ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ಹಾಗೂ ಇಂದು ಲೋಕಾರ್ಪಣೆ ಮಾಡಲಾದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಟಾದಲ್ಲಿ ವರ್ಚುವಲ್ ವೇದಿಕೆ ಮೂಲಕ ಜಿಲ್ಲೆಯ ಸುಮಾರು 1074 ಕೋಟಿ ರೂ. ವೆಚ್ಚದ ವಿವಿಧ ಯೋಜನೆ ಕಾಮಗಾರಿಗಳ ಉದ್ಘಾಟನೆ ಮತ್ತು 560 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ರೈತರ ಹೊಲಗಳಿಗೆ ನೀರುಣಿಸುವ ಹಲವು ನೀರಾವರಿ ಯೋಜನೆಗಳನ್ನು ಕಳೆದ ಎರಡು ವರ್ಷಗಳ ಅವಧಿಯಲ್ಲ್ಲಿ ಅನುಷ್ಟಾನಗೊಳಿಸಲಾಗಿದೆ. ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗಳಿಗೆ ದಾಖಲೆ ಪ್ರಮಾಣದ ಅನುದಾನವನ್ನು ಒದಗಿಸಲಾಗಿದೆ. ಈ ನೀರಾವರಿ ಯೋಜನೆಗಳು ಭವಿಷ್ಯದಲ್ಲಿ ಜಿಲ್ಲೆಯ ರೈತರ ಆರ್ಥಿಕ ಚಿತ್ರಣವನ್ನೇ ಬದಲಾಯಿಸುವ ವಿಶ್ವಾಸವಿದೆ ಎಂದರು.
ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ 384 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾiಗಾರಿ ಈಗಾಗಲೇ ಆರಂಭಗೊಂಡಿದ್ದು, ಮುಂದಿನ ಏಪ್ರಿಲ್ ಮಾಹೆ ವೇಳೆಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಇಲ್ಲಿ ಏರ್‌ಬಸ್ ಮಾದರಿಯ ವಿಮಾನಗಳು ಇಳಿಯಲು ಸಾಧ್ಯವಾಗುವಂತೆ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ನೆರೆಯ ಜಿಲ್ಲೆಗಳ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮಕಾರಿ ಬದಲಾವಣೆಯಾಗುವ ನಿರೀಕ್ಷೆ ತಮಗಿದೆ. ಇದೀಗ 258 ಕೋಟಿ ರೂ.ಗಳ ವೆಚ್ಚದ ಟರ್ಮಿನಲ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದವರು ತಿಳಿಸಿದರು.
ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಶಿಕಾರಿಪುರ ತಾಲೂಕಿನ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಗಳ 249 ಕೆರೆಗಳಿಗೆ ಹಾಗೂ ಹಿರೇಕೆರೂರು ತಾಲೂಕಿನ 6 ಕೆರೆಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು 850 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಕಸಬಾ ಹೋಬಳಿ ಮತ್ತು ಅಂಜನಾಪುರ ಹೋಬಳಿಯ ಹೊಸಹಳ್ಳಿ ಏತ ನೀರವಾರಿ ಕಾಮಗಾರಿಗಳನ್ನು ಸಹ ಎರಡು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು. ಈ ಯೋಜನೆಗಳು ಭವಿಷ್ಯದಲ್ಲಿ ಜಿಲ್ಲೆಯ ರೈತರ ಆರ್ಥಿಕ ಚಿತ್ರಣವನ್ನೇ ಬದಲಾಯಿಸುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.
