ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಸಿಗಂದೂರು ಲಾಂಚ್ ನಿಂದ ಶರಾವತಿ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಇಂದು ನಡೆದಿದೆ.
ರೇಣುಕಾ ಎಂಬ ಹಾವೇರಿ ಜಿಲ್ಲೆಯ ಮಹಿಳೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನವನ್ನು ಪಡೆದು, ಹಿಂತಿರುಗಿ ಬರುವಾಗ ಹೊಳೆಯ ಮಧ್ಯಭಾಗದಲ್ಲಿ ನೀರಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಲಾಂಚ್ ನ ಸಿಬ್ಬಂದಿಗಳು ಹಾಗೂ ಸ್ಥಳೀಯರು ತಕ್ಷಣವೇ ಸೇಫ್ಟಿ ಟ್ಯೂಬ್ ಬಳಸಿ ಮಹಿಳೆಯನ್ನ ರಕ್ಷಿಸಿದ್ದಾರೆ. ಲಾಂಚಿನಲ್ಲಿ ಅವರಿಗೆ ಪ್ರಾರ್ಥಮಿಕ ಆರೈಕೆಯನ್ನು ಮಾಡಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೇಗಿತ್ತು ರೋಚಕ ಕಾರ್ಯಾಚರಣೆ
ಮಹಿಳೆ ನೀರಿಗೆ ಬೀಳುತ್ತಿದ್ದಂತೆ ಲಾಂಚ್‌ನಲ್ಲಿದ್ದ ಸ್ಥಳೀಯರಾದ ಪ್ರಕಾಶ್ ಎನ್ನುವವರು ತಮ್ಮ ಜೀವದ ಹಂಗು ತೊರೆದು ನೀರಿಗೆ ಧುಮುಕಿದರು.
ಇದೇವೇಳೆ ಸಿಗಂಧೂರು ಸುಧಾಕರ್, ಲಾಂಚ್ ಸಿಬ್ಬಂದಿಗಳಾದ ಗಜಕೋಶ, ಮಂಜುನಾಥ, ಬಲರಾಮ, ಜಗದೀಶ್ ಸೇರಿದಂತೆ ಹಲವರು ತತಕ್ಷಣ ಕಾರ್ಯಪ್ರವೃತ್ತರಾಗಿ ಸೇಫ್ಟೀ ಟ್ಯೂಬ್‌ಗಳನ್ನು ಪ್ರಕಾಶ್ ಅವರ ಬಳಿ ಎಸೆದಿದ್ದಾರೆ. ಅಲ್ಲದೆ, ತತಕ್ಷಣವೇ ಲಾಂಚನ್ನು ಮಹಿಳೆ ಹಾಗೂ ಪ್ರಕಾಶ್ ಅವರು ತೇಲುತ್ತಿದ್ದ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.
ಪ್ರಕಾಶ್ ಅವರ ಸಮಯ ಪ್ರಜ್ಞೆ ಹಾಗೂ ದಿಟ್ಟತನದಿಂದ ಮಹಿಳೆಯನ್ನು ರಕ್ಷಣೆ ಮಾಡಲಾಯಿತು. ನಿರಂತರ ಮಳೆಯಿಂದಾಗಿ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಎರಡು ದಡದ ನಡುವಿನ ಪ್ರದೇಶ ಇದಾಗಿದ್ದರಿಂದ ಆಳವೂ ಹೆಚ್ಚಾಗಿದೆ. ಇಂತಹ ಪ್ರದೇಶದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ನೀರಿಗೆ ಧುಮುಕಿ ಮಹಿಳೆಯನ್ನು ರಕ್ಷಿಸಿದ ಪ್ರಕಾಶ್ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನು ಕಲ್ಪ ಮೀಡಿಯಾ ಹೌಸ್ ಪ್ರಶಂಶಿಸುತ್ತಿದೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post