ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ದೇಶಾದ್ಯಂತ ಕೊರೋನ 2ನೆಯ ಅಲೆಯು ಅತೀ ವೇಗವಾಗಿ ಹರಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ಪರಿಸ್ಥಿತಿ ನಿರ್ವಹಣೆ, ಸೋಂಕಿತರ ಪ್ರಾಣ ರಕ್ಷಣೆ, ಲಸಿಕೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
18ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದರು. ಆದರೆ ಮೊದಲನೆಯ ಹಂತದ 45 ರಿಂದ 60 ವರ್ಷ ಮೀರಿದವರಿಗೇ ಇನ್ನೂ ಲಸಿಕೆ ಸಿಗುತ್ತಿಲ್ಲ. ಮೊದಲನೆಯ ಡೋಸ್ ಪಡೆದವರು ಎರಡನೆಯ ಡೋಸ್‌ಗೆ ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೇ 1ರಿಂದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮೇ 3 ಮತ್ತು 4ನೆಯ ವಾರದಲ್ಲಿ ಲಸಿಕೆ ಬರುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆರೋಗ್ಯ ಸಚಿವರು ಇನ್ನೂ 15ದಿನ ಲಸಿಕೆ ಹಾಕಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನರ ಸಾವಿನ ಕೂಪಕ್ಕೆ ನೇರವಾಗಿ ಹೊಣೆಗಾರರಾಗಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಆಗಿದೆ. ವಲಸೆ ಹೋಗಿರುವ ಕಾರ್ಮಿಕರಿಗೆ, ಬಡವರಿಗೆ ಯಾವುದೇ ವಿಶೇಷ ಪ್ಯಾಕೇಜನ್ನೂ ಘೋಷಣೆ ಮಾಡದಿರುವ ಈ ಪರಿಸ್ಥಿತಿ ನೋಡಿದರೆ ಇದು ಬೇಜವಾಬ್ದಾರಿತನ ಸರ್ಕಾರ ಎಂಬುದು ಸ್ಪಷ್ಟವಾಗಿದೆ. ವಿರೋಧಪಕ್ಷದವರು, ಸಾರ್ವಜನಿಕರು ಪರಿಹಾರ ಕೇಳಿದಾಗ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡುತ್ತಿದೆ. ಇಂತಹ ರಾಷ್ಟ್ರೀಯ ವಿಪತ್ತು ಪರಿಸ್ಥಿತಿಯಲ್ಲೂ ಜನರ ಜೀವ ಹಾಗೂ ಜೀವನ ರಕ್ಷಣೆ ಮಾಡದ ಈ ಜನವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ವಜಾ ಮಾಡಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಬಿ. ಲೋಕೇಶ್, ಇಟಿ ನಿತಿನ್, ಎಸ್.ಎಸ್. ಕುಮರೇಶ್, ಯುವ ಕಾಂಗ್ರೆಸ್ ಮುಖಂಡ ಆರ್. ಕಿರಣ್, ಪದಾಧಿಕಾರಿಗಳಾದ ವೆಂಕಟೇಶ್ ಕಲ್ಲೂರು, ಗಗನ್, ಸುಹಾಸ್ ಅನ್ನು, ಶರತ್, ಪ್ರವೀಣ್ ಸಾಳಂಕೆ, ಪುನೀತ್, ರಾಹುಲ್, ಶ್ರೀನಿವಾಸ್, ಮನೋಜ್ ಜೈನ್ ಇನ್ನಿತರರು ಇದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















