇವೆ ಎಂದಿದ್ದಾರೆ.
ಸರ್ಕಾರದ ಲಾಕ್ ಡೌನ್ ನಿಯಾಮವಳಿ ಪ್ರಕಾರ, ಬೆಳಿಗ್ಗೆ 6 ರಿಂದ 10ರ ಸಮಯದಲ್ಲಿ ಅಗತ್ಯವಸ್ತುಗಳ ಖರೀದಿಗೆ ಅನುವು ಮಾಡಿಕೊಡಲಾಗಿತ್ತು. ಇದರಿಂದ ನಾಗರಿಕರಿಗೂ ಅನುಕೂಲಕರವಾಗಿತ್ತು. ಇದರಿಂದ ಜೀವನೋಪಾಯಕ್ಕಾಗಿ ಹಣ್ಣು, ತರಕಾರಿ ಮಾರುವ ಹಲವರಿಗೆ ಅನುಕೂಲವಾಗಿತ್ತು. ಆದರೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಪತ್ರಿಕಾ ಹೇಳಿಕೆ ನೀಡಿ, ಶಿವಮೊಗ್ಗ ನಗರದಲ್ಲಿ ಗುರುವಾರದಿಂದ ಭಾನುವಾರದವರೆಗೂ ಯಾರೂ ಮನೆಯಿಂದ ಅಗತ್ಯ ವಸ್ತುಗಳ ಖರೀದಿಗೂ ಹೊರ ಬರುವ ಹಾಗಿಲ್ಲವೆಂದು ಹೇಳಿದ್ದು, ಇದು ಉಸ್ತುವಾರಿ ಸಚಿವರ ದುರುದ್ದೇಶಪೂರಿತ ತೀರ್ಮಾನವಾಗಿದೆ ಎಂದು ಕಿಡಿ ಕಾರಿದ್ದಾರೆ.
ಇವರಿಗೆ ನಾಗರಿಕರ ಹಿತಕ್ಕಿಂತ ಬರುವ ರಂಜಾನ್ ಹಬ್ಬದಲ್ಲಿ ಅಲ್ಪ ಸಂಖ್ಯಾತ ಕೋಮಿನವರಿಗೆ ತೊಂದರೆ ಆಗಲಿ ಎಂಬ ದುರುದ್ದೇಶವೇ ಇದ್ದಂತೆ ಕಾಣುತ್ತಿದ್ದು, ಉಸ್ತುವಾರಿ ಸಚಿವರ ಈ ತೀರ್ಮಾನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಲವು ರೋಗಿಗಳು ಹೋಮ್ ಐಸೋಲೆಷನ್’ನಲ್ಲಿರುವವರು ಸೇರಿದಂತೆ ಹಸುಗೂಸುಗಳು, ವಯೋವೃದ್ದರಿಗೆ ಕೆಲವು ಅಗತ್ಯ ವಸ್ತುಗಳು ಬೇಕೇಬೇಕು. ನಗರದ ನಾಗರೀಕರ ಹಿತದೃಷ್ಟಿಯಿಂದ ಯಾವ ರೀತಿಯಲ್ಲಿ ಬೆಳಿಗ್ಗೆ 6ರಿಂದ 10 ರವರೆಗಿನ ರಿಯಾಯಿತಿ ಇತ್ತೋ ಅದನ್ನೇ ಮುಂದುವರೆಸಲು ಒತ್ತಾಯಿಸಿದ್ದಾರೆ.
ನಾಗರಿಕ ಸರ್ಕಾರವೊಂದು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಡೀ ಜಗತ್ತೇ ಕೊರೋನಾದಂತಹ ಮಹಾಮಾರಿಯ ಆತಂಕದಲ್ಲಿರುವಾಗ ಆಳುವ ಸರ್ಕಾರದ ಸಚಿವರೊಬ್ಬರ ಕೋಮುದ್ವೇಷಕ್ಕೆ ಜನರ ನಾಗರಿಕ ಹಕ್ಕುಗಳನ್ನು ಬಲಿಕೊಡಬಾರದು ಎಂದು ಸ್ವರಾಜ್ ಇಂಡಿಯಾದ ಕೆ.ಪಿ. ಶ್ರೀಪಾಲ್, ಡಿಎಸ್’ಎಸ್ ಎಂ. ಗುರುಮೂರ್ತಿ, ಹೋರಾಟಗಾರ ರಾಜೇಂದ್ರ ಚೆನ್ನಿ, ಪತ್ರಕರ್ತರಾದ ಶಿ.ಜು. ಪಾಶ, ಮುದಸಿರ್ ಅಹ್ಮದ್ ಅವರುಗಳು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















