ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 9 ಕೋವಿಡ್ ಆರೈಕೆ ಕೇಂದ್ರ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಇಂದು ನಡೆದ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಯಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಕಡಿಮೆ ರೋಗ ಲಕ್ಷಣ ಹೊಂದಿದ ಸೋಂಕಿತರ ಆರೈಕೆಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ 4 ವಾರ್ಡ್‌ಗಳಿಗೊಂದರಂತೆ ೯ ಆರೈಕೆ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಯಿತು.
ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ಸೋಂಕು ದೃಢಪಟ್ಟಿರುವ ಸಾಕಷ್ಟು ಜನರು ಮನೆಯಲ್ಲಿಯೇ ಐಸೋಲೇಶನ್‌ನಲ್ಲಿ ಇರುವುದಕ್ಕೆ ಬಯಸಿ, ಆರೈಕೆ ಕೇಂದ್ರಕ್ಕೆ ದಾಖಲಾಗುವುದನ್ನು ತಡೆಯಲು ಶಿಫಾರಸ್ಸಿಗಾಗಿ ಪ್ರಯತ್ನಿಸತ್ತಿರುವುದು ಕೇಳಿಬಂದಿದೆ. ಈ ಹಿನೆಲೆಯಲ್ಲಿ ಶಿಫಾರಸ್ಸಿಗೆ ಮಣಿಯದೆ ಕಡ್ಡಾಯವಾಗಿ ಸೋಂಕಿತರು ಆರೈಕೆ ಕೇಂದ್ರಕ್ಕೆ ದಾಖಲಾಗುವಂತೆ ತಿಳಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರ ಪ್ರಕರಣ ಅತಿ ಹೆಚ್ಚು ಕಂಡು ಬಂದ ಸಂದರ್ಭದಲ್ಲಿ ಎಲ್ಲರನ್ನು ಆರೈಕೆ ಕೇಂದ್ರಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನಷ್ಟು ಆರೈಕೆ ಕೇಂದ್ರಗಳ ಅಗತ್ಯವಿದ್ದು ಶ್ರೀಘ್ರದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಅನುಕೂಲವಾಗುವಂತೆ ೯ ಆರೈಕೆ ಕೇಂದ್ರಗಳ ವ್ಯವಸ್ಥೆ ಮಾಡುವಂತೆ ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.
ನಾಲ್ಕು ವಾರ್ಡ್‌ಗಳಿಗೆ ಒಂದರಂತೆ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಬೇಕು. ಹಾಗೂ ಸೋಂಕಿತರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯ ಕಲ್ಪಿಸಬೇಕು. ವೈದ್ಯರು ಹಾಗೂ ಶುಶ್ರೂಷಕರನ್ನು ಆರೋಗ್ಯ ಇಲಾಖೆಯಿಂದ ನೇಮಿಸಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕೊರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಲೇ ಇದ್ದು, ಪಾಲಿಕೆ ಸದಸ್ಯರು ತಮ್ಮ ವ್ಯಾಪ್ತಿಯ ವಾರ್ಡ್‌ಗಳಲ್ಲಿ ತಂಡ ರಚಿಸಿಕೊಂಡು ಕಾರ್ಯ ನಿರ್ವಹಿಸಬೇಕು ಹಾಗೂ ನಗರವನ್ನು ಕೋವಿಡ್ ಮುಕ್ತವಾಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕೊರೋನಾ ಹರಡುವುದು ತಡೆಯುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೊರಗಡೆ ಬಾರದಂತೆ ನಿಗಾ ವಹಿಸಬೇಕು. ಸಾರ್ವಜನಿಕರ ಜೀವ ಕಾಪಾಡುವ ಜವಾಬ್ದಾರಿ ಪಾಲಿಕೆ ಸದಸ್ಯರ ಮೇಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಕೊರೋನಾ ಸೋಂಕಿತರಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಮಾಹಿತಿಯಿದೆ. ಇದರ ಬಗ್ಗೆ ಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ಪಾಲಿಕೆ ಸದಸ್ಯರು ಜಿಲ್ಲಾ ಆರೋಗ್ಯ ಇಲಾಖೆ ಜೊತೆ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ಸಮಾಲೋಚನೆ ನಡೆಸುವ ಮೂಲಕ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.
ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇಂದಿರಾ ಕ್ಯಾಂಟೀನ್‌ನಲ್ಲಿ ಪಾಲಿಕೆ ವತಿಯಿಂದ ಉಚಿತ ಆಹಾರ ವಿತರಿಸಲಾಗುತ್ತಿದ್ದು, ಮೂಲ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಆಹಾರದ ಗುಣಮಟ್ಟದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಸದಸ್ಯ ನಾಗರಜ್ ಕಂಕಾರಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಸಮುದಾಯ ಭವನಗಳಲ್ಲಿ ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ನೆರವನ್ನು ಪಡೆದು ಆರೈಕೆ ಕೇಂದ್ರ ಸ್ಥಾಪಿಸಬೇಕು. ಮನೆ ಕೆಲಸ ಮಾಡುವರರು, ಬೀಡಿ ಕಟ್ಟುವವರು, ಟೈಲರಿಂಗ್ ವೃತ್ತಿ ಮಾಡುವವರಿಗೆ ಹಾಗೂ ಹಮಾಲರು ಸಂಕಷ್ಟದಲ್ಲಲಿದ್ದು, ಅವರನ್ನು ಗುರುತಿಸಿ ಅಗತ್ಯ ದಿನಬಳಕೆಯ ವಸ್ತುಗಳನ್ನೊಳಗೊಂಡ ಕಿಟ್ ಕೊಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಂಘ ಸಂಸ್ಥೆಗಳ ನೆರವನ್ನು ಪಡೆದು ಪ್ರತಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕೋವಿಡ್ ನಿಯಂತ್ರಿಸಲು ಹೆಚ್ಚಿನ ಗಮನ ಹರಿಸಬೇಕು. ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರದ ಕಿಟ್ ವಿತರಣೆ ಮಾಡಲಾಗಿತ್ತು. ಈ ಬಾರಿ ಸರ್ಕಾರದಿಂದಲೇ ಪಡಿತರ ರೂಪದಲ್ಲಿ ಅಕ್ಕಿ, ಗೋಧಿ ವಿತರಿಸಲಾಗಿದೆ. ಹೀಗಾಗಿ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುವುದು ಒಳಿತು. ಈ ನಿಟ್ಟಿನಲ್ಲಿ ಪಾಲಿಕೆ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವು ವಾರ್ಡ್‌ಗಳಲ್ಲಿ ಸರಿಯಾಗಿ ಸ್ಯಾನಿಟೈಸೇಷನ್ ಹಾಗೂ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ರಾಜೀವ್‌ಗಾಂಧಿ ಬಡಾವಣೆಯಲ್ಲಿರುವ ಚಿತಾಗಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್ ನಿಲ್ಲುತ್ತಿದ್ದು, ಸ್ಥಳೀಯ ಜನರು ಸೋಂಕು ಹರಡುವ ಭಯದಿಂದ ಆತಂಕದಲ್ಲಿದ್ದಾರೆ. ಹಾಗೂ ಶವ ಸುಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಚಿತಾಗಾರವನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸುರಕ್ಷಾ ಕ್ರಮ ಕೈಗೊಳ್ಳಬೇಕಿದೆ ಎಂದು ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಹೇಳಿದರು.
ಸಭೆಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post