ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾಕ್ಷೇತ್ರಕ್ಕೆ ಖಾಸಗಿ ಭಾಗವಹಿಸುವಿಕೆಯ ಮೊದಲ ಶಾಲೆಯಾಗಿ 1946ರಲ್ಲಿ ಪ್ರಾರಂಭಗೊಂಡ ನಗರದ ಪ್ರತಿಷ್ಟಿತ ರಾಷ್ಟ್ರೀಯ ಪ್ರೌಢಶಾಲೆಯು 75 ವರ್ಷಗಳ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.
ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಶಾಲೆಯನ್ನು ಶಿವಮೊಗ್ಗ ರೋಟರಿ ಕ್ಲಬ್ ಅಂತರಾಷ್ಟ್ರೀಯ ಅನುದಾನದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಆಧುನಿಕರಣಗೊಳಿಸಲಾಗಿದ್ದು, ನವೀಕೃತ ಶಾಲೆಯ ಲೋಕಾರ್ಪಣೆ ಕಾರ್ಯಕ್ರಮ ಜೂ.25ರ ಶುಕ್ರವಾರ ಬೆಳಿಗ್ಗೆ 8:30ಕ್ಕೆ ಶಾಲೆಯ ಆವರಣದಲ್ಲಿ ನಡೆಯಲಿದೆ.
ಶಾಲೆಯ ಕೊಠಡಿಗಳ ನವೀಕರಣ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಧುನಿಕ ಪೀಠೋಪಕರಣಗಳು, ಅತ್ಯಾಧುನಿಕ ಕಂಪ್ಯೂಟರ್ ಪ್ರಯೋಗ ಶಾಲೆ, ಆಧುನಿಕ ಸ್ಮಾರ್ಟ್‌ಕ್ಲಾಸ್‌ಗಳ ಜೋಡಣೆಯ ಜೊತೆಗೆ ಎಲ್ಲಾ ಆಧುನಿಕ ಉಪಕರಣಗಳ ಸಮರ್ಪಕ ಬಳಕೆ ಮತ್ತು ನಿರ್ವಹಣೆಗಾಗಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಗತ್ಯ ತರಬೇತಿ ನೀಡಲಾಗಿದೆ. ಇದು ಅಂತರಾಷ್ಟ್ರೀಯ ರೋಟರಿ ದತ್ತಿ ನಿಧಿ ಅಮೇರಿಕಾದ ವೆಸ್ಟ್‌ಸ್ಟ್ರಿಂಗ್ ಫೀಲ್ಡ್ ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಗ್ಲೋಬಲ್ ಗ್ರಾಂಟ್ ಕಾರ್ಯಕ್ರಮ. ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ಟ ಅವರು ಗ್ಲೋಬಲ್ ಗ್ರಾಂಟ್ ಕೊಡುಗೆ ಹಸ್ತಾಂತರಿಸಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್. ಅಶ್ವಥ ನಾರಾಯಣಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಕೊಡುಗೆಯನ್ನು ಸ್ವೀಕರಿಸಲಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಹೆಚ್.ಎಸ್. ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post