ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪುರಲೆ ಗ್ರಾಮದಲ್ಲಿ ಎಸ್.ಬಿ.ಆರ್. ತಾಂತ್ರಿಕತೆ 5.13 ಎಂ.ಎಲ್.ಡಿ. ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಇಂದು ಮೇಯರ್ ಸುನಿತಾ ಅಣ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಲೆ ಗ್ರಾಮದಲ್ಲಿ 2.36 ಎಕರೆ ಜಾಗದಲ್ಲಿ ಸುಸಜ್ಜಿತ, ಅತ್ಯಾಧುನಿಕ ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸಲು ಸಿದ್ಧವಾಗಿದ್ದು, ಪ್ರಾಯೋಗಿಕ ಹಂತದಲ್ಲಿದೆ. ಗುರುಪುರದಲ್ಲಿ ಈಗಾಗಲೇ ವೆಟ್ ವೆಲ್ ನಿರ್ಮಾಣವಾಗಿದ್ದು, ಪಂಪಿಂಗ್ ಯಂತ್ರ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
2036 ರ ವರೆಗೆ ತುಂಗಾ ನದಿ ಬಲಭಾಗದ 1.86 ಲಕ್ಷ ಜನ ಸಂಖ್ಯೆ ದೃಷ್ಠಿಯಲ್ಲಿಟ್ಟುಕೊಂಡು ಅಮೃತ್ ಯೋಜನೆಯಡಿಯಲ್ಲಿ 8.41 ಕೋಟಿ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. ಈ ಭಾಗದ ಮಲಿನ ನೀರು ವಿವಿಧ ಹಂತಗಳಲ್ಲಿ ಈ ಘಟಕದಲ್ಲಿ ಶುದ್ಧೀಕರಣಗೊಂಡು ಬಳಿಕ ಇಲ್ಲೇ ಸ್ಥಾಪಿಸಲಾದ ಅತ್ಯಾಧುನಿಕ ಲ್ಯಾಬ್ ನಲ್ಲಿ ಪರೀಕ್ಷೆಗೊಳಪಡಿಸಿ ಕಾಲುವೆ ಮೂಲಕ ತುಂಗಾ ನದಿಗೆ ಬಿಡಲಾಗುವುದು. ಆಗಸ್ಟ್ ನಂತರ ಪೂರ್ಣ ಪ್ರಮಾಣದಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಈಗಾಗಲೇ ಇನ್ನೊಂದು ಘಟಕ ತ್ಯಾವರಚಟ್ನಹಳ್ಳಿ 11 ಕೋಟಿ ರೂ. ವೆಚ್ಚದಲ್ಲಿ 11 ವರ್ಚದ ಹಿಂದೆ ನಿರ್ಮಾಣಗೊಂಡಿದ್ದು, ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. 35.58 ಎಂ.ಎಲ್.ಡಿ. ಸಾಮರ್ಥ್ಯದ ಈ ಮಲಿನ ನೀರು ಶುದ್ಧೀಕರಣ ಘಟಕ ಕೂಡ ಮುಂದಿನ ದಿನಗಳಲ್ಲಿ ಇನ್ನೂ ಆಧುನೀಕರಣಗೊಳಿಸಲಾಗುವುದು. ಮೂರನೇ ಹಂತದ ಒಳಚರಂಡಿ ಯೋಜನೆಯಡಿಯಲ್ಲಿ 2008 ರಲ್ಲಿ ಪೈಪ್ ಲೈನ್ ಸೇರಿ ಒಟ್ಟು 61.80 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗಿತ್ತು ಎಂದರು.
ಪ್ರಸ್ತುತ ಅಲ್ಲಿ ಲ್ಯಾಬ್ ವ್ಯವಸ್ಥೆ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶುದ್ಧಿಕೃತ ನೀರಿನ ಗುಣಮಟ್ಟ ಪರೀಕ್ಷಿಸಿದ ಬಳಿಕವಷ್ಟೇ ನದಿಗೆ ಬಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಅತ್ಯಾಧುನಿಕ ಲ್ಯಾಬ್ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಪ ಮೇಯರ್ ಶಂಕರ್ ಗನ್ನಿ, ಪ್ರಮುಖರಾದ ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಶಿವಕುಮಾರ್, ಯಮುನಾ ರಂಗೇಗೌಡ, ಕಾರ್ಯಪಾಲಕ ಅಭಿಯಂತರ ಎಸ್. ರಮೇಶ್, ಎಇಇ ಜಯಪ್ರಕಾಶ್, ಎಇ ಮಿಥುನ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post