ಕಲ್ಪ ಮೀಡಿಯಾ ಹೌಸ್
ಮೈಸೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್’ಗೆ ತುತ್ತಾಗುವವರಿಗೆ ಆಸ್ಪತ್ರೆಗಳು ಗುಪ್ತವಾಗಿ ಚಿಕಿತ್ಸೆ ನೀಡುವಂತಿಲ್ಲ ಹಾಗೂ ಈ ಕಾಯಿಲೆಗೆ ತುತ್ತಾದವರು ಕೂಡಲೇ ಸರಕಾರಕ್ಕೆ ಮಾಹಿತಿ ನೀಡಲೇಬೇಕು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸುತ್ತೂರು ಮಹಾ ಸಂಸ್ಥಾನಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಡಿಸಿಎಂ ಮಾಧ್ಯಮಗಳ ಜತೆ ಮಾತನಾಡಿದರು.
ಕೋವಿಡ್ ಚಿಕಿತ್ಸೆ ಪಡೆದ ನಂತರ ಬರುತ್ತಿರುವ ಈ ಕಾಯಿಲೆ ಬಗ್ಗೆ ಸರಕಾರ ಹೆಚ್ಚು ನಿಗಾ ಇಟ್ಟಿದೆ. ಇದನ್ನು ʼಗಮನಕ್ಕೆ ತರಬೇಕಾದ ಕಾಯಿಲೆʼ ಎಂದು ಈಗಾಗಲೇ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಯಾವುದೇ ಖಾಸಗಿ ಆಸ್ಪತ್ರೆ ಯಾರಿಗೂ ತಿಳಿಯದಂತೆ ಚಿಕಿತ್ಸೆ ನೀಡುವುದು ಅಪರಾಧ. ಅದೇ ರೀತಿ ಈ ಕಾಯಿಲೆಗೆ ತುತ್ತಾದವರು ಸಹ ರಹಸ್ಯವಾಗಿ ಟ್ರೀಟ್ಮೆಂಟ್ ಪಡೆಯುವುದು ಕೂಡ ತಪ್ಪಾಗುತ್ತದೆ. ಮಾಹಿತಿ ಮುಚ್ಚಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಬ್ಲ್ಯಾಕ್ ಫಂಗಸ್‌ನಿಂದ ರಾಜ್ಯದಲ್ಲಿ ಸಾವುಗಳು ಆಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಸುಮಾರು ನೂರಕ್ಕೂ ಹೆಚ್ಚು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.
ಆರೂ ವಿಭಾಗಗಳಲ್ಲೂ ಉಚಿತ ಚಿಕಿತ್ಸೆ:
ಮೈಸೂರು, ಬೆಂಗಳೂರು. ಹುಬ್ಬಳ್ಳಿ, ಕಲಬುರಗಿ, ಮಂಗಳೂರು ಮತ್ತು ಶಿವಮೊಗ್ಗ ವಿಭಾಗಗಳಲ್ಲಿ ಈ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತಿದೆ. ಜತೆಗೆ, ಇದಕ್ಕೆ ಅಗತ್ಯವಾದ ʼಲೈಸೋಸೋಮಲ್ ಅಮಪೋಟೆರಿಸನ್ʼ (liposomal amphotericin) ಔಷಧಿ ನಮ್ಮ ದೇಶದಲ್ಲಿ ತಯಾರಾಗುತ್ತಿರಲಿಲ್ಲ. ಈಗ ನಮ್ಮಲ್ಲೇ ತಯಾರಿಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದ್ದು, ಇನ್ನು ಕೆಲ ದಿನಗಳಲ್ಲಿಯೇ ಹೆಚ್ಚಿನ ಪ್ರಮಾಣದ ಔಷಧಿ ರಾಜ್ಯಕ್ಕೆ ಲಭ್ಯವಾಗಲಿದೆ. ಸದ್ಯಕ್ಕೆ ಕೇಂದ್ರ ಸರಕಾರ ವಿವಿಧ ದೇಶಗಳಿಂದ ಆಮದು ಮಾಡಿಕೊಂಡು ಅಗತ್ಯಕ್ಕೆ ಅನುಸಾರವಾಗಿ ಆಯಾ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಕೆಲ ವಾರಗಳಲ್ಲಿಯೇ ಈ ಔಷಧಿಯ ಕೊರತೆಯನ್ನು ನೀಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
