ಶಿವಮೊಗ್ಗ: ರಾಜೀಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮ ಆಗಸ್ಟ್ 14 ರ ಎರಡನೇ ಶನಿವಾರ ಜಿಲ್ಲೆಯಲ್ಲಿ ನಡೆಯಲಿದ್ದು ಪಕ್ಷಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ‘ಲೋಕ ಅದಾಲತ್’ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಇವರ ನಿರ್ದೇಶನದ ಮೇರೆಗೆ ಆಗಸ್ಟ್ 14 ರ ಎರಡನೇ ಶನಿವಾರದಂದು ಜಿಲ್ಲೆಯಲ್ಲಿ ಬೃಹತ್ ಲೋಕ್ ಅದಾಲತ್ ನಡೆಯಲಿದೆ ಎಂದರು.
ಈ ಲೋಕ್ ಅದಾಲತ್‍ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‍ಬೌನ್ಸ್ ಪ್ರಕರಣಗಳು ಸೇರಿದಂತೆ ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಈ ಬಾರಿ ಮೋಟಾರು ಪರಿಹಾರ ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ.
ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ವಿನೀತ ಶರ್ಮ ವಿರುದ್ಧ ರಾಕೇಶ್ ಶರ್ಮ, ಮತ್ತು ಇತರರು ಪ್ರಕರಣದಲ್ಲಿ ದಿನಾಂಕ 11.08.2020 ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲಿದ್ದು, ವಿಭಜನಾ ಪ್ರಕರಣಗಳನ್ನು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ, ಈ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು ಎಂದರು.
ವಾಜ್ಯ ಪೂರ್ವ ಮತ್ತು ರಾಜೀ ಪ್ರಕರಣಗಳ ಶೀಘ್ರ ಇತ್ಯರ್ಥ:
ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು. ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು. ಅಂತಹ ಅವಾರ್ಡ್ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ರಿ ಇದ್ದಂತೆ ಆಗುತ್ತಿದ್ದು, ಅಂತಹ ಅವಾರ್ಡ್‍ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್‍ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ ನ್ಯಾಯದಾನವಾಗುತ್ತದೆ. ಆದ್ದರಿಂದ ಜನತೆ ಇಂತಹ ಪ್ರಕ್ರಿಯೆಯ ಉಪಯೋಗವನ್ನು ಪಡೆಯಬೇಕೆಂದು ಕೋರುತ್ತೇನೆ. ಕೋವಿಡ್ ಹಿನ್ನೆಲೆಯಲ್ಲಿ ಪಕ್ಷಗಾರರು ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಮೂಲಕ ಹಾಗೂ ನ್ಯಾಯಾಲಯಕ್ಕೆ ಕೂಡ ಹಾಜರಾಗಿ ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
2223 ಪ್ರಕರಣ ಇತ್ಯರ್ಥದ ಗುರಿ :
ದಿನಾಂಕ 01.07.2021 ರವರೆಗೆ ನಮ್ಮ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿನ ಬಾಕಿ ಇರುವ ಪ್ರಕರಣಗಳ ಒಟ್ಟು ಸಂಖ್ಯೆ 50,295 ಇವೆ. ಅವುಗಳ ಪೈಕಿ ಜುಲೈ 16 ರವರೆಗೆ 9,939 ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣಗಳಾಗಿದ್ದು ಇವುಗಳ ಪೈಕಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ವತಿಯಿಂದ ಒಟ್ಟು 2,223 ಪ್ರಕರಣಗಳನ್ನು ಆಗಸ್ಟ್ 14 ರಂದು ನಡೆಯಲಿರುವ ಬೃಹತ್ ಲೋಕ್ ಅದಾಲತ್‍ಗಾಗಿ ಗುರುತಿಸಲಾಗಿರುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ರಾಜೀಸಂಧಾನಕ್ಕಾಗಿ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲೂ ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಗೌರವಾನ್ವಿತ ಪ್ರಾಧಿಕಾರ, ಬೆಂಗಳೂರು, ಇವರ ನಿರ್ದೇಶನದ ಮೇರೆಗೆ ದಿನಾಂಕ 27.03.2021 ರಂದು ಬೃಹತ್ ಲೋಕ್ ಅದಾಲತ್ತನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ನ್ಯಾಯವಾದಿಗಳು, ವಿಮೆ ಕಂಪನಿಯ ಅಧಿಕಾರಿಗಳು, ಪ್ಯಾನಲ್ ವಕೀಲರುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ಒಟ್ಟು 17,673 ಪ್ರಕರಣಗಳನ್ನು ಗುರುತಿಸಿ ಅವುಗಳ ಪೈಕಿ 13,214 ಪ್ರಕರಣ ವಿಲೇವಾಗೊಂಡಿರುತ್ತವೆ.
