ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಗಾಜಿನ ಛಾವಣಿಯನ್ನು ಹೊಂದಿರುವ ಬೋಗಿಗಳ ಮೂಲಕ ನಿಸರ್ಗದ ಸೌಂದರ್ಯ ಸವಿಯುವ ಅವಕಾಶ ಒದಗಿಸಲು ನೈಋತ್ಯ ರೈಲ್ವೆ ಮುಂದಾಗಿದ್ದು, ರೈಲು ಬೋಗಿಗಳಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗಿದೆ.
ಯಶವಂತಪುರ-ಮಂಗಳೂರು ವಿಶೇಷ ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗಿದ್ದು, ಈಗಾಗಲೇ ಈ ರೈಲಿನಲ್ಲಿ ಪ್ರಯಾಣಿಸಲು ಬುಕ್ಕಿಂಗ್ ಆರಂಭವಾಗಿದೆ. ಜುಲೈ 11ರಿಂದ ರೈಲಿನಲ್ಲಿ ವಿಸ್ಟಾಡಾಮ್ ಕೋಚ್ ಇರಲಿದೆ.
ಕರಾವಳಿ ಭಾಗದಲ್ಲಿ ಸಂಚಾರ ನಡೆಸುವ ೩ ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿ ತೆಗೆದು ತಲಾ 2 ವಿಸ್ಟಾಡಾಮ್ ಕೋಚ್ ಬೋಗಿ ಅಳವಡಿಕೆ ಮಾಡಲಾಗುತ್ತದೆ. ಬೆಂಗಳೂರು ನಗರ ಮತ್ತು ಕರಾವಳಿಯನ್ನು ಸಂಪರ್ಕಿಸುವ ಈ ರೈಲು ಪಶ್ಚಿಮ ಘಟ್ಟದ ಮೂಲಕ ಸಾಗುತ್ತದೆ.
ಬೆಂಗಳೂರು-ಮಂಗಳೂರು ರೈಲು ಸಾಗುವ ಮಾರ್ಗದಲ್ಲಿ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಪಶ್ಚಿಮ ಘಟ್ಟದ ಹಸಿರು ಸೌಂದರ್ಯವನ್ನು ವಿಸ್ಟಾಡಾಮ್ ಕೋಚ್ ಮೂಲಕ ಜನರು ಸವಿಯಬಹುದಾಗಿದೆ.
ಮಳೆಗಾಲವೂ ಆಗಿರುವುದರಿಂದ ಪಶ್ಚಿಮ ಘಟ್ಟದ ಸೌಂದರ್ಯ ಇಮ್ಮಡಿಯಾಗಿದ್ದು, ದಟ್ಟವಾದ ಅರಣ್ಯ, ಅಲ್ಲಲ್ಲಿ ಕಾಣ ಸಿಗುವ ಜಲಪಾತ, ರೈಲು ಸುರಂಗ ಮಾರ್ಗ, ಶಿರಾಡಿ ಘಾಟ್‌ನ ಸೌಂದರ್ಯವನ್ನು ಜನರು ರೈಲಿನಲ್ಲಿಯೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ.
ರೈಲುಗಳ ವಿವರ:
ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಯಶವಂತಪುರ-ಕಾರವಾರ (06211/ 06212) ರೈಲು, ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು (06575/06576) ರೈಲು, ಯಶವಂತಪುರ-ಮಂಗಳೂರು (06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ (06540) ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗುತ್ತದೆ.
ವಿಸ್ಟಾಡಾಮ್ ಕೋಚ್ ದರ ಪಟ್ಟಿ:
ಯಶವಂತಪುರ-ಮಂಗಳೂರು ಜಂಕ್ಷನ್ – 1395 ರೂ.
ಹಾಸನ-ಮಂಗಳೂರು ಜಂಕ್ಷನ್ – 960 ರೂ.
ಹಾಸನ-ಸುಬ್ರಮಣ್ಯ ರಸ್ತೆ – 725 ರೂ.
ಸಕಲೇಶಪುರ – ಸುಬ್ರಮಣ್ಯ ರಸ್ತೆ – 625 ರೂ.
ಯಶವಂತಪುರ – ಸುಬ್ರಮಣ್ಯ ರಸ್ತೆ – 1175 ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post