ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪ್ರಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ -2021 ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಮಾರಂಭಕ್ಕೆ ಸಂಸದ ಬಿ.ವೈ.ರಾಘವೇಂದ್ರ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.
ನಂತರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಲಾಖೆಯ ವಿಶೇಷ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಅಚ್ಚುಕಟ್ಟು ಪ್ರಾಧಿಕಾರದ ರಚನೆಯ ಸರ್ಕಾರದ ಹಿಂದಿನ ಉದ್ದೇಶದ ಕುರಿತು ವಿವರ ನೀಡಲಾಯಿತು.
ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿನಿಯಮ ಕಾಯ್ದೆಯ ಪ್ರಕಾರ 1980ರಲ್ಲಿ ಸರ್ಕಾರ ಶಾಸನ ರಚಿಸಿ ಭದ್ರಾ ಕಾಡಾ ಪ್ರಾಧಿಕಾರಕ್ಕೆ 12 ಜಿಲ್ಲೆಗಳ ವ್ಯಾಪ್ತಿಯೊಂದಿಗೆ ಸುಮಾರು 30 ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳನ್ನು ಸೇರಿಸಿ ಸುಮಾರು 5ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಅಭಿವೃದ್ದಿ ನಿರ್ಮಾಣ ಕಾಮಗಾರಿಗಳ ವಿಸ್ತರಣೆ ಹಾಗೂ ಸಮಗ್ರ ಅಭಿವೃದ್ದಿ ಜಾರಿಗೊಳಿಸುವುದು ನೈಜ ಉದ್ದೇಶವಾಗಿದೆ ಎಂದು ಮನವರಿಕೆ ಮಾಡಲಾಯಿತು.
ಅಚ್ಚುಕಟ್ಟು ಪ್ರದೇಶದ ಪ್ರಮುಖ ಕಾರ್ಯಕ್ರಮಗಳಾದ ಸಕಾಲಕ್ಕೆ ನೀರು ಸರಬರಾಜು ಆಗುವಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಮತ್ತು ನೀರಿನ ಲಭ್ಯತೆ ಅನುಸಾರ ಯುಕ್ತವಾದ ಬೆಳೆಯನ್ನು ಬೆಳೆಯುವಂತೆ ಗುರಿಯನ್ನು ನಿಗದಿಪಡಿಸುವುದು, ಜೌಗು, ಸವಳು, ಕ್ಷಾರತೆ ಹಾಗೂ ಅಮ್ಲತೆಯಿಂದ ಕೂಡಿದ ಜಮೀನುಗಳಲ್ಲಿ ಭೂ ಸುಧಾರಣೆ ಕ್ರಮ ಕೈಗೊಳ್ಳುವುದು, ಭೂ ಮೇಲ್ಮೈ ಮತ್ತು ಅಂತರ್ಜಲ ನೀರಿನ ಸಂಯೋಜಿತ ಬಳಕೆಯನ್ನು ಪ್ರೋತ್ಸಾಹಿಸುವುದು, ಸಮರ್ಪಕ ರೀತಿಯಲ್ಲಿ ನೀರಿನ ವಿತರಣೆ ಮತ್ತು ಭೂ ಹಾಗೂ ಜಲ ನಿರ್ವಹಣೆ ಮಾಡುವುದು, ವಿಕೇಂದ್ರಿಕೃತ ಹಾಗೂ ಸ್ವನಿಯಂತ್ರಿತ ನಿರ್ವಹಣಾ ವ್ಯವಸ್ಥೆಯನ್ನು ಉತ್ತೇಜಿಸುವುದಕ್ಕಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಿ ಅವುಗಳು ಸದೃಢವಾಗಿ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಾಗಲು ಸರ್ಕಾರ/ಕಾಡಾ ದಿಂದ ಸಹಾಯಧನ ಸೌಲಭ್ಯಗಳನ್ನು ಮಂಜೂರಾತಿ ಮಾಡಿ ಅನುಕೂಲ ಮಾಡಿಕೊಡುವುದು ಇದರ ಪ್ರಮುಖ ಕಾರ್ಯಕ್ರಮಗಳು ಎಂದು ವಿವರಿಸಲಾಯಿತು.