ಕಾನೂನು ನೆರವಿಗೆ ಸೇವಾ ಕೇಂದ್ರ :
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾಲಕಾಲಕ್ಕೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ ಎಲ್ಲಾ ವರ್ಗದ ಜನರಿಗೆ ಸಂಬಂಧಪಟ್ಟಂತಹ ಕಾನೂನುಗಳ ಅರಿವು ಮೂಡಿಸುವುದು ಮತ್ತು ಅವಶ್ಯಕ ವ್ಯಕ್ತಿಗಳಿಗೆ ನೆರವು ನೀಡುವ ಪ್ರಕ್ರಿಯ ನಿರಂತರವಾಗಿ ಜಾರಿಯಲ್ಲಿದೆ. ಈ ರೀತಿ ಕಾನೂನು ಅರಿವು ಮತ್ತು ನೆರವು ನೀಡುವ ನಿಟ್ಟಿನಲ್ಲಿ ನಮ್ಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಫ್ರಂಟ್ ಆಫೀಸ್ ಕ್ಲಿನಿಕ್, ಕಾನೂನು ಸೇವೆಗಳ ಕ್ಲಿನಿಕ್, ತಾಲ್ಲೂಕು ಆಫೀಸ್ ಕ್ಲಿನಿಕ್, ಸಿಡಿಪಿಓ ಕ್ಲಿನಿಕ್, ಜೆಜೆಬಿ ಕ್ಲಿನಿಕ್, ಜೈಲು ಕ್ಲಿನಿಕ್ ಆರ್‍ಟಿಓ ಕ್ಲಿನಿಕ್ ಎಂಬುದಾಗಿ ಕಾನೂನು ಸೇವಾ ಕೇಂದ್ರಗಳನ್ನು ರಚಿಸಲಾಗಿ ಆಯಾ ಕ್ಲಿನಿಕ್‍ಗಳಲ್ಲಿ ಒಬ್ಬೊಬ್ಬ ಪ್ಯಾನಲ್ ನ್ಯಾಯವಾದಿಗಳನ್ನು ನಿಯೋಜಿಸಲಾಗಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011 ರ ಪ್ರಕಾರ ಮೊತ್ತೊಬ್ಬರ ಅಪರಾಧಿಕ ಕೃತ್ಯದಿಂದ ಮರಣ ಉಂಟಾಗಿ, ಇಲ್ಲವೇ ಅತ್ಯಾಚಾರಕ್ಕೊಳಗಾಗಿ, ಇಲ್ಲವೇ ಆ್ಯಸಿಡ್ ದಾಳಿಗೆ ತುತ್ತಾದವರಿಗೆ ಅಥವಾ ಇನ್ನಿತರ ಯಾವುದೇ ರೀತಿಯಿಂದ ಗಾಯಗೊಂಡ ನೊಂದ ವ್ಯಕ್ತಿಗಳಿಗೆ ಪರಿಹಾರ ಕೊಡುವಂತಹ ವಿಚಾರಣಾ ಪ್ರಕ್ರಿಯೆ ನಡೆಯುತ್ತದೆ. 2014 ರಿಂದ ಇಲ್ಲಿಯವರೆಗೆ 299 ಪ್ರಕರಣಗಳು ದಾಖಲಾಗಿದ್ದು 297 ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಿದ್ದೇವೆ. ಇಲ್ಲಿಯವರೆಗೂ ಒಟ್ಟು 175 ಪ್ರಕರಣಗಳಲ್ಲಿ ಒಟ್ಟು 4,31,77,500ರೂ.ಗಳನ್ನು ಬಿಡುಗಡೆ ಮಾಡಿ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಿದ್ದೇವೆ. ಇಂತಹ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ನೊಂದ ವ್ಯಕ್ತಿಗಳು ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆಯಬಹುದು ಎಂದು ಮಾಹಿತಿ ನೀಡಿದ ಅವರು ರಾಜೀಯಾಗಬಲ್ಲ ಎಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸಾರ್ವಜನಿಕರು ಆ.14 ರಂದು ಲೋಕ್ ಅದಾಲತ್‍ನಲ್ಲಿ ಪಾಲ್ಗೊಂಡು ಶೀಘ್ರ ಮತ್ತು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post