ಜೋಗ ಜಲಪಾತ ವೀಕ್ಷಣೆಯನ್ನು ಸ್ಮರಣೀಯವಾಗಿಸಲು ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ 185 ಕೋಟ ರೂಪಾಯಿ ವೆಚ್ಚದಲ್ಲಿ ಒಟ್ಟು 24 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸುಂದರ ಪ್ರವೇಶದ್ವಾರ, ಶರಾವತಿ ವಿಗ್ರಹ, ಮೂರು ಅಟ್ಟಣಿಗೆಯ ವೀಕ್ಷಣಾ ಗ್ಯಾಲರಿ, ಪಾಕಿರ್ಂಗ್, ಉಪಹಾರ ಗೃಹ, ವಿಶ್ರಾಂತಿ ಕೊಠಡಿ, ಬೋಟಿಂಗ್, ಜಲಕ್ರೀಡೆ, ಜಲಪಾತವನ್ನು ಸನಿಹದಿಂದ ನೋಡುವ ಅವಕಾಶ ಕಲ್ಪಿಸುವ ರೋಪ್ ವೇ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಹಾಗೂ ಸಕ್ಕರೆಬೈಲಿನ ಆನೆ ಬಿಡಾರ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಎಂದರು.
ಶಿವಮೊಗ್ಗ ನಗರದ ಸರ್ವತೋಮುಖ ಅಭಿವೃದ್ಧಿಗೂ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 46 ಎಕರೆ ವಿಶಾಲ ಪ್ರದೇಶದಲ್ಲಿ ಇರುವ ಶಿವಮೊಗ್ಗದ ಹಳೇ ಜೈಲು ಪ್ರದೇಶ ಈಗ ಫ್ರೀಡಂ ಪಾರ್ಕ್ ಆಗಿದೆ. ಒಟ್ಟು 5.35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ಫ್ರೀಡಂಪಾರ್ಕ್ ಕಾಂಪೌಂಡ್‌ಗಳಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯ ಹಾಗೂ ಇತಿಹಾಸ ಬಿಂಬಿಸುವ ಮ್ಯೂರಲ್ ಆರ್ಟ್ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. 482.84 ಕೋಟಿ ರೂ.ವೆಚ್ಚದ ಸಿಗಂಧೂರು ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಪ್ರಕೃತಿ ವಿಕೋಪ, ಕೊರೋನ ಸೋಂಕಿನಂತಹ ಸಂದಿಗ್ಧ ಸಂದರ್ಭಗಳಲ್ಲಿಯೂ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ನಿಲ್ಲದಂತೆ ಮುಂದುವರೆದಿವೆ. ಮತ್ತೆ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ನಿನ್ನೆ ಶಿವಮೊಗ್ಗ ಸೇರಿದಂತೆ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಜನರ ರಕ್ಷಣೆ, ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಅಗತ್ಯ ಸಹಕಾರ ನೀಡಿವೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಹಸ್ರಾರು ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದರಿಂದಾಗಿ ಜಿಲ್ಲೆಯ ಹಾಗೂ ನೆರೆ ಜಿಲ್ಲೆಯ 500ಕ್ಕೂ ಹೆಚ್ಚಿನ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ ಎಂದರು.
ಸಾಗರ ತಾಲೂಕಿನ ಇರುವಕ್ಕಿಯಲ್ಲಿ 155ಕೋಟಿ ರೂ.ಗಳ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮರ್ಥ್ಯದಿಂದ 1000 ಹಾಸಿಗೆಗಳ ಸಾಮಥ್ಯಕ್ಕೆ ವಿಸ್ತರಿಸಲಾಗಿದೆ. ಅದಕ್ಕೆ ಪೂರಕವಾಗಿ ಸಲಕರಣೆ ಹಾಗೂ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಕೋರೋನದಂತ ಸೋಂಕಿನ ನಿಯಂತ್ರಣದಲ್ಲಿ ಸಹಕಾರಿಯಾಯಿತು ಎಂದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ಯಾತ್‌ಲ್ಯಾಬ್ ಹಾಗೂ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಮಾದರಿಯಲ್ಲಿ 50ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಲು ಕ್ರಮ ವಹಿಸಲಾಗಿದೆ ಎಂದರು.