ಅಚ್ಚುಕಟ್ಟು ಉದ್ದೇಶಗಳನ್ನು ಕಾರ್ಯಗತಗೊಳಿಸಲು ಕೈಗೊಳ್ಳುವ ಪ್ರಮುಖ ಕಾಮಗಾರಿಗಳಾದ ಹೊಲಗಾಲುವೆ (Field Irrigation Canal) ಪ್ರತಿಯೊಂದು ಜಮೀನಿಗು ನೀರನ್ನು ಸಮನಾಗಿ ಮತ್ತು ಸಮಯಕ್ಕೆ ಸರಿಯಾಗಿ ಹರಿಸುವುದಕ್ಕಾಗಿ ಹಾಗೂ ಅಚ್ಚುಕಟ್ಟು ಪ್ರದೇಶದ ಕಟ್ಟಕಡೆಯ ಜಮೀನಿಗೂ ನೀರನ್ನು ಹರಿಸುವುದಾಕ್ಕಾಗಿ ಬಳಸಿಕೊಳ್ಳಲಾಗುವುದು, ಬಸಿಗಾಲುವೆ (Field Drain) ನೀರಾವರಿಯಿಂದ ಉಂಟಾಗುವ ಬಸಿನೀರನ್ನು ಬೆಳೆಯ ಹಿತದೃಷ್ಟಿಯಿಂದ ಹೊರಹಾಕಬೇಕಾದ ಕಾಮಗಾರಿ, ಆಯಾಕಟ್ಟು ರಸ್ತೆ (Ayacut Road) ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸುಗಮವಾಗಿ ಸಾಗಿಸಲು, ಭೂ ಸುಧಾರಣಾ ಕಾರ್ಯಕ್ರಮ (ಅಂತರ್ಗತ ಬಸಿಗಾಲುವೆ- Land Reclamation) ಹಾಗೂ ಸಹಕಾರ ಶಾಖೆಯ ಅಗತ್ಯ ಕಾಮಗಾರಿಗಳು “ನೀರು ನಿರ್ವಹಣೆಯಲ್ಲಿ ರೈತರ ಭಾಗವಹಿಸುವಿಕೆ” ಪರಿಕಲ್ಪನೆಯಲ್ಲಿ ಅನುಷ್ಠಾನದ ಅಂಗವಾಗಿ ನೀರು ಬಳಕೆದಾರರ ಸಹಕಾರ ಸಂಘಗಳ ಸ್ಥಾಪನೆ, ತರಬೇತಿ ಹಾಗೂ ಸಂಘಗಳ ನಿರ್ವಹಣಾ ಮಂಜೂರಾತಿ ವಿಚಾರಗಳ ಬಗ್ಗೆ ಸಂಸದರ ಗಮನಕ್ಕೆ ತರಲಾಯಿತು.
ಅಚ್ಚುಕಟ್ಟು ಭಾಗದಲ್ಲಿ ಸುಮಾರು 37,269 ಹೆಕ್ಟೇರ್ ನೀರಾವರಿ ಗ್ಯಾಪ್ ಇರುವುದನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಹೊಳಗಾಲುವೆ ಮಾಡಿದಲ್ಲಿ ಬಹುತೇಕ ಕ್ಷೇತ್ರ ನೀರಾವರಿ ಹೊಂದುವ ಸಾಧ್ಯತೆ ಇದೆ. ಇದರಲ್ಲಿ ಆದ್ಯತೆಯ ಮೇರೆಗೆ 9,600 ಹೆಕ್ಟೇರ್ ಪ್ರದೇಶಕ್ಕೆ ಹೊಳಗಾಲುವೆ ನಿರ್ಮಾಣ ಮಾಡಬೇಕಾಗಿದೆ ಜೊತೆಗೆ ಸುಮಾರು 1,562ಕಿ.ಮೀ ರಸ್ತೆಗಳ ಅಭಿವೃದ್ದಿ ಪಡಿಸಿ ಸರ್ವವೃತು ರಸ್ತೆಗಳನ್ನಾಗಿ ಮಾಡುವುದು ಅಗತ್ಯವಿದೆ ಇದರಲ್ಲಿ ಆದ್ಯತೆ ಮೇರೆಗೆ 525 ಕಿ.ಮೀ ರಸ್ತೆ ಸುಧಾರಣೆ ಆಗಬೇಕಿದೆ ಜೊತೆಗೆ 21,349 ಹೆಕ್ಟೇರ್ ಪ್ರದೇಶದಲ್ಲಿ ಸವಳು, ಜವಳು, ಕ್ಷಾರ ಭೂಮಿಯಲ್ಲಿ ಭೂ ಸುಧಾರಣಾ ಕಾರ್ಯಕ್ರಮ ಕೈಗೊಳ್ಳಬೇಕಾಗಿದ್ದು, ಆದ್ಯತೆ ಮೇರೆಗೆ 2,600 ಹೆಕ್ಟೇರ್ ಪ್ರದೇಶ ಅಭಿವೃದ್ದಿ ಪಡಿಸಬೇಕಾಗಿದೆ ಜೊತೆಗೆ ಬಸಿಗಾಲುವೆ ನಿರ್ಮಾಣ ಮಾಡಲು ಸುಮಾರು 7 ಕೋಟಿ ಅನುದಾನ ಅಗತ್ಯವಿದೆ ಹಾಗೂ ಚೆಕ್ ಡ್ಯಾಂ ನಿರ್ಮಾಣ ಮಾಡಲು ಸುಮಾರು 6 ಕೋಟಿ ಅನುದಾನ ಅವಶ್ಯಕತೆ ಇರುತ್ತದೆ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 472 ನೀರು ಬಳಕೆದಾರರ ಸಹಕಾರ ಸಂಘಗಳಿದ್ದು, ಸುಮಾರು 234 ಸಂಘಗಳು ಕಾರ್ಯನಿರತವಾಗಿದೆ, ಇವುಗಳ ವಾರ್ಷಿಕ ಕಾರ್ಯನುದಾನ ಹಂಚಿಕೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಸುಮಾರು ರೂ. 2 ಕೋಟಿ ಅನುದಾನ ಅವಶ್ಯಕತೆ ಇದೆ ಈ ಎಲ್ಲಾ ಯೋಜನೆಗಳು ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಯಾಗಿದ್ದು ಸರಿ ಸುಮಾರು 115ಕೋಟಿ ತುರ್ತು ಅಭಿವೃದ್ಧಿಗೆ ಅವಶ್ಯಕತೆ ಇದೇ ಎಂದು ಮಾನ್ಯರ ಅವಗಾಹನೆಗೆ ತರಲಾಯಿತು.
