ಕಲ್ಪ ಮೀಡಿಯಾ ಹೌಸ್
ಬೀದರ್: ಕೊರೋನಾ ಎರಡನೆಯ ಅಲೆಯಿಂದ ಸಾಕಷ್ಟು ಜನ ಆಕ್ಸಿಜನ್ ಕೊರತೆಯಿಂದ ತೊಂದರೆ ಅನುಭವಿಸಿದ್ದಾರೆ. ಹಾಗೂ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಮನಗೊಂಡು ಉಚಿತವಾಗಿ ಆಮ್ಲಜನಕ ಸಾಂದ್ರಕಗಳನ್ನು ವಿತರಿಸುವ ಕ್ರಮ ಕೈಗೊಂಡಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಗ್ರಾಮದಲ್ಲಿ ಶಾಸಕರು, ಅವರ ಸ್ನೇಹಿತರು ಹಾಗೂ ನಯೋನಿಕ ಟ್ರಸ್ಟ್ ಸಹಯೋಗದಲ್ಲಿ ಕ್ಷೇತ್ರ ವ್ಯಾಪ್ತಿಯ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲಾ ಒಂದರಂತೆ 10 ಆಮ್ಲಜನಕ ಸಾಂದ್ರಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತನ್ನ ಕ್ಷೇತ್ರ ವ್ಯಾಪ್ತಿಯ ಕಮಠಾಣಾ, ಆಣದೂರು, ಗೋಡಂಪಳ್ಳಿ, ಮನ್ನಳ್ಳಿ, ಬೇಮಳಖೇಡ, ಚಾಂಗ್ಲೇರಾ, ಬಗದಲ್, ನಿರ್ಣಾ, ರಂಜೋಖೇಣಿ ಸೇರಿ ಎಲ್ಲಾ ಒಂಬತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮನ್ನಾಎಖ್ಖೇಳ್ಳಿಯ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಒಂದೊಂದು ಆಮ್ಲಜನಕ ಸಾಂದ್ರಗಳನ್ನು ವಿತರಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
5 ಆಮ್ಲಜನಕ ಸಾಂದ್ರಕಗಳು 5 ಲೀಟರ್ ಹಾಗೂ ಇನ್ನುಳಿದ 5 ಸಾಂದ್ರಕಗಳು 10 ಲೀಟರ್ ಸಾಮರ್ಥ್ಯದವುಗಳಾಗಿವೆ. 10 ಲೀಟರ್ ಸಾಮರ್ಥ್ಯದ ಸಾಂದ್ರಕಗಳಿಂದ ಇಬ್ಬರಿಗೆ ಆಕ್ಸಿಜನ್ ನೀಡಬಹುದು. ಹಳ್ಳಿಗಳಲ್ಲಿ ಆಮ್ಲಜನಕಕ್ಕಾಗಿ ಪರದಾಡಬಾರದು ಎಂಬ ಕಾರಣದಿಂದಾಗಿ ಸದ್ಯ ಒಂದೊಂದು ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಒಂದೊಂದು ನೀಡುತ್ತೇವೆ ಎಂದರು.
ನಾವು, ನಮ್ಮ ಸ್ನೇಹಿತರು ಸೇರಿ ಸದ್ಯ ಆಮ್ಲಜನಕ ಸಾಂದ್ರಕಗಳನ್ನು ವಿತರಿಸುತ್ತಿದ್ದೇವೆ. ಮೂರನೇ ಅಲೆ ಬರಬಹುದು ಎಂಬ ಮುನ್ನೆಚ್ಚರಿಕೆಯಿಂದ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬಹಳಷ್ಟು ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದೆ. ಕಮಠಾಣಾಕ್ಕೆ ಜನರೇಟರ್ ವ್ಯವಸ್ಥೆ ಮಾಡುತ್ತಿದ್ದೇವೆ. ಮೂರನೇ ಅಲೆಗೆ ಸಜ್ಜಾಗುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಕುಷ್ಟ ರೋಗ ವಿಭಾಗದ ವೈದ್ಯಾಧಿಕಾರಿ ಮನೋಜ್ ಬಿರಾದರ್, ಶ್ರೀಮಂತ್ ಪಾಟೀಲ್, ಕಿರಣ್ ಪಾಟೀಲ್, ಕಮಠಾಣಾ ವೈದ್ಯಾಧಿಕಾರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post