ಪ್ರವಾಸೋದ್ಯಮ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದು, 205.89ಕೋಟಿ ರೂ.ಗಳ ವೆಚ್ಚದಲ್ಲಿ ವಿಶ್ವವಿಖ್ಯಾತ ಜೋಗದ ಜಲಪಾತ ಹಾಗೂ ಸಕ್ರೆಬೈಲಿನ ಆನೆಬಿಡಾರವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಈಗಾಗಲೆ ಚಾಲನೆ ನೀಡಲಾಗಿದೆ. ನಗರದಲ್ಲಿ ನೌಕರರ ಭವನ, ಮಲವಗೊಪ್ಪದಲ್ಲಿ ಮೋಟಾರು ವಾಹನ ಚಾಲನ ಟ್ರ್ಯಾಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಎಂದ ಅವರು ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಉತ್ತೇಜನ ನೀಡಲಾಗಿದೆ. ಕೈಗಾರಿಕೋದ್ಯಮಿಗಳು ಸಕಾಲದಲ್ಲಿ ಆಗಮಿಸಿ, ಹಿಂದಿರುಗಲು ಅನುಕೂಲವಾಗುವಂತೆ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತಾಗಲು ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಹಕಾರ, ಅನುಷ್ಠಾನ ಕಾರ್ಯದಲ್ಲಿ ಅಧಿಕಾರಿ-ಸಿಬ್ಬಂಧಿಗಳ ಪಾತ್ರ ಪ್ರಧಾನವಾದುದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಜಿಲ್ಲೆಯ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಅತ್ಯಲ್ಪ ಅವಧಿಯಲ್ಲಿ ಮಿಂಚಿನ ವೇಗದಲ್ಲಿ ನಡೆದಿವೆ. ವಿಶೇಷವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸುಮಾರು 10,000 ಕೋಟಿಗಳಿಗೂ ಹೆಚ್ಚಿನ ಅನುದಾನವನ್ನು ತಂದು ಕೃಷಿ, ನೀರಾವರಿ, ಆರೋಗ್ಯ, ರೈಲು, ರಸ್ತೆ, ಸೇತುವೆ, ವಿಮಾನ ನಿಲ್ದಾಣ, ಕೈಗಾರಿಕೆ, ಕುಡಿಯುವ ನೀರು, ಪ್ರವಾಸೋದ್ಯಮ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆ ಅಸಾಮಾನ್ಯವಾದುದಾಗಿದ್ದು, ಅದಕ್ಕಾಗಿ ಶ್ರಮಿಸಿದ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನಾರ್ಹರು ಎಂದರು.
ರಾಜ್ಯದ ಬಹುತೇಕ ಎಲ್ಲೆಡೆ ಈ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸರ್ಕಾರವೂ ಕೂಡ ಜನರ ಹೋರಾಟಗಳಿಗೆ ಅವಕಾಶವಿಲ್ಲದಂತೆ ಜನರ ಆಶಯಗಳನ್ನು ಪೂರೈಸುವಲ್ಲಿ ಸಕ್ರಿಯವಾಗಿದೆ ಎಂದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್ ಹೋಸ್ಟಿಂಗ್ ಮೂಲಕ ನಡೆದ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರಸಾರಗೊಂಡ ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಶಾಸಕರಾದ ಹರತಾಳು ಹಾಲಪ್ಪ, ಆರಗಜ್ಞಾನೇಂದ್ರ, ಎಸ್.ಕುಮಾರ್ ಬಂಗಾರಪ್ಪ, ಬಿ.ಕೆ.ಸಂಗಮೇಶ್ವರ, ಕೆ.ಬಿ.ಅಶೋಕನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್, ರುದ್ರೇಗೌಡ, ಆಯನೂರು ಮಂಜುನಾಥ್, ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ನಿಗಮ-ಮಂಡಳಿಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲೆಯ ವಿವಿಧ ಮಠಾಧೀಶರುಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಮನ್ವಯ ತಂಡದ ಸದಸ್ಯರ ನಾಡಗೀತೆ ಹಾಗೂ ರೈತಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post