ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಹ್ಯಾದ್ರಿ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜುಗಳ ಎನ್‌ಎಸ್‌ಎಸ್ ಘಟಕಗಳು ಸೇರಿ ಸಹ್ಯಾದ್ರಿ ಕಾಲೇಜಿನ ಅವರಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸಿ ಗಿಡ ನೆಡುವ ಮೂಲಕ ಆಚರಿಸಲಾಯಿತು.
ನಂತರ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮವನ್ನು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ ವೀರಭದ್ರಪ್ಪ ಉದ್ಘಾಟಿಸಿ, ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾಗರೀಕತೆ ಬೆಳೆದಂತೆ ಪರಿಸರದ ಬಗೆಗಿನ ಕಾಳಜಿ ಕ್ಷೀಣಿಸುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ದೇಶದ ಅಭಿವೃದ್ಧಿ ಮಾಪಕದಲ್ಲಿ ನೈಸರ್ಗಿಕ ಸಂಪನ್ಮೂಲಗಳೂ ಮಹತ್ವದ ಸ್ಥಾನ ಪಡೆಯುತ್ತದೆ. ಆರ್ಥಿಕತೆಯನ್ನು ನಿರ್ಧರಿಸುವಲ್ಲಿಯೂ ಮುಖ್ಯವಾಗಿದೆ. ಶುದ್ಧ ಗಾಳಿ, ಶುದ್ಧ ನೀರು ನಮ್ಮ ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ತಮ್ಮ ಕೊಡುಗೆ ನೀಡುತ್ತದೆ. ಈ ಕಾರಣಕ್ಕೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ ಮಾತನಾಡಿ, ನಮ್ಮ ಪರಿಸರ ಸಂಪನ್ಮೂಲಗಳ ಪುನಃಸ್ಥಾಪನೆ ನಮ್ಮ ಘೋಷವಾಕ್ಯವಾಗಬೇಕು. ಅತಿ ಆಧುನೀಕರಣದ ಕಾರಣದಿಂದ ನಮ್ಮದೆ ಕೆರೆ, ನದಿ, ಕಾಡು, ಬೆಟ್ಟ ಗುಡ್ಡಗಳನ್ನು ನಾಶ ಮಾಡಲು ಹೊರಟಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಸಂಪನ್ಮೂಲಗಳನ್ನು ನಮ್ಮ ಮುಂದಿನ ಜನಾಂಗಕ್ಕೂ ತಲುಪಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಪರಿಸರ ಸಂಪನ್ಮೂಲಗಳನ್ನು ಪುನರ್ ಸ್ಥಾಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಕುವೆಂಪು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಅವರು, ಪರಿಸರದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಪರಿಸರ ದಿನದ ಮುಖ್ಯ ಕಾಳಜಿಯಾಗಿದೆ. ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ. ನಮ್ಮ ಬದುಕಿಗಾಗಿ ಪ್ರಕೃತಿಯನ್ನು ಅವಲಂಬಿಸಿದ್ದೇವೆ. ಪ್ರಕೃತಿಯನ್ನು ರಕ್ಷಿಸುವುದೆಂದರೆ ಅದು ನಮ್ಮ ಕರ್ತವ್ಯವಾಗಿದೆ. ಅನೇಕ ಕಾರಣಗಳಿಂದ ಹಾಳು ಮಾಡಿರುವ ಪರಿಸರವನ್ನು ಮತ್ತೆ ಮರುಕಟ್ಟುವ ಕೆಲಸವನ್ನು ಹತ್ತು ವರ್ಷಗಳ ಯೋಜನೆಯಾಗಿ ಸರಕಾರವು ಸ್ವೀಕರಿಸಿದೆ. ಸರಕಾರದ ಈ ಉದ್ದೇಶವನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ.ಎಚ್.ಎಂ. ವಾಗ್ದೇವಿ, ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ.ಧನಂಜಯ, ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಡಾ.ಎಂ.ಕೆ. ವೀಣಾ, ಎಸ್ಟೇಟ್ ವಿಭಾಗದ ನಿರ್ದೇಶಕ ಡಾ.ಪ್ರಹ್ಲಾದಪ್ಪ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು, ವಿದ್ಯಾರ್ಥಿಗಳು, ಕಛೇರಿ ಸಿಬ್ಬಂದಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಾಧಿಕಾರಿಗಳಾದ ಡಾ. ಶುಭಾ ಮರವಂತೆ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post