ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್(65) ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಅವರು ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮಹಾದೇವ ಪ್ರಕಾಶ್ ಅವರು 1975ರ ಅಕ್ಟೋಬರ್ 15ರಂದು ಲೋಕವಾಣಿ ದಿನ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದರು. ನಂತರ ರಾಜಕೀಯ ವಿಶ್ಲೇಕರಾಗಿ ಮತ್ತು ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದ ಅವರು ಬಿಎಸ್ ಯಡಿಯೂರಪ್ಪನವರಿಗೆ ಕೆಲವು ತಿಂಗಳುಗಳ ಕಾಲ ಮಾಧ್ಯಮ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿ ರಾಜೀನಾಮೆ ನೀಡಿದ್ದರು.
ಗಣ್ಯರ ಕಂಬನಿ
ಮಹದೇವ ಪ್ರಕಾಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪತ್ರಿಕೆ ಸಂಪಾದಕರಾಗಿ, ಅತ್ಯುತ್ತಮ ವಾಗ್ಮಿಯಾಗಿ ಮನ್ನಣೆ ಪಡೆದಿದ್ದ ಅವರು ಕೋವಿಡ್ ಗೆ ಬಲಿಯಾಗಿದ್ದು ದುರದೃಷ್ಟಕರ. ರಾಜಕೀಯ ವಿದ್ಯಮಾನಗಳ ಕುರಿತು ಅಧ್ಯಯನ ಶೀಲ ಲೇಖನಗಳನ್ನು ಬರೆಯುತ್ತಿದ್ದ ಅವರು, ಚರ್ಚೆಗಳಲ್ಲಿ ಸಮರ್ಥವಾಗಿ ಅಭಿಪ್ರಾಯ ಮಂಡಿಸುತ್ತಿದ್ದರು. ಅವರ ನಿಧನ ಮಾಧ್ಯಮ ಲೋಕಕ್ಕೆ ಆದ ನಷ್ಟ. ಮೃತರ ಆತ್ಮಕ್ಕೆ ಶಾಂತಿಯನ್ನೂ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನು, ಮಹದೇವ ಪ್ರಕಾಶ್ ಅವರ ನಿಧನದ ಹಿನ್ನೆಲೆಯಲ್ಲಿ ಶೋಕ ಸಂದೇಶ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ಅವರ ಅಗಲಿಕೆಯಿಂದ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಡಿಸಿಎಂ ಅಶ್ವತ್ಥ್ ನಾರಾಯಣ, ನಾಡಿನ ಹಿರಿಯ ಪತ್ರಕರ್ತರಾಗಿದ್ದ ಅವರು ಅತ್ಯುತ್ತಮ ವಾಗ್ಮಿ ರಾಜಕೀಯ ವಿಶ್ಲೇಷಕರಾಗಿದ್ದರು. ಈ ಭಾನುವಾರ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅನೇಕ ಪತ್ರಿಕೆಗಳಿಗೆ ಅವರು ಬರೆಯುತ್ತಿದ್ದ ರಾಜಕೀಯ ಅಂಕಣಗಳಿಗೆ ಅಗಾಧ ಪ್ರಮಾಣದ ಓದುಗರಿದ್ದರು. ಮೊನಚಾಗಿ ಅವರು ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದರು. ಮಹದೇವ ಪ್ರಕಾಶ್ ಅವರ ನಿಧನ ನೋವುಂಟು ಮಾಡಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post