RAT & RTPCR ಒಂದು ಕೋಟಿ ಕಿಟ್ ಖರೀದಿ:
ಯಾವುದೇ ಕಾರಣಕ್ಕೂ ಕೋವಿಡ್ ಪರೀಕ್ಷೆಗಳ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ನಿಗದಿತ ಗುರಿಗಿಂತ ಹೆಚ್ಚೇ ಮಾಡಲಾಗುತ್ತಿದೆ. ಅದಕ್ಕಾಗಿ ಕೆಲ ಸುಧಾರಣೆಗಳನ್ನು ತರಲಾಗಿದೆ. ಸರಕಾರಿ ಲ್ಯಾಬುಗಳಲ್ಲಿ ಒಂದು ಲಕ್ಷ ಸಿಂಗಲ್ ಟೆಸ್ಟ್ ಮಾಡುವ ವ್ಯವಸ್ಥೆ ಇದ್ದು, ಖಾಸಗಿ ಲ್ಯಾಬುಗಳಲ್ಲಿ 75,000 RTPCR ಟೆಸ್ಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 50,000 RAT ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೇ 30 ಲಕ್ಷ RAT ಕಿಟ್ ಗಳನ್ನು ಖರೀದಿ ಮಾಡಲಾಗಿದ್ದು, ಇನ್ನೂ ತಲಾ ಒಂದು ಕೋಟಿ RAT & RTPCR ಕಿಟ್ ಗಳನ್ನು ಕೊಂಡುಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ವೈದ್ಯಕೀಯ ಬಳಕೆ ಸಾಮಗ್ರಿ ಹಾಗೂ ಔಷಧಿ ಖರೀದಿಗೆ ನಿರ್ಬಂಧವೇ ಇಲ್ಲ. ಎಷ್ಟು ಬೇಕಾದರೂ ಖರೀದಿ ಮಾಡಲು ಇಲಾಖೆಗೆ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಕಳೆದ ಒಂದು ವರ್ಷದಲ್ಲಿ 30,000 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ, 3,000ಕ್ಕೂ ಹೆಚ್ಚು ವೆಂಟಿಲೇಟರ್ ಗಳನ್ನು ಹಾಕಲಾಗಿದೆ. ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿದ್ದೇವೆ. 7ನೇ ವೇತನ ಆಯೋಗದ ಶಿಫಾರಸುಗಳನ್ನೂ ಜಾರಿ ಮಾಡಿದ್ದೇವೆ ಎಂದರು ಡಿಸಿಎಂ.
ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ರೆಮಿಡಿಸಿವರ್ ಪಡೆದಿರುವ ರಾಜ್ಯ ಕರ್ನಾಟಕ. ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಸರಕಾರಿ ಕೋಟಾದಡಿ ಚಿಕಿತ್ಸೆ ಪಡೆದಿರವ ಎಲ್ಲರಿಗೂ ಉಚಿತವಾಗಿ ಈ ಔಷಧಿಯನ್ನು ಕೊಡಲಾಗಿದೆ. 35ರಿಂದ 40 ಲಕ್ಷ ಜನರಿಗೆ ಔಷಧಿ ಒದಗಿಸುವ ಕೆಲಸವನ್ನು ಸರಕಾರ ಮಾಡಿದೆ. ಮೊದಲು ಜಿಲ್ಲಾ ಮಟ್ಟದಲ್ಲಿ ಪ್ರಮುಖ ಔಷಧಿಗಳನ್ನು ಸಂಗ್ರಹ ಮಾಡುವ ವ್ಯವಸ್ಥೆ ಇತ್ತು. ಇದ್ದಕ್ಕಿದ್ದ ಹಾಗೆ ದೇಶದಲ್ಲಿ ಔಷಧಿಗಳ ಬೇಡಿಕೆ ಹೆಚ್ಚಿದಾಗ ಜಿಲ್ಲಾ ಮಟ್ಟದಲ್ಲಿ ಅದನ್ನು ಸಂಗ್ರಹ ಮಾಡುವುದು ಕಷ್ಟವಾಯಿತು. ಈ ಹಿನ್ನೆಲೆಯಲ್ಲಿ ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು. ಈಗ ಎಲ್ಲವೂ ಸರಿ ಹೋಗಿದೆ ಎಂದು ಅವರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post