ನಂತರ ಮಾತನಾಡಿದ ಸಂಸದರು ಪವಿತ್ರ ರಾಮಯ್ಯ ಅವರ ಕೆಲಸ ಎಲ್ಲರಿಗೂ ಮಾದರಿ. ಅಧಿಕಾರ ವಹಿಸಿಕೊಂಡ ದಿನದಿಂದ ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಅಲಿಸುತ್ತಿರುವುದು, ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಪ್ರವಾಸ ಮಾಡುತ್ತಿರುವುದು ನಮಗೆ ಹೆಮ್ಮೆಯಾಗಿದೆ. ಕಾಡಾ ಪ್ರಾಧಿಕಾರವನ್ನು ಮಾದರಿಯಾಗಿ ಮಾಡಲು ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಜೊತೆಗೆ ನರೇಗಾ ಯೋಜನೆಯನ್ನು ಹೆಚ್ಚು ಬಳಸಿಕೊಂಡು ಕಾಲುವೆ ಸ್ವಚ್ಛ ಗೊಳಿಸಿದ್ದು ಉತ್ತಮ ನಡೆ ಎಂದು ಪ್ರಶಂಸಿಸಿದರು. ನಂತರ ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪವಿತ್ರ ರಾಮಯ್ಯ ಅವರು ಮಾತನಾಡಿ ಶ್ರೀರಾಮನಿಗೆ 62 ನೇ ವರ್ಷಕ್ಕೆ ಪಟ್ಟಾಭಿಷೇಕ ಆದಂತೆ ಈ ವಯಸ್ಸಿನಲ್ಲಿ ನನಗೆ ಸರ್ಕಾರಿ ಹುದ್ದೆ ಸಿಕ್ಕಿದೆ ಮುಖ್ಯಮಂತ್ರಿಗಳಿಗೆ ಹಾಗೂ ಸಂಸದರು ನನ್ನ ಹೋರಾಟವನ್ನು ಗುರುತಿಸಿ ಅಧ್ಯಕ್ಷರಾಗಿ ನೇಮಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಈ ಹಿಂದೆ ಎಸ್.ಎಮ್.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತ ಸಂಘದಲ್ಲಿದ್ದ ಸಮಯದಲ್ಲಿ ನೀರಿನ ನಿರ್ವಹಣೆಯಲ್ಲಿ ಏರುಪೇರು ಮಾಡಿದ್ದ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿ ಇದೇ ಕಛೇರಿಗೆ ಬೀಗ ಹಾಕಿದ್ದೆವು ಈಗ ಅಧ್ಯಕ್ಷ ಗಾದಿಯಲ್ಲಿ ಕುಳಿತು ರೈತರಿಗೆ ನೀರು ಕೊಡಲಿಲ್ಲ ಎಂದರೆ ಅಂದಿನ ಹೋರಾಟಕ್ಕೆ ಬೆಲೆ ಇರುವುದಿಲ್ಲ ಇದನ್ನು ಮನಗಂಡು ನಿರಂತರವಾಗಿ ಕೆಲಸ ಮಾಡಿದೆನು ಈ ಪರಿಶ್ರಮದಿಂದ ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ನೀರು ತಲುಪಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವುದು ರೈತ ಪರ ಹಾಗೂ ರೈತರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಸರ್ಕಾರವಾಗಿದ್ದು, ಸಂಸದರು ಪ್ರಸ್ತಾಪಿಸಿದಂತೆ ಬರುವ ದಿನಗಳಲ್ಲಿ ಅನುದಾನ ಖಂಡಿತ ನೀಡುತ್ತಾರೆ ಅಭಿವೃದ್ದಿಯ ಕೆಲಸಗಳು ಸರಾಗವಾಗಿ ನಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರು, ಆಡಳಿತಾಧಿಕಾರಿಗಳು, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಪುರುಷೋತ್ತಮ್, ಬಳ್ಳೇಕೆರೆ ಸಂತೋಷ್, ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post